ಅಂತರಾಷ್ಟ್ರೀಯ

ಶ್ರೀಲಂಕಾ ದಾಳಿ ನಡೆಸಿದ ಉಗ್ರರ ಬಳಿ ಸಿಕ್ಕಿದ್ದು ಬರೊಬ್ಬರಿ 140 ಮಿಲಿಯನ್ ನಗದು ಹಣ, 7 ಬಿಲಿಯನ್ ಮೌಲ್ಯದ ಆಸ್ತಿ ಪಾಸ್ತಿ

Pinterest LinkedIn Tumblr

ಕೊಲಂಬೋ: 253 ಮಂದಿಯ ಮಾರಣ ಹೋಮ ನಡೆದಿದ್ದ ಶ್ರೀಲಂಕಾ ಉಗ್ರ ದಾಳಿಗೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದ್ದು, ತನಿಖೆಯಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಲಭ್ಯವಾಗುತ್ತಿವೆ.

ಈ ಹಿಂದೆ ಲಂಕಾ ದಾಳಿಯಲ್ಲಿ ಇಸಿಸ್ ಮಾತ್ರವಲ್ಲದೇ, ಬೆಂಗಳೂರು, ತಮಿಳುನಾಡು ಮತ್ತು ಕೇರಳ ನಂಟಿರುವ ಕುರಿತು ಅಲ್ಲಿನ ತನಿಖಾ ಸಂಸ್ಥೆಗಳು ವರದಿ ನೀಡಿದ್ದವು. ಇದರ ಬೆನ್ನಲ್ಲೇ ಇದೀಗ ಈ ದಾಳಿ ನಡೆಸಿದ್ದ ನ್ಯಾಷನಲ್ ತೌವ್ಹೀದ್ ಜಮಾತ್ ಉಗ್ರ ಸಂಘಟನೆ ಸಾಮಾನ್ಯ ಸಂಘಟನೆಯಲ್ಲಿ ಬದಲಿಗೆ ಅತ್ಯಂತ ಶ್ರೀಮಂತ ಉಗ್ರ ಸಂಘಟನೆ ಎಂಬ ಸ್ಫೋಟಕ ಮಾಹಿತಿಯನ್ನು ತನಿಖಾಧಿಕಾರಿಗಳು ಹೊರ ಹಾಕಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಶ್ರೀಲಂಕಾದ ಪೊಲೀಸ್ ವಕ್ತಾರ ಎಸ್ ಪಿ ರುವಾನ್ ಗುಣಶೇಖರ ಅವರು, ತನಿಖೆ ವೇಳೆ ನ್ಯಾಷನಲ್ ತೌವ್ಹೀದ್ ಜಮಾತ್ ಉಗ್ರ ಸಂಘಟನೆಗೆ ಸೇರಿದ ಸುಮಾರು 140 ಮಿಲಿಯನ್ ನಗದು ಹಣ, 7 ಬಿಲಿಯನ್ ಮೌಲ್ಯದ ಆಸ್ತಿ ಪಾಸ್ತಿ ಪತ್ತೆಯಾಗಿದೆ. ಈ ಸಂಬಂಧ ಅಗತ್ಯ ದಾಖಲೆಗಳನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಪ್ರಕರಣಕ್ಕೆ ಸಂಬಂಧಿಸದಂತೆ ಈ ವರೆಗೂ 73 ಮಂದಿ ಶಂಕಿತರನ್ನು ಬಂಧಿಸಲಾಗಿದ್ದು, ಈ ಪೈಕಿ 7 ಮಂದಿ ಮಹಿಳೆಯರೂ ಸೇರಿದಂತೆ 54 ಶಂಕಿತರನ್ನು ಸಿಐಡಿ ವಶಕ್ಕೆ ಪಡೆದಿದ್ದು, ಉಳಿದ ಇಬ್ಬರು ಮಹಿಳೆಯರೂ ಸೇರಿದಂತೆ 19 ಮಂದಿಯನ್ನು ಟಿಐಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಅಂತೆಯೇ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಬೆಂಬಲದೊಂದಿಗೆ ಎನ್ ಟಿಜೆ (ನ್ಯಾಷನಲ್ ತೌವ್ಹೀದ್ ಜಮಾತ್) ಉಗ್ರ ಸಂಘಟನೆ ಶ್ರೀಲಂಕಾದಲ್ಲಿ 2016ರಿಂದಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಿತ್ತು ಎಂಬ ಮಹತ್ವದ ಅಂಶ ತಿಳಿದುಬಂದಿದೆ. ಪ್ರಸ್ತುತ ಉಗ್ರ ಸಂಘಟನೆಗ ಸೇರಿದ ಅಥವಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಸಾಧಿಸಿದ್ದ ವ್ಯಕ್ತಿಗಳು ಮತ್ತು ಅವರ ಕುಟುಂಬಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ರುವಾನ್ ಗುಣಶೇಖರ ಮಾಹಿತಿ ನೀಡಿದ್ದಾರೆ.

ಕಳೆದ ಈಸ್ಟರಕ್ ಸಂಡೆಯಂದು ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ನಡೆದಿದ್ದ ಸರಣಿ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ 11 ಮಂದಿ ಭಾರತೀಯರೂ ಸೇರಿದಂತೆ 253 ಮಂದಿ ಸಾವಿಗೀಡಾಗಿದ್ದರು. ಅಂತೆಯೇ 500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

Comments are closed.