ಅಂತರಾಷ್ಟ್ರೀಯ

ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದು: ಭಾರತದ ನಿರ್ಣಯ ವಿರುದ್ಧ ವಿಶ್ವಸಂಸ್ಥೆ ಸೇರಿದಂತೆ ಎಲ್ಲೆಡೆ ಹೋರಾಟಕ್ಕೆ ಇಮ್ರಾನ್ ಖಾನ್ ಪ್ರತಿಜ್ಞೆ

Pinterest LinkedIn Tumblr

ಇಸ್ಲಾಮಾಬಾದ್: ಕಾಶ್ಮೀರದ ಸ್ವಾಯತ್ತತೆಯನ್ನು ಕಿತ್ತೊಗೆದಿರುವ ಭಾರತದ ನಿರ್ಧಾರದ ವಿರುದ್ಧ ವಿಶ್ವಸಂಸ್ಥೆ ಸೇರಿದಂತೆ ಎಲ್ಲೆಡೆ ಹೋರಾಟ ನಡೆಸುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಪ್ರತಿಜ್ಞೆ ಮಾಡಿದ್ದಾರೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಹಾಗೂ ವಿಶೇಷಾಧಿಕಾರ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಅಂತಾರಾಷ್ಟ್ರೀಯ ಕಾನೂನನ್ನು ಭಾರತ ಉಲ್ಲಂಘಿಸಿದೆ, ಅಲ್ಲದೆ ಜನಾಂಗೀಯ ಶುದ್ಧೀಕರಣ ಭೀತಿ ಎದುರಾಗಿದೆ ಎಂದು ಹೇಳಿದ್ದಾರೆ.

ಭಾರತ ಸರ್ಕಾರ ಸೋಮವಾರ ಕೈಗೊಂಡ ನಿರ್ಧಾರದ ಕುರಿತು ಇಡೀ ಜಗತ್ತಿಗೆ ಸಾರಲಾಗುವುದು. ವಿಶ್ವಸಂಸ್ಥೆ ಭದ್ರತಾ ಆಯೋಗದ ಮೂಲಕ 370ನೇ ವಿಧಿ ರದ್ದತಿಯ ಕುರಿತು ಅಧ್ಯಯನ ನಡೆಯುತ್ತಿದ್ದು, ಸಾಮಾನ್ಯ ಸಭೆಯಲ್ಲಿ ಇದರ ವಿರುದ್ಧ ದನಿಯೆತ್ತಲಾಗುವುದು. ಅಲ್ಲದೆ ಮಾಧ್ಯಮ ಸೇರಿದಂತೆ ಪ್ರತಿಯೊಂದು ವೇದಿಕೆಯಲ್ಲೂ ಈ ಕುರಿತು ಚರ್ಚಿಸಲಾಗುವುದು ಎಂದು ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಸಂಸತ್ ಗೆ ಮಾಹಿತಿ ನೀಡಿದರು.

ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ತೊಡೆದು ಹಾಕುವ ಮೂಲಕ ಬಹುಸಂಖ್ಯಾತ ಮುಸ್ಲಿಮರಿರುವ ರಾಜ್ಯವನ್ನು ಬದಲಿಸಲು ಭಾರತ ತೀರ್ಮಾನಿಸಿರುವಂತಿದೆ ಹೀಗಾಗಿಯೇ ಕಾಶ್ಮೀರದಲ್ಲಿ ಜನಾಂಗೀಯ ಶುದ್ಧೀಕರಣದ ಭೀತಿ ಎದುರಾಗಿದೆ ಎಂದಿದ್ದಾರೆ.

“ಪ್ರಸ್ತುತ ಕಾಶ್ಮೀರದಲ್ಲಿರುವ ಸ್ಥಳೀಯರನ್ನು ಓಡಿಸಿ ಇತರ ಜನಾಂಗೀಯರನ್ನು ಕರೆತಂದು ಅವರನ್ನೇ ಬಹುಸಂಖ್ಯಾತರನ್ನಾಗಿ ಮಾಡಲಿದ್ದಾರೆ. ಇದರಿಂದ ಸ್ಥಳೀಯರು ಗುಲಾಮರಲ್ಲದೆ ಬೇರೇನೂ ಆಗಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ. ವಿಶೇಷ ಸ್ಥಾನಮಾನ ರದ್ದತಿ ಹಿನ್ನೆಲೆಯಲ್ಲಿ ಪ್ರತಿಭಟನೆ ಹಾಗೂ ಅಹಿತಕರ ಘಟನೆ ನಡೆಯುವ ಸಾಧ್ಯತೆಯಿರುವ ಕಾರಣ, ಕಾಶ್ಮೀರದ ಪ್ರಮುಖ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಸ್ತುತ ನಿಷೇಧಾಜ್ಞೆ ವಿಧಿಸಲಾಗಿದೆ ಭಾರತ ಸರ್ಕಾರದ ನಿರ್ಧಾರದಿಂದ ಜಮ್ಮು ಕಾಶ್ಮೀರದಲ್ಲಿನ ಒಂದು ವರ್ಗದ ಜನರು ಕುಪಿತರಾಗಿದ್ದಾರೆ ಎಂದು ಬಿಬಿಸಿ ವರದಿ ತಿಳಿಸಿದೆ.

ಹಲವೆಡೆ ಕಲ್ಲುತೂರಾಟಕ್ಕೆ ಮುಂದಾದವರನ್ನು ಬಂಧಿಸಲಾಗಿದೆ ಸ್ಥಳೀಯ ಮುಖಂಡರನ್ನು ವಶಕ್ಕೆ ಪಡೆಯಲಾಗಿದ್ದು, ಅವರು ತಮ್ಮ ಕುಟುಂಬ ಸದಸ್ಯರನ್ನು ಸಂಪರ್ಕಿಸಲು ಅವಕಾಶ ಇಲ್ಲದಂತಾಗಿದೆ ಯಾವುದೇ ಪರಿಸ್ಥಿತಿ ನಿಭಾಯಿಸಲು, ಈಗಾಗಲೇ ಬಿಗಿ ಭದ್ರತೆಯಿದ್ದ ರಾಜ್ಯಕ್ಕೆ ಹೆಚ್ಚುವರಿ ಸೇನಾ ತುಕಡಿ ರವಾನಿಸಲಾಗಿದೆ.

ಜಮ್ಮು-ಕಾಶ್ಮೀರದಲ್ಲಿ 370 ನೇ ವಿಧಿ ರದ್ದುಪಡಿಸುವ ಮತ್ತು ರಾಜ್ಯವನ್ನು ವಿಭಜಿಸುವ ಸರ್ಕಾರದ ಕಾಶ್ಮೀರ ನೀತಿ ಮಸೂದೆ ಸಂಸತ್ ನ ಉಭಯ ಸದನಗಳಲ್ಲಿ ಅನುಮೋದನೆಗೊಂಡಿದೆ ಹೀಗಾಗಿ ಜಮ್ಮು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶವನ್ನಾಗಿಸಿ 2 ಭಾಗಗಳಾಗಿ ವಿಭಜಿಸಲಾಗಿದೆ. ಜಮ್ಮು ಕಾಶ್ಮೀರವು ವಿಧಾನಸಭೆಯುಕ್ತ ಕೇಂದ್ರಾಡಳಿತ ಪ್ರದೇಶವಾಗಿದ್ದು, ಲಡಾಖ್ ವಿಧಾನಸಭೆ ರಹಿತ ಕೇಂದ್ರಾಡಳಿತ ಪ್ರದೇಶವಾಗಿ ರೂಪುಗೊಂಡಿದೆ.

Comments are closed.