
ಟೋಕಿಯೋ: ಭೂಮಿಯಲ್ಲಿ ಜೀವ ಸೃಷ್ಟಿ ಹೇಗೆ ಆಯಿತು ಎಂಬುದನ್ನು ಪತ್ತೆ ಹಚ್ಚಲು ವಿಜ್ಞಾನಿಗಳು ಅವಿರತ ಪ್ರಯತ್ನದಲ್ಲಿ ನಿರತರಾಗಿದ್ಧಾರೆ. ಜೀವ ಸೃಷ್ಟಿಯ ಪ್ರಕ್ರಿಯೆಗೆ ಸಕ್ಕರೆ ಅಣುಗಳು ಅತ್ಯಗತ್ಯ ಎಂಬ ಅಂಶವನ್ನು ವಿಜ್ಞಾನಿಗಳು ಈಗಾಗಲೇ ಗ್ರಹಿಸಿದ್ಧಾರೆ. ಆದರೆ, ಭೂಮಿಗೆ ಈ ಸಕ್ಕರೆ ಅಣು ಹೇಗೆ ಬಂತು ಎಂಬುದು ಪ್ರಮುಖ ಪ್ರಶ್ನೆ. ಉಲ್ಕಾಶಿಲೆಯೊಂದನ್ನು ಅಧ್ಯಯನ ಮಾಡಿದ ಜಪಾನ್ನ ವಿಜ್ಞಾನಿಗಳಿಗೆ ಮಹತ್ವದ ಸುಳಿವು ಸಿಕ್ಕಿದೆ. ಆಗಸದಿಂದ ಭೂಮಿಗೆ ಅಪ್ಪಳಿಸಿ ಬಿದ್ದಿರುವ ಉಲ್ಕಾಶಿಲೆಯೊಂದರಲ್ಲಿ ಸಕ್ಕರೆಯ ಅಣುಗಳನ್ನು ಅಧ್ಯಯನಕಾರರು ಪತ್ತೆ ಹಚ್ಚಿದ್ಧಾರೆ. ಭೂಮಿಯಲ್ಲಿ ಜೀವ ಸೃಷ್ಟಿಗೆ ಉಲ್ಕಾಘಾತವೇ ಕಾರಣವಾಗಿದ್ದಿರಬಹುದು ಎಂಬುದು ಈ ಅಧ್ಯಯನಕಾರರ ಸಂದೇಹವಾಗಿದೆ.
ಸಕ್ಕರೆಗಳು ಜೈವಿಕ ಪ್ರಕ್ರಿಯೆಗೆ ಬಹಳ ಮುಖ್ಯ. ಜೀವ ಸೃಷ್ಟಿಯ ಮೂಲವಾದ ಆರ್ಎನ್ಎ ಅಣುವಿಗೆ ರೈಬೋಸ್ಗಳು ಆಧಾರವಾಗಿರುತ್ತವೆ. ಸಕ್ಕರೆ ಅಣುಗಳಿರುವ ರೈಬೋಸ್ಗಳು ನಭದಲ್ಲಿ ರೂಪುಗೊಳ್ಳುವ ಅವಕಾಶವಿದೆ. ಉಲ್ಕಾಶಿಲೆಗಳ ಮೂಲಕ ಇವು ಭೂಮಿಗೆ ಬಂದಿರುವ ಸಾಧ್ಯತೆ ಇದೆ. ಈ ರೈಬೋಸ್ಗಳು ಭೂಮಿಯಲ್ಲಿ ಜೀವ ಸೃಷ್ಟಿಗೆ ಪುಷ್ಟಿ ನೀಡಿರಬಹುದು ಎಂದು ಅಂದಾಜಿಸಲಾಗಿದೆ.
ಜಪಾನ್ನ ಟೊಹೋಕು ವಿಶ್ವವಿದ್ಯಾಲಯದ ಯೋಶಿಹಿರೋ ಫುರುಕಾವಾ ಸೇರಿದಂತೆ ಹಲವು ವಿಜ್ಞಾನಿಗಳ ತಂಡವು ಮೂರು ಉಲ್ಕಾಶಿಲೆಗಳನ್ನು ಬಹಳ ಸೂಕ್ಷ್ಮವಾಗಿ ಅಧ್ಯಯನ ನಡೆಸಿದ್ದರು. 1969ರಲ್ಲಿ ಆಸ್ಟ್ರೇಲಿಯಾಗೆ ಅಪ್ಪಳಿಸಿದ್ದ ಮುರ್ಚಿಸನ್ ಎಂಬ ಉಲ್ಕೆಯೂ ಇದರಲ್ಲಿ ಒಳಗೊಂಡಿದೆ. ಇವುಗಳ ಅಧ್ಯಯನದ ವೇಳೆ ಸಕ್ಕರೆ ಅಣುಗಳ ಅಸ್ತಿತ್ವ ಇರುವುದು ಕಂಡುಬಂದಿದೆ.
ಈ ಅಧ್ಯಯನದ ಅಂಶವು ವಿಜ್ಞಾನಿಗಳ ಸಂಶೋಧನಾ ಕಾರ್ಯಕ್ಕೆ ಹೆಚ್ಚಿನ ಬೆಳಕು ಚೆಲ್ಲುವ ನಿರೀಕ್ಷೆ ಇದೆ.
Comments are closed.