ಸಾಮಾನ್ಯವಾಗಿ ಮಕ್ಕಳು ಹುಟ್ಟಿದ ತಕ್ಷಣ ಅಳ್ತಾರೆ. ಅಳಬೇಕು ಕೂಡಾ. ಅತ್ತರೆ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಗೊತ್ತಾಗುತ್ತದೆ. ಆದರೆ, ಇಲ್ಲೊಂದು ಕಂದ ಹುಟ್ಟಿದ ತಕ್ಷಣ ಅಳಲಿಲ್ಲ… ವೈದ್ಯರೂ ಮಗುವನ್ನು ಅಳಿಸಲು ಯತ್ನಿಸಿದ್ದರು. ಎಷ್ಟೇ ಪ್ರಯತ್ನಿಸಿದರೂ ಕಂದ ಅಳಲಿಲ್ಲ…! ಬದಲಾಗಿ ಈ ಪುಟಾಣಿ ಕೋಪ ತೋರಿಸಿದ್ದಳು…!
ಸದ್ಯ ಹುಟ್ಟಿದ ತಕ್ಷಣ ಕೋಪ ತೋರಿದಂತಹ ಮುಖದ ಕಂದನ ಫೋಟೋ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ಆಗಿಯೇ ವೈರಲ್ ಆಗುತ್ತಿದೆ.
ಇದು ಬ್ರೆಜಿಲ್‌ನ ರಿಯೋ ಡಿ ಜನೈರೊದಲ್ಲಿ ನಡೆದ ಘಟನೆ. ಇಲ್ಲಿನ ಆಸ್ಪತ್ರೆಯೊಂದರಲ್ಲಿ ಈ ಹೆಣ್ಣು ಮಗುವಿನ ಜನನವಾಗಿದೆ. ಹೊಕ್ಕುಳ ಬಳ್ಳಿಯನ್ನು ಕತ್ತರಿಸುವ ಮುನ್ನ ವೈದ್ಯರು ಕಂದನನ್ನು ಅಳಿಸುವುದಕ್ಕೆ ಯತ್ನಿಸಿದ್ದಾರೆ. ಆದರೆ, ಆಗ ಈ ಕಂದ ಇಂತಹ ಎಕ್ಸ್‌ಪ್ರೆಷನ್ ತೋರಿದ್ದಾಳೆ. ಇದನ್ನು ಕಂಡು ಆಸ್ಪತ್ರೆಯ ವೈದ್ಯರು ಕೂಡಾ ಒಂದು ಕ್ಷಣ ದಂಗಾಗಿದ್ದರು.
ತನ್ನ ಕಂದ ಈ ರೀತಿಯ ಪ್ರತಿಕ್ರಿಯೆ ಕೊಡುತ್ತಿರುವುದನ್ನು ಕಂಡ ತಾಯಿ ಡಯೇನ್ ಡಿ ಜೀಸಸ್ ಬಾರ್ಬೊಸಾ ತಕ್ಷಣ ಫೋಟೋಗ್ರಾಫರ್ ರೊಡ್ರಿಗೋ ಕುನ್ಸ್ಟ್‌ಮನ್ ಅವರನ್ನು ಕರೆಸಿ ಈ ಅಪರೂಪದ ಕ್ಷಣದ ಫೋಟೋ ತೆಗೆಸಿಕೊಂಡಿದ್ದರು. ಬಳಿಕ ವೈದ್ಯರು ಹೊಕ್ಕುಳ ಬಳ್ಳಿಯನ್ನು ಕತ್ತರಿಸಿದ ನಂತರ ಕಂದ ಅತ್ತಿದ್ದು, ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
Comments are closed.