ಅಂತರಾಷ್ಟ್ರೀಯ

ಕೆನಡಾದ ಪ್ರಧಾನಿ ಮಡದಿಗೆ ಕೊರೊನಾ ಸೋಂಕು

Pinterest LinkedIn Tumblr


ಟೊರಾಂಟೋ: ಕೆನಡಾದ ಸಂಸತ್‌ ಸ್ಥಗಿತಗೊಳಿಸಿ, ಪ್ರಧಾನಿ ಜಸ್ಟಿನ್‌ ಟ್ರಾಡೋ ಅವರು ತಮ್ಮ ಮನೆಯಿಂದಲೇ ಆಡಳಿತ ನಡೆಸುತ್ತಿದ್ದಾರೆ. ಹೊರ ದೇಶಗಳ ಪ್ರಯಾಣದಿಂದ ದೂರವಿರಿ ಎಂದು ಸಲಹೆ ನೀಡಿದ್ದಾರೆ. ಪತ್ನಿಗೆ ಕರೊನಾ ಸೋಂಕು ಇರುವ ಕಾರಣ ಜಸ್ಟಿನ್‌ ಅವರು ಯಾರೊಂದಿಗೂ ಸಂಪರ್ಕ ಹೊಂದುತ್ತಿಲ್ಲ.

ಯಾರೂ ಹ್ಯಾಂಡ್‌ಶೇಕ್‌ ಮತ್ತು ಚುಂಬನಗಳಿಂದ (ಕಿಸ್‌) ದೂರವಿರಬೇಕು ಎಂದು ಇಲ್ಲಿನ ಸಾರ್ವಜನಿಕ ಆರೋಗ್ಯ ಮುಖ್ಯಾಧಿಕಾರಿ ಡಾ.ತೇರೆಸಾ ಕೂಡಾ ಸಲಹೆ ನೀಡಿದ್ದಾರೆ. ಸಂಗೀತ ಕಚೇರಿ ಸೇರಿದಂತೆ ದೊಡ್ಡ ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ಕೆನಡಾ ಸರಕಾರ ಸೂಚಿಸಿದೆ. ಅಷ್ಟೇ ಅಲ್ಲದೆ, 500ಕ್ಕೂ ಕ್ರೂಸ್‌ ಹಡಗುಗಳ ಸಂಚಾರ ಜುಲೈ 1ರವರೆಗೂ ಬಂದ್‌ ಮಾಡಲಾಗಿದೆ ಎಂದು ಸಾರಿಗೆ ಸಚಿವ ಮಾರ್ಕ್‌ ಗಾರ್ನಿಯೋ ಹೇಳಿದ್ದಾರೆ.

ವಿಮಾನಗಳ ನಿರ್ಬಂಧನ
ಕೆನಡಾಕ್ಕೆ ಹಿಂದಿರುಗುವ ಸಾಗರೋತ್ತರ ವಿಮಾನಗಳನ್ನು ನಿರ್ಬಂಧಿಸಲು ಚಿಂತನೆ ನಡೆಸಲಾಗುತ್ತಿದೆ. ವೈರಸ್‌ಗೆ ಕಡಿವಾಣ ಹಾಕಲು ಕನಿಷ್ಠ ಐದು ವಾರಗಳ ಕಾಲ ಹೌಸ್‌ ಆಫ್ ಕಾಮನ್ಸ್‌ ಅನ್ನು ಸ್ಥಗಿತಗೊಳಿಸಲಾಗಿದೆ. ಸಂಸತ್ತಿನ ಎಲ್ಲ ಪಕ್ಷಗಳು ಇದಕ್ಕೆ ಸಮ್ಮತಿ ಸೂಚಿಸಿವೆ. ಸದನದ ಮುಂದಿನ ಸಭೆ ಏಪ್ರಿಲ್‌ 20 ರ ಸೋಮವಾರ ನಡೆಯಲಿದೆ.

ಬಜೆಟ್‌ ಮುಂದೂಡಿಕೆ
ಮಾರ್ಚ್‌ 30 ರಂದು ಬಜೆಟ್‌ ಮಂಡಿಸಬೇಕಿತ್ತು. ಬಜೆಟ್‌ ಮಂಡಿಸುವ ಕುರಿತು ಮುಂದಿನ ದಿನಗಳಲ್ಲಿ ಘೋಷಿಸಲಾಗುವುದು ಎಂದು ಹಣಕಾಸು ಸಚಿವ ಬಿಲ್‌ ಮೊರ್ನಿಯೊ ತಿಳಿಸಿದ್ದಾರೆ. ಕೊರೊನಾ ಕುರಿತು ಸಂಬಂಧಿಸಿದಂತೆ ಪ್ರಧಾನಿ ಟ್ರಾಡೋ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮತ್ತು ಬ್ರಿಡಿಷ್‌ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರೊಂದಿಗೆ ಮನೆಯಿಂದಲೇ ಕರೆ ಮಾಡಿ ಚರ್ಚಿಸಿದ್ದಾರೆ. ಪತ್ನಿ ಸೋಫಿ ಟ್ರಾಡೊ ಅವರು ಬ್ರಿಟನ್‌ನಿಂದ ಮರಳಿದ ಬಳಿಕ ಕೊರೊನಾ ವೈರಸ್‌ ಸೋಂಕು ಪಾಸಿಟಿವ್‌ ಕಾಣಿಸಿಕೊಂಡಿತ್ತು. ಈ ಪರಿಣಾಮ ಮನೆಯಲ್ಲಿ ಟ್ರಾಡೋ ಅವರು ಪ್ರತ್ಯೇಕವಾಗಿದ್ದಾರೆ.

Comments are closed.