ಅಂತರಾಷ್ಟ್ರೀಯ

ಶಾಲೆಯಲ್ಲಿ ಕೀಟಲೆ ಮಾಡಿದ್ದಕ್ಕೆ 6 ವರ್ಷದ ಮಗುವನ್ನು ಬೇಡಿ ಹಾಕಿ ಬಂಧಿಸಿ ಕರೆದೊಯ್ದ ಪೊಲೀಸ್

Pinterest LinkedIn Tumblr

ಶಾಲೆಯಲ್ಲಿ ಮಕ್ಕಳು ಕೀಟಲೆ, ಗಲಾಟೆ ಮಾಡುವುದು ಸಾಮಾನ್ಯ. ಬಾಲ್ಯವೇ ಹಾಗೆ… ಖುಷಿ ಖುಷಿಯಿಂದ ಇರುತ್ತದೆ. ಆದರೆ, ಮಕ್ಕಳು ಶಾಲೆಯಲ್ಲಿ ಕೀಟಲೆ ಮಾಡಿದರೆಂದು ಯಾವತ್ತಾದರೂ ಅವರನ್ನು ಬಂಧಿಸಿ ಸೆರೆಗಟ್ಟಿರುವುದನ್ನು ಕೇಳಿದ್ದೀರಾ…? ಫ್ಲೋರಿಡಾದಲ್ಲಿ ಈಗ ಇದೂ ನಡೆದಿದೆ… ಆರು ವರ್ಷದ ಮುದ್ದು ಮಗುವನ್ನು ಪೊಲೀಸ್ ಅಧಿಕಾರಿ ಬೇಡಿ ಹಾಕಿ ಪೊಲೀಸ್ ವಾಹನದಲ್ಲಿ ಕುಳಿರಿಸುವ ವಿಡಿಯೋವೊಂದು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ದುರ್ವತನೆ ತೋರಿದಳು ಎಂಬ ಕಾರಣಕ್ಕೆ ಆರು ವರ್ಷದ ಹೆಣ್ಣು ಮಗುವನ್ನು ಈ ಅಧಿಕಾರಿ ಶಾಲೆಯಿಂದ ಬಂಧಿಸಿ ಕರೆದುಕೊಂಡು ಹೋಗಿದ್ದಾಗಿ ಹೇಳಲಾಗುತ್ತಿದೆ. ಈ ಇಡೀ ದೃಶ್ಯ ಸೆಕ್ಯೂರಿಟಿ ಆಫೀಸರ್‌ ಒಬ್ಬರ ಬಾಡಿ ಕ್ಯಾಮ್‌ನಲ್ಲಿ ಸೆರೆಯಾಗಿದೆ. ಈ ವಿಡಿಯೋದಲ್ಲಿ, `ನನ್ನನ್ನು ಬಿಡಿ. ನಾನು ಜೈಲಿಗೆ ಹೋಗುವುದಿಲ್ಲ’ ಎಂದು ಮಗು ಅಳುವುದನ್ನು ಕೇಳುವಾಗಲೇ ಕಣ್ಣೀರು ಬರುತ್ತದೆ… ಆದರೆ, ಆ ಅಧಿಕಾರಿ ಅದೆಷ್ಟು ಕಲ್ಲು ಹೃದಯಿ ಆಗಿರಬೇಕು ಅಲ್ವಾ…?

ಇದು 2019ರ ಸೆಪ್ಟೆಂಬರ್‌ನಲ್ಲಿ ಫ್ಲೋರಿಡಾದ ಓರ್ಲಾಂಡೋದಲ್ಲಿ ನಡೆದಿದ್ದ ಘಟನೆ. ಆದರೆ, ಈಗ ಈ ಬಾಲಕಿಯ ಕುಟುಂಬದ ವಕೀಲರಿಗೆ ಈ ವಿಡಿಯೋ ಸಿಕ್ಕಿದ್ದು, ಈ ವಿಡಿಯೋವನ್ನು ಕುಟುಂಬದ ಸದಸ್ಯರು ಬಿಡುಗಡೆ ಮಾಡಿದ್ದಾರೆ. ಸದ್ಯ ಈ ಹೃದಯವಿದ್ರಾವಕ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲರೂ ಮಗುವನ್ನು ಬಂಧಿಸಿದ ಪೊಲೀಸ್ ಅಧಿಕಾರಿ ವಿರುದ್ಧ ಕಿಡಿಕಾರಿದ್ದಾರೆ.

ಇನ್ನೊಂದೆಡೆ, ಕಂದನನ್ನು ಹೀಗೆ ಮಾನವೀಯತೆಯೇ ಇಲ್ಲದೆ ಬಂಧಿಸಿದ್ದ ಅಧಿಕಾರಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ ಎಂದು ಓರ್ಲಾಂಡೋ ಪೊಲೀಸ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ತನ್ನ ಮೇಲಧಿಕಾರಿಗಳಿಗೆ ವಿಷಯ ತಿಳಿಸದೆ ಇವರು ಈ ರೀತಿ ವರ್ತಿಸಿದ್ದು, ಈ ಮೂಲಕ ಇಲಾಖೆಯ ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Comments are closed.