
ಸಾಂತಾ ಬರ್ಬರಾ: ಕ್ಯಾಲಿಫೋರ್ನಿಯಾದ ದಟ್ಟ ಅರಣ್ಯದಂಚಿನಲ್ಲಿರುವ ಸಾಂತಾ ಬರ್ಬರಾ ಪ್ರವೇಶಕ್ಕೆ ಮಂಗಳವಾರ ಕಾಳ್ಗಿಚ್ಚು ತನ್ನ ಕೆನ್ನಾಲಿಗೆ ಚಾಚಿದ್ದು, ಜೀವ ಉಳಿಸಿಕೊಳ್ಳುವ ಸಲುವಾಗಿ ಇಲ್ಲಿನ 5,500ಕ್ಕೂ ಹೆಚ್ಚು ನಿವಾಸಿಗಳು ದಿಕ್ಕಾಪಾಲಾಗಿ ಓಡಿದ್ದಾರೆ. ವ್ಯಾಪಕ ಗಾಳಿಯಿಂದ ಕಾಳ್ಗಿಚ್ಚು ವ್ಯಾಪಿಸುತ್ತಿದ್ದು, ಮನೆಗಳನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಇದರಿಂದ ಸಮಸ್ಯೆ ಪರಿಹಾರವಾಗಲಿದೆ ಎಂಬ ನಿರೀಕ್ಷೆಯಲ್ಲಿ ಅಧಿಕಾರಿಗಳು ಇದ್ದಾರೆ.
ಲಾಸ್ ಏಂಜಲೀಸ್ ನಗರದಿಂದ ವಾಯವ್ಯಕ್ಕೆ 145 ಕಿಲೋಮೀಟರ್ ದೂರದ ಸಾಂತಾ ಬರ್ಬರ ಕೌಂಟಿಯಲ್ಲಿ ಬೆಂಕಿ ಸೋಮವಾರ ಮಧ್ಯಾಹ್ನ ಲಾಸ್ ಪಡ್ರೆಸ್ ರಾಷ್ಟ್ರೀಯ ಅರಣ್ಯದಲ್ಲಿ ಕಾಣಿಸಿಕೊಂಡು, ಇತರೆಡೆಗೆ ವ್ಯಾಪಿಸಿತು ಎನ್ನಲಾಗಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ 18 ಚದರ ಕಿಲೋಮೀಟರ್ ವ್ಯಾಪ್ತಿಗೆ ಬೆಂಕಿ ಪಸರಿಸಿತು. 45 ಕಿಲೋಮೀಟರ್ ವೇಗದಲ್ಲಿ ಬೀಸುವ ಗಾಳಿ ಮತ್ತು ಕನಿಷ್ಠ ತೇವಾಂಶ ಬೆಂಕಿ ಹರಡಲು ಕಾರಣವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಂಗಳವಾರ ಮುಂಜಾನೆ ಅಗ್ನಿಶಾಮಕ ದಳದ ಹೆಲಿಕಾಪ್ಟರ್ ಪೈಲಟ್‌ಗಳು ರಾತ್ರಿ ದೃಷ್ಟಿಯ ಕನ್ನಡಕಗಳನ್ನು ಧರಿಸಿ ಒಂಬತ್ತು ಹೆಲಿಕಾಪ್ಟರ್‌ಗಳ ಮೂಲಕ 10 ಟ್ಯಾಂಕ್ ನೀರು ಮತ್ತು ಅಗ್ನಿಶಾಮಕ ಕೆಂಪು ಪೋಶ್ಚೆಕ್ ರಾಸಾಯನಿಕವನ್ನು ಮೇಲಿನಿಂದ ಸುರಿಸಿದರು. 91 ಸಾವಿರಕ್ಕೂ ಹೆಚ್ಚು ಮಂದಿ ವಾಸಿಸುವ ಕರಾವಳಿಯ ರೆಸಾರ್ಟ್ ನಗರ ಕಾಳ್ಗಿಚ್ಚಿನಿಂದ ತತ್ತರಿಸಿದೆ.
ಬೆಂಕಿಯ ಕೆನ್ನಾಲಿಗೆಯಿಂದ ಮನೆಗಳನ್ನು ರಕ್ಷಿಸಲು ಸುಮಾರು 600ಕ್ಕೂ ಹೆಚ್ಚು ಮಂದಿ ಅಗ್ನಿಶಾಮಕ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.
Comments are closed.