ಅಂತರಾಷ್ಟ್ರೀಯ

ಕೊರೊನಾ ವೈರಸ್ ಗೆ ಮೃತಪಟ್ಟವರ ಸಂಖ್ಯೆ 24,000?

Pinterest LinkedIn Tumblr


ಬೀಜಿಂಗ್‌: ನೊವೆಲ್‌ ಕೊರೊನಾ ವೈರಾಣು (ಎನ್‌ಸಿಒವಿ) ಸೋಂಕಿಗೆ ಬಲಿಯಾಗಿರುವುದು 565 ಮಂದಿ ಎಂದು ಚೀನಾ ಸರಕಾರ ಘೋಷಿಸಿರುವ ಬೆನ್ನಲ್ಲಿಯೇ, ಸಾವಿನ ಸಂಖ್ಯೆ ವಿಚಾರವಾಗಿ ಸರಕಾರ ವಾಸ್ತವ ಮುಚ್ಚಿಡುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ. ಚೀನಾದ ಅತಿದೊಡ್ಡ ಆನ್‌ಲೈನ್‌ ಸುದ್ದಿ ತಾಣ ‘ಟೆನ್ಸೆಂಟ್‌’ ದೇಶದಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 24, 589 ಎಂದು ದಾಖಲಿಸಿರುವುದೇ ಇದಕ್ಕೆ ಕಾರಣ. ಜತೆಗೆ ದೇಶಾದ್ಯಂತ 1,54,023 ಸೋಂಕಿತರು ಇದ್ದಾರೆ. ಇದುವರೆಗೂ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವವರ ಸಂಖ್ಯೆ ಕೇವಲ 269 ಎಂದೂ ಈ ವೆಬ್‌ಸೈಟ್‌ ವರದಿ ಮಾಡಿದೆ.

ವೆಬ್‌ಸೈಟ್‌ನಲ್ಲಿಈ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ. ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಸರಕಾರ ಉದ್ದೇಶಪೂರ್ವಕವಾಗಿ ಸಾವಿನ ನೈಜ ಅಂಕಿ-ಅಂಶಗಳನ್ನು ಮರೆಮಾಚುತ್ತಿದೆ ಎಂದು ಹಲವರು ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಸುದ್ದಿಸಂಸ್ಥೆಯೇ ಅಂಕಿ-ಅಂಶ ತಿರುಚಿರಬಹುದು ಎಂಬ ವಾದವೂ ವ್ಯಕ್ತವಾಗಿದೆ.

ಅಧಿಕೃತ ಮಾಹಿತಿಗಳ ಪ್ರಕಾರ ಸದ್ಯ 565 ಮಂದಿ ಕೊರೊನಾಗೆ ಬಲಿಯಾಗಿದ್ದು, ವಿಶ್ವಾದ್ಯಂತ 28,300 ಮಂದಿಗೆ ಸೋಂಕು ತಗುಲಿದೆ. ಇದರಲ್ಲಿ ಎರಡು ಸಾವುಗಳು ಚೀನಾದಿಂದ ಹೊರಗಡೆ ಸಂಭವಿಸಿವೆ. ಚೀನಾದಲ್ಲಿ ಗುರುವಾರ ಒಂದೇ ದಿನ 73 ಜನ ಸಾವಿಗೀಡಾಗಿದ್ದು, ಮೃತರ ಸಂಖ್ಯೆ 563ಕ್ಕೆ ಏರಿದೆ. ಈಗಾಗಲೇ ಅಮೆರಿಕ, ಆಸ್ಪ್ರೇಲಿಯಾ, ನ್ಯೂಜಿಲೆಂಡ್‌, ಇಟಲಿ, ತೈವಾನ್‌ ಮತ್ತು ವಿಯೆಟ್ನಾಂ ಸರಕಾರಗಳು ವಿದೇಶಿಗರು ತನ್ನ ಗಡಿ ದಾಟದಂತೆ ನಿಷೇಧ ಹೇರಿವೆ. ಚೀನಾಗೆ ವಿಮಾನ ಸೇವೆಗಳನ್ನು ಕೂಡ ಸದ್ಯಕ್ಕೆ ಬಂದ್‌ ಮಾಡಿವೆ. ವಿಮಾನ ಸೇವೆ ರದ್ದುಪಡಿಸಿರುವ ಕುರಿತು ಚೀನಾ ರಾಜತಾಂತ್ರಿಕ ಪ್ರತಿಭಟನೆ ದಾಖಲಿಸಿದೆ.

“ಕೊರೊನಾ ವೈರಾಣುಗಳದ್ದು ಸಣ್ಣಸಣ್ಣ ವೈರಾಣುಗಳಿರುವ ದೊಡ್ಡ ಕುಟುಂಬ. ಹಾಗಾಗಿ ಅವು ತೀವ್ರವಾಗಿ ಪ್ರಾಣಿ, ಮನುಷ್ಯರು, ಕಾಡುಮೃಗಗಳಲ್ಲಿ ಹಬ್ಬುತ್ತಿವೆ. ಇದುವರೆಗೂ ನಮ್ಮ ವಿಜ್ಞಾನಿಗಳಿಗೆ ತಿಳಿದಿದ್ದ ಆರು ಮಾದರಿಯ ಕೊರೊನಾ ವೈರಾಣುಗಳಿಗಿಂತ ಈ ಬಾರಿಯದು ಭಿನ್ನವಾಗಿದೆ.”-ಡಾ. ಹೆಲೆನಾ ಮೆಯಿರ್‌, ಮುಖ್ಯಸ್ಥೆ, ಪಿರ್‌ಬ್ರೈಟ್‌ ವೈರಾಣು ಅಧ್ಯಯನ ಕೇಂದ್ರ

ವುಹಾನ್‌ನಲ್ಲಿ 3.50 ಲಕ್ಷ ಸೋಂಕಿತರು?

ಚೀನಾ ಸುದ್ದಿ ತಾಣದ ಪ್ರಕಾರ ಕೊರೊನಾ ಕೇಂದ್ರ ಸ್ಥಾನವಾಗಿರುವ ವುಹಾನ್‌ ನಗರವೊಂದರಲ್ಲೇ ಸದ್ಯ 3.50 ಲಕ್ಷ ಮಂದಿಗೆ ಸೋಂಕು ತಗುಲಿದೆ. ಆದರೆ ಇದನ್ನು ಖಚಿತವಾಗಿ ದೃಢಪಡಿಸಲಾಗದೆ ಆರೋಗ್ಯ ಅಧಿಕಾರಿಗಳು ಹರಸಾಹಪಡುತ್ತಿದ್ದಾರೆ. ಆಸ್ಪತ್ರೆಗೆ ದಾಖಲಾಗುವ ಸೋಂಕಿತರು ಅಥವಾ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಪ್ರತಿ 100 ಮಂದಿ ಸೋಂಕಿತರ ಪೈಕಿ ಇಬ್ಬರು ಮೃತಪಡುತ್ತಿದ್ದಾರೆ ಎಂದು ಚೀನಾ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

ಜಿನ್‌ಪಿಂಗ್‌ ಸರಕಾರದ ಮೇಲೆ ಅನುಮಾನ

ಜಾಗತಿಕವಾಗಿ ತನ್ನ ಘನತೆ ಕಾಪಾಡಿಕೊಳ್ಳುವ ಜಿದ್ದಿಗೆ ಬಿದ್ದಿರುವ ಕ್ಸಿ ಜಿನ್‌ಪಿಂಗ್‌ ಸರಕಾರ, ಇತರ ದೇಶಗಳಿಂದ ವೈರಾಣು ನಿಯಂತ್ರಣಕ್ಕೆ ನೆರವನ್ನು ನಿರಾಕರಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು ಪ್ಯಾಂಡೆಮಿಕ್‌ (ಸರ್ವವ್ಯಾಪಿ ವ್ಯಾಧಿ) ಎಂದು ಕೊರೊನಾ ದಾಳಿಯನ್ನು ಘೋಷಿಸಬಾರದು ಎಂದು ಮೃತರ ನೈಜ ಅಂಕಿಗಳನ್ನು ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಚೀನಾ (ಸಿಸಿಪಿ) ಮರೆಮಾಚುತ್ತಿರಬಹುದು ಎಂದು ಚೀನಾದ ಜನಪ್ರಿಯ ಕೇಯ್‌ಜಿಂಗ್‌ ನಿಯತಕಾಲಿಕೆಯ ಅಂಕಣವೊಂದು ಶಂಕೆ ವ್ಯಕ್ತಪಡಿಸಿದೆ.

Comments are closed.