ಅಂತರಾಷ್ಟ್ರೀಯ

ಅಮೆರಿಕದಲ್ಲಿ ಬಿಸಿಲಿನ ತಾಪಕ್ಕೆ ಭಾರತದ ಬಾಲಕಿ ಸಾವು

Pinterest LinkedIn Tumblr


ಅರಿಜೋನಾ: ಬಿಸಿಲಿನ ತಾಪ ತಾಳಲಾರದೆ ಭಾರತ ಮೂಲದ ಆರು ವರ್ಷದ ಬಾಲಕಿಯೊಬ್ಬಳು ಅಮೆರಿಕಾದ ಅರಿಜೋನ ಮರುಭೂಮಿಯಲ್ಲಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಮೆಕ್ಸಿಕೋ ಗಡಿಯಿಂದ ಅಮೆರಿಕಕ್ಕೆ ವಲಸೆ ಹೋಗುತ್ತಿದ್ದ ಭಾರತೀಯ ಮೂಲದ ಪರಿವಾರದಲ್ಲಿದ್ದ ಬಾಲಕಿಯ ತಾಯಿ ಇತರರೊಂದಿಗೆ ನಿರು ಹುಡುಕಿಕೊಂಡು ಹೋದ ಸಂದರ್ಭದಲ್ಲಿ ಬಿಸಿಲಿನ ತಾಪ ತಾಳಲಾರದೆ ಬಾಲಕಿ ಮೃತಪಟ್ಟಿದ್ದಾಳೆ. ಅರಿಜೋನಾ ಮರುಭೂಮಿಯಲ್ಲಿ ವಲಸಿಗ ಕುಟುಂಬದ ಬಾಲಕಿ ಮೃತಪಟ್ಟ ಎರಡನೇ ಪ್ರಕರಣ ಇದಾಗಿದೆ.

ಬಾಲಕಿಯನ್ನು ಗುರುಪ್ರೀತ್ ಎಂದು ಗುರುತಿಸಲಾಗಿದ್ದು, ಆಕೆ ತನ್ನ ಏಳನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿತ್ತು. ಆದರೆ ಅರಿಜೋನಾದ ಲ್ಯೂಕ್‌ವಿಲ್ಲೆ ಎಂಬಲ್ಲಿ ಅಮೇರಿಕಾ ಗಡಿ ಗಸ್ತು ಪಡೆ ಅಧಿಕಾರಿಗಳಿಗೆ ಶವವಾಗಿ ಸಿಕ್ಕಿದ್ದಾಳೆ. ಅಂದು 42 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದ ಕಾರಣ ಗರಿಷ್ಠ ಉಷ್ಣಾಂಶ ತಾಳಲಾರದೆ ಬಾಲಕಿ ಗುರುಪ್ರೀತ್ ಕೌರ್ ಸೂರ್ಯಾಘಾತದಿಂದ ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತ ಪಡಿಸಿದ್ದಾರೆ.

ಮೆಕ್ಸಿಕೊದಿಂದ ಹೆಚ್ಚಿನ ಸಂಖ್ಯೆಯ ಭಾರತೀಯ ಪ್ರಜೆಗಳು ಮೆಕ್ಸಿಕೋ ಮೂಲಕ ಅಮೇರಿಕಾ ಪ್ರವೇಶಿಸುತ್ತಿದ್ದಾರೆ ಎಂದು ವಲಸೆ ಅಧಿಕಾರಿಗಳು ತಿಳಿಸಿದ್ದಾರೆ. ಕಳ್ಳಸಾಗಣೆ ಕಾರ್ಟೆಲ್‌ಗಳ ನೇತೃತ್ವದಲ್ಲಿ ಪ್ರಯಾಸಕರವಾದ ಪ್ರಯಾಣವನ್ನು ಮಾಡುವ ಸಾವಿರಾರು ಆಫ್ರಿಕನ್ನರು ಮತ್ತು ಏಷ್ಯನ್ ವಲಸಿಗರಲ್ಲಿ ಇವರೂ ಸೇರಿದ್ದಾರೆ. ಮಂಗಳವಾರ ಬೆಳಿಗ್ಗೆ 10 ಗಂಟೆಗೆ ದೂರದ ಗಡಿ ಪ್ರದೇಶದಲ್ಲಿ ಕಳ್ಳಸಾಗಾಣಿಕೆದಾರರು ಬಿಟ್ಟು ಹೋದ ಐವರು ಭಾರತೀಯ ಪ್ರಜೆಗಳ ಗುಂಪಿನಲ್ಲಿ ಬಾಲಕಿ ಮತ್ತು ಆಕೆಯ ತಾಯಿ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲಿಂದ ಅವರು ಅಮೆರಿಕಾ ಕಡೆ ಸಾಗಿದ್ದು, ಸುಸ್ತಾಗಿದ್ದ ಮಗಳನ್ನು ನೋಡಿಕೊಳ್ಳುವಂತೆ ಮಹಿಳೆಯೊಬ್ಬರ ಬಳಿ ಬಿಟ್ಟು ನೀರು ಹುಡುಕುತ್ತಾ ತಾಯಿ ಎಲ್ಲಿಗೋ ಹೋದ ಸಂದರ್ಭದಲ್ಲಿ ಮಗು ಸಾವನ್ನಪ್ಪಿದೆ ಎಂದು ಅಮೇರಿಕಾ ಗಡಿ ಗಸ್ತು ಅಧಿಕಾರಿಗಳು ತಿಳಿಸಿದ್ದಾರೆ.

ಬಳಿಕ ಮಗಳನ್ನು ಹುಡುಕುತ್ತಾ 22 ಗಂಟೆಗಳ ಕಾಲ ಸುತ್ತಾಡಿದ ಬಳಿಕ ಹೆಜ್ಜೆ ಗುರುತುಗಳನ್ನು ಹಿಂಬಾಲಿಸಿದ ಗಸ್ತು ಅಧಿಕಾರಿಗಳಿಗೆ ಬಾಲಕಿಯ ತಾಯಿ ಸಿಕ್ಕಿದ್ದು, ಈಗ ಅಧಿಕಾರಿಗಳ ವಶದಲ್ಲಿದ್ದಾಳೆ.

Comments are closed.