
ನವದೆಹಲಿ: ಜಿ-7 ಶೃಂಗಸಭೆಯಲ್ಲಿ ಭಾಗಿಯಾಗಲು ಪ್ಯಾರಿಸ್ಗೆ ತೆರಳಿರುವ ಪ್ರಧಾನಿ ಮೋದಿ ಜಮ್ಮು- ಕಾಶ್ಮೀರ ವಿಚಾರ ಸೇರಿದಂತೆ ಅನೇಕ ವಿಚಾರ ಕುರಿತು ಫ್ರಾನ್ಸ್ ಅಧ್ಯಕ್ಷ ಇಮ್ಯೂನಯಲ್ ಮ್ಯಾಕ್ರನ್ ಜೊತೆ 90 ನಿಮಿಷಗಳ ಕಾಲ ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಕಾಶ್ಮೀರದಲ್ಲಿ ಬದಲಾವಣೆ ತಂದು ಭಾರತದ ಸಾರ್ವಭೌಮತ್ವವನ್ನು ಕಾಪಾಡಲಾಗಿದೆ. ಭಾರತದ ಕೌಶಲ್ಯ ಅಭಿವೃದ್ಧಿ, ನಾಗರಿಕ ವಿಮಾನಯಾನ, ಐಟಿ, ಬಾಹ್ಯಾಕಾಶ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಫ್ರಾನ್ಸ್ ವಿಫುಲ ಅವಕಾಶ ಹೊಂದಿದೆ. ರಕ್ಷಣಾ ಸಹಕಾರ ನಮ್ಮ ಎರಡು ದೇಶಗಳ ಪ್ರಮುಖ ಸಹಯೋಗಗಳಲ್ಲಿ ಒಂದು ಎಂದರು.
ಬಳಿಕ ಯುನೆಸ್ಕೋ ಕಚೇರಿಯಲ್ಲಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ನಿರ್ಮಾಣ ಮಾಡುತ್ತಿರುವ ದೇಶಕ್ಕೆ ಇಡೀ ವಿಶ್ವ ಹೆಮ್ಮೆ ಪಡುತ್ತಿದೆ. ಕೌಟುಂಬಿಕ ರಾಜಕಾರಣ ಭಾರತದಲ್ಲಿ ಶೀಘ್ರವಾಗಿ ಅಂತ್ಯವಾಗಲಿದೆ. ದೇಶದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜನರ ಹಣ ಲೂಟಿ ಮಾಡುವವರ ಹಾಗೂ ಭಯೋತ್ಪಾದಕರ ಹೆಡೆಮುರಿ ಕಟ್ಟಲಾಗಿದೆ, ದೇಶ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸುತ್ತಿದೆ ಎಂದರು.
ಫುಟ್ಬಾಲ್ ಪ್ರೇಮಿಗಳಿರುವ ದೇಶಕ್ಕೆ ನಾನು ಆಗಮಿಸಿದ್ದೇವೆ. ನಿಮಗೆಲ್ಲಾ ಗೋಲ್ ಪ್ರಾಮುಖ್ಯತೆ ತಿಳಿದಿದೆ, ಅದೇ ಅಂತಿಮ ಸಾಧನೆ. ಕಳೆದ ಐದು ವರ್ಷದಲ್ಲಿ ಸಾಧಿಸಲು ಅಸಾಧ್ಯ ಎಂಬ ಗೋಲ್ಗಳನ್ನು ಹೊಂದಿ ಅದರಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಚಂದ್ರನ ಅಂಗಳಕ್ಕೆ ಕಾಲಿಟ್ಟ ನಾಲ್ಕನೇ ದೇಶ ಭಾರತವಾಗಿದೆ. ಮಕ್ಕಳ ಅಭಿವೃದ್ಧಿ, ಕ್ಷಯ ರೋಗ ನಿರ್ಮೂಲನೆಗೆ ನಾವು ದಿಟ್ಟ ಹೆಜ್ಜೆ ಇಡುತ್ತಿದ್ದೇವೆ. ತ್ರಿವಳಿ ತಲಾಖ್ ನಿಷೇಧ ಸೇರಿದಂತೆ ಅನೇಕ ಮಹತ್ವದ ನಿರ್ಧಾರವನ್ನು ನಮ್ಮ ಸರ್ಕಾರದ ಆರಂಭಿಕ ಹಂತದಲ್ಲಿ ಕೈ ಗೊಂಡಿದ್ದೇವೆ.
ಫ್ರಾನ್ಸ್, ಭಾರತ ಸಂಬಂಧಕ್ಕೆ ಹೊಸ ವ್ಯಾಖ್ಯಾನ ನೀಡಿದ ಅವರು, ಇನ್ಫ್ರಾ ಎಂದರೆ ಇಂಡಿಯಾ ಫ್ರಾನ್ಸ್ (INFRA: India+France). ಭಾರತ, ಫ್ರಾನ್ಸ್ ಭಯೋತ್ಪಾನೆ ವಿರುದ್ಧ ಹೋರಾಡಲಿದೆ. ಇನ್ನು ಕೆಲವೇ ವರ್ಷಗಳಲ್ಲಿ ಪ್ಯಾರಿಸ್ನಲ್ಲಿಯೂ ಗಣಪತಿ ಬಪ್ಪ ಮೋರೆಯಾ ಪಠಣ ಕೇಳಿಸಲಿದೆ ಎಂದರು.
ನಂತರ ಮಾತನಾಡಿದ ಫ್ರಾನ್ಸ್ ಅಧ್ಯಕ್ಷ, ಕಾಶ್ಮೀರ ವಿಷಯವನ್ನು ಭಾರತ ಹಾಗೂ ಪಾಕಿಸ್ತಾನ ದ್ವಿಪಕ್ಷೀಯ ಮಾತುಕತೆ ನಡೆಸಿ ಬಗೆಹರಿಸಿಕೊಳ್ಳಬೇಕು ಇದರಲ್ಲಿ ಮೂರನೇ ದೇಶದ ಹಸ್ತಕ್ಷೇಪ ಮಾಡಬಾರದು ಎಂದು ಸಲಹೆ ನೀಡಿದರು.
ಕಾಶ್ಮೀರ ವಿಷಯ ಕುರಿತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಜೊತೆ ಮಾತನಾಡಿ, ಎರಡು ದೇಶಗಳು ಮಾತುಕತೆ ಮೂಲಕ ಈ ವಿಷಯ ಬಗೆಹರಿಸಿಕೊಳ್ಳುವಂತೆ ತಿಳಿಸುತ್ತೇನೆ ಎಂದರು.
ಇದೇ ವೇಳೆ ಮುಂದಿನ ತಿಂಗಳು ಭಾರತಕ್ಕೆ ಫ್ರಾನ್ಸ್ 36 ರಫೇಲ್ ಫೈಟರ್ ಜೆಟ್ ಕಳುಹಿಸುತ್ತಿರುವುದಾಗಿ ತಿಳಿಸಿದರು.
Comments are closed.