ಅಂತರಾಷ್ಟ್ರೀಯ

ಜಾಫ್ನಾ – ಚೆನ್ನೈ ವಿಮಾನಯಾನ ಮತ್ತೆ ಆರಂಭ

Pinterest LinkedIn Tumblr
ಜಾಫ್ನಾ: ಶ್ರೀಲಂಕಾದ ಉತ್ತರ ಪ್ರಾಂತ್ಯ ಮತ್ತು ದಕ್ಷಿಣ ಭಾರತದ ನಡುವೆ ಸಂಪರ್ಕ ಸಾಧನ ಬಲಪಡಿಸುವ ಮೂಲಕ ಭಾರತದ ಜತೆಗಿನ ಸಹಭಾಗಿತ್ವವನ್ನು ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಶ್ರೀಲಂಕಾ ಕ್ರಮ ಕೈಗೊಂಡಿದ್ದು, ಜಾಫ್ನಾ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮರು ಅಭಿವೃದ್ಧಿಪಡಿಸಿದೆ.

ಶ್ರೀಲಂಕಾ ಅಧ್ಯಕ್ಷ ಎಂ.ಸಿರಿಸೇನಾ ಅವರು, 1950 ದಶಲಕ್ಷ ರೂ. (ಶ್ರೀಲಂಕಾ ರೂಪಾಯಿ) ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ ನೂತನ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದರು.

ಇದಕ್ಕೆ ಭಾರತ 300 ದಶಲಕ್ಷ ರೂ. ನೆರವು ನೀಡಿತ್ತು. ಇದರ ವಾಣಿಜ್ಯ ಕಾರ್ಯಾಚರಣೆ ಆರಂಭದ ಅಂಗವಾಗಿ ಚೆನ್ನೈನಿಂದ ಹೊರಟ ಅಲೈನ್ಸ್ ಏರ್ ವಿಮಾನ ನೂತನ ನಿಲ್ದಾಣದಲ್ಲಿ ಬಂದಿಳಿದಿದೆ. ಎಲ್‌ಟಿಟಿಇ ನೇತೃತ್ವದ ನಾಗರಿಕ ಯುದ್ಧದ ಹಿನ್ನೆಲೆಯಲ್ಲಿ ದ್ವೀಪ ರಾಷ್ಟ್ರದ ಜಾಫ್ನಾಗೆ ವಿಮಾನ ಸಂಪರ್ಕವನ್ನು 40 ವರ್ಷ ಹಿಂದೆ ಕಡಿತಗೊಳಿಸಲಾಗಿತ್ತು.

“ಈ ಸಹಭಾಗಿತ್ವವು ಜಾಫ್ನಾ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ” ಎಂದು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅಭಿಪ್ರಾಯಪಟ್ಟರು.

“ಜಾಫ್ನಾ ಅಭಿವೃದ್ಧಿಪಡಿಸಲು ಭಾರತ ಉತ್ಸಾಹ ತೋರಿದ್ದಲ್ಲದೇ ನೆರವನ್ನೂ ನೀಡಿದೆ. ಭಾರತ 300 ದಶಲಕ್ಷ ರೂ. ಹೂಡಿಕೆ ಮಾಡಿದೆ. ಹಿಂದೂ ಮಹಾಸಾಗರ ವಲಯದಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವುದು ದಕ್ಷಿಣ ಏಷ್ಯಾ. ಆಂತರಿಕ ಚರ್ಚೆಗಳ ಮೂಲಕ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೆ ಯುದ್ಧ ಮಾಡಬಾರದು; ಅಂಥ ಯುದ್ಧ ದಕ್ಷಿಣ ಏಷ್ಯಾದ ಪವಾಡ ಮಾಯವಾಗಲು ಕಾರಣವಾಗುತ್ತದೆ” ಎಂದು ಹೇಳಿದರು.

Comments are closed.