ಅಂತರಾಷ್ಟ್ರೀಯ

ದೀರ್ಘಾಯುಷ್ಯದ ರಹಸ್ಯ ತಿಳಿಯುವುದಕ್ಕೆ 10,000 ಸಾಕುನಾಯಿಗಳ ಮೇಲೆ ಪ್ರಯೋಗ

Pinterest LinkedIn Tumblr


ವಾಷಿಂಗ್ಟನ್‌ : ದೀರ್ಘಾಯುಷ್ಯದ ಕುರಿತ ಸಂಶೋಧನೆಗಳು ಇಂದು ನಿನ್ನೆಯದ್ದಲ್ಲ. ಹಲವಾರು ಶತಮಾನಗಳ ಹಿಂದಿನಿಂದಲೇ ಈ ಕುರಿತು ಖಾಸಗಿ ಸಂಶೋಧನೆಗಳು ನಡೆದಿವೆ. ಆದರೀಗ ಅಮೆರಿಕ ಸರಕಾರವೇ ಹಣ ನೀಡಿ ದೀರ್ಘಾಯುಷ್ಯದ ಕುರಿತು ಸಂಶೋಧನೆ ಕೈಗೊಳ್ಳುವಂತೆ ತಿಳಿಸಿದೆ. ಈ ಸಂಶೋಧನೆಗೆ ವಾಷಿಂಗ್ಟನ್‌ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಗುರುವಾರದಿಂದಲೇ ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ಸಾಕುಪ್ರಾಣಿಗಳು, ಅದರಲ್ಲೂ ನಾಯಿಗಳ ಮೇಲೆ ಈ ಸಂಶೋಧನೆ ನಡೆಸಲಾಗುತ್ತಿದೆ. ಮನುಷ್ಯನ ಆಯುಷ್ಯಕ್ಕೂ, ನಾಯಿಗಳಿಗೂ ಏನು ಸಂಬಂಧ ಎಂದು ಆಶ್ಚರ್ಯವಾಗಬಹುದು. ಆದರೆ, ಸಂಶೋಧನಾಕಾರರು ತಿಳಿಸಿರುವಂತೆ ಮಾನವರು ಮತ್ತು ನಾಯಿಗಳು ವಾಸಿಸುವುದು ಒಂದೇ ರಿತಿಯ ವಾತಾವರಣದಲ್ಲಿ. ಅಲ್ಲದೆ ನಾಯಿಗಳಿ ಹಾಗೂ ಮನುಷ್ಯರಿಗೆ ಬರುವ ಕಾಯಿಲೆಗಳಲ್ಲಿ ಸಾಮ್ಯತೆ ಇದೆ. ಆದರೆ, ನಾಯಿಗಳ ಜೀವಿತಾವಧಿ ಕಡಿಮೆ ಇರುವುದರಿಂದ ಅತಿ ಕಡಿಮೆ ಅವಧಿಯಲ್ಲಿ ಫಲಿತಾಂಶಗಳನ್ನು ಪಡೆಯಬಹುದಾಗಿದೆ. ಈ ಸಂಶೋಧನೆಯು ದೀರ್ಘಾಯುಷ್ಯದ ಕುರಿತು ಹಲವಾರು ವಿಷಾರಗಳ ಮೇಲೆ ಬೆಳಕು ಚೆಲ್ಲಲಿದೆ ಹಾಗೂ ಮನುಷ್ಯನಿಗೆ ಬರುವ ವಯೋಮಿತಿ ಆಧಾರಿತ ಸಮಸ್ಯೆಗಳ ಕುರಿತೂ ಮಾಹಿತಿ ನೀಡಲಿದೆ ಎಂದು ವಿಶ್ವವಿದ್ಯಾಲಯದ ಉಪ ನಿರ್ದೇಶಕರಾದ ಡಾ. ಮೇರಿ ಬರ್ನಾರ್ಡ್‌ ಅಭಿಪ್ರಾಯಪಟ್ಟಿದ್ದಾರೆ.

ಬರೋಬ್ಬರಿ 10,000 ನಾಯಿಗಳ ಮೇಲೆ ಪ್ರಯೋಗ:
ಈ ಸಂಶೋಧನಾ ಯೋಜನೆಯಲ್ಲಿ ಬರೋಬ್ಬರಿ 10,000 ನಾಯಿಗಳ ಮೇಲೆ ಪ್ರಯೋಗ ನಡೆಸಲಿದ್ದಾರೆ. ಆರಂಭಿಕವಾಗಿ ಬೃಹತ್‌ ಪ್ರಮಾಣದ ದತ್ತಾಂಶ ಸಮಗ್ರಹಿಸುವಲ್ಲಿ ನಿರತರಾಗಿದ್ದಾರೆ ಸಂಶೋಧನಾಕಾರರು. ಸುಮಾರು 10,000 ಸಾಕುಪ್ರಾಣಿಗಳಿಂದ ಡಿಎನ್‌ಎ ಸಂಗ್ರಹಣೆ, ಕರುಳಿನ ಸೂಕ್ಷ್ಮಾಣು ಜೀವಿಗಳ ಸಂಗ್ರಹಣೆ ಆರಂಭಿಸಿದ್ದಾರೆ. 10,000 ನಾಯಿಗಳ ಪೈಕಿ 5000 ನಾಯಿಗಳಿಗೆ ವಯಸ್ಸಾಗುವಿಕೆಯನ್ನು ನಿಯಂತ್ರಿಸುವ ಮಾತ್ರೆ ನೀಡಿ ಪರೀಕ್ಷಿಸುವ ಸಂಶೋಧನೆ ಇದಾಗಿದೆ. ಈ ಸಂಶೋಧನೆಗಾಗಿ ಅಮೆರಿಕ ಸರ್ಕಾರ ಬರೋಬ್ಬರಿ 2.3 ಕೋಟಿ ಡಾಲರ್‌ (ಸುಮಾರು 166 ಕೋಟಿ ರೂಪಾಯಿ) ಹಣ ವೆಚ್ಚ ಮಾಡುತ್ತಿದೆ.

ವಾಷಿಂಗ್ಟನ್‌ ವೈದ್ಯಕೀಯ ಮಹಾವಿದ್ಯಾಲ ಸಂಗ್ರಹಿಸಲಿರುವ ದತ್ತಾಂಶಗಳು ವಿಶ್ವದ ಎಲ್ಲ ವಿಜ್ಞಾನಿಗಳಿಗೆ ಲಭ್ಯವಾಗಲಿದೆ. ಇಂದು ಸಾಕುಪ್ರಾಣಿಗಳನ್ನು ಪ್ರಾಣಿಗಳನ್ನು ಮುದ್ದಾಗಿ ಸಾಕುತ್ತಿದ್ದಾರೆ. ಹೀಗಾಗಿ ಹೆಚ್ಚು ಕಾಲ ಬದುಕುತ್ತವೆ. ಆದರೆ, ಕ್ರಮೇಣ ವಯಸ್ಸಾಗುತ್ತಿದ್ದಂತೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇವು ಮನುಷ್ಯರಿಗೆ ವೃದ್ಧಾಪ್ಯದಲ್ಲಿ ಕಾಣುಸಿಕೊಳ್ಳುವ ಸಮಸ್ಯೆಗಳಿಗೆ ಸಾಮ್ಯತೆ ಹೊಂದಿವೆ ಎಂದು ಟೆಕ್ಸಾಸ್‌ನ ಎ &ಎಂ ವಿಶ್ವವಿದ್ಯಾಲಯದ ಪಶುತಜ್ಞವೈದ್ಯ ಡಾ. ಕೇಟ್‌ ಕ್ರೀವಿ ತಿಳಿಸಿದ್ದಾರೆ. 40 ಪೌಂಡ್‌ಗಿಂತ ಹೆಚ್ಚು ತೂಕ ಹೊಂದಿರುವ ನಾಯಿಗಳು ಸಂಶೋಧನೆಗೆ ಅರ್ಹ. ಹೆಚ್ಚು ನಾಯಿಗಳಿಂದ ದತ್ತಾಂಶ ಪಡೆದಷ್ಟೂ, ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದಿದ್ದಾರೆ.

Comments are closed.