ಅಂತರಾಷ್ಟ್ರೀಯ

ಅಮೆರಿಕದ ಲಾಸ್​ ಏಂಜಲೀಸ್​ನಲ್ಲಿ ಭಾರತ ಮೂಲದ ಯುವಕನನ್ನು ಗುಂಡಿಕ್ಕಿ ಹತ್ಯೆ

Pinterest LinkedIn Tumblr

ವಾಷಿಂಗ್ಟನ್: ಅಮೆರಿಕದ ಲಾಸ್​ ಏಂಜಲೀಸ್​ನಲ್ಲಿರುವ ದಿನಸಿ ಅಂಗಡಿಗೆ ನುಗ್ಗಿದ ಮುಸುಕುಧಾರಿಗಳು ಭಾರತ ಮೂಲದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಶನಿವಾರ ಈ ದುರ್ಘಟನೆ ನಡೆದಿದ್ದು, ಮೃತಪಟ್ಟ ಯುವಕನನ್ನು ಮನೀಂದರ್ ಸಿಂಗ್ ಸಾಹಿ ಎಂದು ಗುರುತಿಸಲಾಗಿದೆ.

ಹರಿಯಾಣ ರಾಜ್ಯದ ಕರ್ನಲ್ ನಿವಾಸಿಯಾಗಿರುವ ಮನೀಂದರ್ ಸಿಂಗ್ ಅಮೆರಿಕದ ಲಾಸ್ ಏಂಜಲೀಸ್‍ನಲ್ಲಿ ಇರುವ ದಿನಸಿ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಬೆಳಗ್ಗೆ ಕಳ್ಳತನ ಮಾಡಲು ಬಂದ ಇಬ್ಬರು ದುಷ್ಕರ್ಮಿಗಳು, ದರೋಡೆಗೆ ಅಡ್ಡಬಂದ ಮನೀಂದರ್​ನನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ. 31 ವರ್ಷದವನಾಗಿದ್ದ ಮನೀಂದರ್​ 6 ತಿಂಗಳ ಹಿಂದಷ್ಟೇ ಲಾಸ್​ ಏಂಜಲೀಸ್​ಗೆ ತೆರಳಿದ್ದರು.

ಮಾಸ್ಕ್​ ಧರಿಸಿ ಬಂದ ಇಬ್ಬರು ಕ್ಯಾಷಿಯರ್ ಕೌಂಟರ್​ನತ್ತ ಧಾವಿಸಿ, ಹಣ ದೋಚಲು ಮುಂದಾಗಿದ್ದರು. ಆಗ ಕ್ಯಾಷಿಯರ್ ಕೌಂಟರ್​ನಲ್ಲಿ ಕುಳಿತಿದ್ದ ಮನೀಂದರ್ ಸಿಂಗ್ ಅಡ್ಡಬಂದಿದ್ದರು. ಆಗ ಆತನ ಮೇಲೆ ಗುಂಡು ಹಾರಿಸಿದ ದರೋಡೆಕೋರರು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ. ಈ ದೃಶ್ಯ ಸ್ಟೋರ್​ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ಇಬ್ಬರು ದುಷ್ಕರ್ಮಿಗಳು ಮುಸುಕು ಧರಿಸಿ ಬಂದಿದ್ದರಿಂದ ಅವರು ಯಾರೆಂಬುದು ಪತ್ತೆಯಾಗಿಲ್ಲ.

ಈ ಬಗ್ಗೆ ಲಾಸ್​ ಏಂಜಲೀಸ್​ನ ಪೊಲೀಸರು ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ. ವಿಟ್ಟಿಯರ್ ಪೊಲೀಸ್ ಇಲಾಖೆ ತನ್ನ ಟ್ವಿಟ್ಟರಿನಲ್ಲಿ ಮಾಸ್ಕ್ ಹಾಕಿಕೊಂಡಿರುವ ದುಷ್ಕರ್ಮಿಯ ಫೋಟೋವನ್ನು ಟ್ವೀಟ್ ಮಾಡಿದೆ. 5 ಮತ್ತು 9 ವರ್ಷದ ಮಕ್ಕಳನ್ನು ಹೊಂದಿರುವ ಮನೀಂದರ್ ತನ್ನ ತಂದೆ, ಹೆಂಡತಿಯನ್ನು ಅಗಲಿದ್ದಾರೆ. ಅವರ ಮೃತದೇಹವನ್ನು ಹರಿಯಾಣಕ್ಕೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.

Comments are closed.