ಅಂತರಾಷ್ಟ್ರೀಯ

ಪಿಂಗಾಣಿ ಕಾರ್ಖಾನೆಯಲ್ಲಿ ಬೆಂಕಿ ದುರಂತ – ಭಾರತೀಯರೂ ಸೇರಿ 28 ಮಂದಿ ಮೃತ್ಯು

Pinterest LinkedIn Tumblr

ಖೊರ್ಟೌಮ್: ಸುಡಾನ್‍ನ ಸೆರಾಮಿಕ್ ಕಾರ್ಖಾನೆಯಲ್ಲಿ ಬೆಂಕಿ ದುರಂತದ ನಂತರ ಎಲ್‍ಪಿಜಿ ಟ್ಯಾಂಕರ್ ಸ್ಫೋಟಗೊಂಡು ಸಂಭವಿಸಿದ ಭೀಕರ ದುರಂತದಲ್ಲಿ ಹಲವು ಭಾರತೀಯರೂ ಸೇರಿದಂತೆ 28 ಮಂದಿ ಮೃತಪಟ್ಟು, 130ಕ್ಕೂ ಹೆಚ್ಚು ಜನರು ತೀವ್ರ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.

ಈ ದುರ್ಘಟನೆಯಲ್ಲಿ ಭಾರತೀಯರು ಮೃತಪಟ್ಟಿರುವುದನ್ನು ಖೋರ್ಟೌಮ್ ನಗರದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಖಚಿತಪಡಿಸಿದೆ. ಆದರೆ ಭಾರತೀಯರ ಸಾವು-ನೋವಿನ ಬಗ್ಗೆ ನಿಖರ ಮಾಹಿತಿ ನೀಡಿಲ್ಲ. ಈ ಕಾರ್ಖಾನೆಯಲ್ಲಿ 50ಕ್ಕೂ ಹೆಚ್ಚು ಭಾರತೀಯ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದರು.

ನಿನ್ನೆ ಕಾರ್ಖಾನೆಯಲ್ಲಿ ಬೆಂಕಿ ಮತ್ತು ಎಲ್‍ಪಿಜಿ ಟ್ಯಾಂಕರ್ ಸ್ಫೋಟಗೊಂಡು ಸಂಭವಿಸಿದ ಭೀಕರ ದುರಂತದಲ್ಲಿ ಅನೇಕರು ಮೃತಪಟ್ಟಿದ್ಧಾರೆ. ಸಾವಿಗೀಡಾದವರು ಮತ್ತು ಗಾಯಗೊಂಡವರಲ್ಲಿ ಭಾರತೀಯರೂ ಸೇರಿದ್ದಾರೆ ಎಂದು ರಾಯಭಾರಿ ಕಚೇರಿಯ ಪ್ರಕಟಣೆ ತಿಳಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ಈ ದುರ್ಘಟನೆಯಲ್ಲಿ 28ಕ್ಕೂ ಹೆಚ್ಚು ಮಂದಿ ಮೃತಪಟ್ಟು, 130ಕ್ಕೂ ಅಧಿಕ ಜನರು ತೀವ್ರ ಗಾಯಗೊಂಡಿದ್ದಾರೆ.

ಸ್ಫೋಟದ ತೀವ್ರತೆಗೆ ಕೆಲ ಕಾರ್ಮಿಕರು ಛಿದ್ರ ಛಿದ್ರವಾಗಿದ್ದರೆ ಅನೇಕರು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿದ್ದಾರೆ. ಗಾಯಾಳುಗಳಲ್ಲಿ ಅನೇಕರಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿದ್ದು, ಕೆಲವರು ಉಸಿರುಗಟ್ಟಿ ತೀವ್ರ ಅಸ್ವಸ್ಥರಾಗಿದ್ದಾರೆ. ಇವರೆಲ್ಲರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಶೋಚನೀಯವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದುರಂತ ಸಂಭವಿಸಿದ ಸ್ಥಳದಲ್ಲಿ ಸುರಕ್ಷಿತ ಸಾಧನ-ಸಲಕರಣೆಗಳು ಇಲ್ಲದಿರುವುದು ಸಾವು-ನೋವಿನ ಸಂಖ್ಯೆ ಹೆಚ್ಚಾಗಲು ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸೆರೆಮಿಕ್‍ಗಳನ್ನು ತಯಾರಿಸುವ ಈ ಕಾರ್ಖಾನೆಯಲ್ಲಿ ದಹನಶೀಲ ವಸ್ತುಗಳನ್ನು ಅಸುರಕ್ಷಿತವಾಗಿ ಸಂಗ್ರಹಿಸಿಡಲಾಗಿತ್ತು. ಇದರಿಂದ ಬೆಂಕಿ ವ್ಯಾಪನೆ ಮತ್ತು ಭಾರೀ ಆಸ್ಫೋಟನೆಗೆ ಕಾರಣವಾಯಿತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

Comments are closed.