ಅಂತರಾಷ್ಟ್ರೀಯ

ಶ್ರೀಲಂಕಾದಲ್ಲಿ ಮುಸ್ಲಿಮರ ಮೇಲಿನ ಹಿಂಸಾಚಾರ; ಮಸೀದಿಗಳು, ಉದ್ದಿಮೆಗಳ ಧ್ವಂಸ: ಸಾಮಾಜಿಕ ಜಾಲತಾಣಗಳಿಗೆ ತಾತ್ಕಾಲಿಕ ನಿಷೇಧ!

Pinterest LinkedIn Tumblr

ಕೊಲಂಬೋ: ಶ್ರೀಲಂಕಾದಲ್ಲಿ ಚರ್ಚ್ ಮೇಲೆ ಇಸ್ಲಾಮಿಕ್ ಭಯೋತ್ಪಾದಕರು ಆತ್ಮಾಹುತಿ ದಾಳಿ ನಡೆಸಿದ ನಂತರ ಮುಸ್ಲಿಂ ವಿರೋಧಿ ಹಿಂಸಾಚಾರ ತಾರಕಕ್ಕೇರಿದೆ.

ಇಸ್ಲಾಮಿಕ್ ಭಯೋತ್ಪಾದಕರ ಕೃತ್ಯಕ್ಕೆ ಪ್ರತಿಯಾಗಿ ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿ ಮಸೀದಿಗಳು ಹಾಗೂ ಮುಸ್ಲಿಮರ ಉದ್ದಿಮೆಗಳನ್ನು ಧ್ವಂಸಗೊಳಿಸಲಾಗುತ್ತಿದೆ. ಈ ಘಟನೆಗಳಿಂದಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ ಎಂದು ಮುಸ್ಲಿಂ ಕೌನ್ಸಿಲ್ ಆಫ್ ಶ್ರೀಲಂಕಾ ಹೇಳಿದೆ.

ಇದೇ ವೇಳೆ ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡು ನಡೆಸಲಾಗುತ್ತಿರುವ ದಾಳಿಯನ್ನು ತಡೆಗಟ್ಟುವುದಕ್ಕೆ ಸರ್ಕಾರ ಕ್ರಮ ಕೈಗೊಂಡಿದ್ದು, ಫೇಸ್ ಬುಕ್, ವಾಟ್ಸ್ ಆಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.

ಫೇಸ್ ಬುಕ್ ನಲ್ಲಿ ಪ್ರಾರಂಭವಾದ ವಾಗ್ವಾದ ಕೊನೆಗೆ ಮಸೀದಿ ಹಾಗೂ ಮುಸ್ಲಿಂ ಮಾಲಿಕತ್ವದ ಅಂಗಡಿಗಳ ಮೇಲೆ ಕಲ್ಲು ತೂರಾಟ, ಮುಸ್ಲಿಂ ವ್ಯಕ್ತಿಗೆ ಥಳಿಸಿರುವ ನಡೆಯುವವರೆಗೂ ಹೋಗಿರುವ ಘಟನೆ ವರದಿಯಾಗಿದೆ. ಇದರಿಂದಾಗಿ ಎಚ್ಚೆತ್ತುಕೊಂಡಿರುವ ಸರ್ಕಾರ ಸಾಮಾಜಿಕ ಜಾಲತಾಣಗಳಿಗೆ ತಾತ್ಕಾಲಿಕ ನಿಷೇಧ ವಿಧಿಸಿದೆ.

ಮುಸ್ಲಿಮರ ಮೇಲಿನ ಹಲ್ಲೆಗೆ ಕಾರಣವಾದ ಪೋಸ್ಟ್ ನ್ನು ಬರೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಅಬ್ದುಲ್ ಹಮೀದ್ ಮೊಹಮ್ಮದ್ ಹಂಸರ್ ಎಂದು ಗುರುತಿಸಲಾಗಿದೆ. ಫೇಸ್ ಬುಕ್ ನಲ್ಲಿ ಆತ ಒಂದು ದಿನ ನೀವೆಲ್ಲಾ ಕಣ್ಣೀರಿಡುತ್ತೀರಿ ಎಂದು ಹಿಂಸಾಚಾರ ನಡೆಸುವ ಬೆದರಿಕೆ ಹಾಕಿದ್ದ.

Comments are closed.