ಅಂತರಾಷ್ಟ್ರೀಯ

ಶ್ರೀಲಂಕಾದ ಚರ್ಚ್ ಗಳಲ್ಲಿ ಸರಣಿ ಬಾಂಬ್ ದಾಳಿ: 137 ಜನರು ಸಾವು

Pinterest LinkedIn Tumblr

ಕೊಲಂಬೊ: ಶ್ರೀಲಂಕಾದ ಮೂರು ಚರ್ಚ್‌ ಹಾಗೂ ಮೂರು ಹೋಟೆಲ್‌ಗಳಲ್ಲಿ ಸರಣಿ ಬಾಂಬ್ ಸ್ಫೋಟವಾಗಿದ್ದು, ಕನಿಷ್ಠ 137ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ. 400ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಈಸ್ಟರ್ ದಿನವಾದ ಇಂದು (ಭಾನುವಾರ) ಚರ್ಚ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಹೀಗಾಗಿ ಸಾವು ನೋವಿನ ಸಂಖ್ಯೆ ಅಧಿಕವಾಗಿದೆ.

 

ಕೊಲಂಬೊದ ಸೆಂಟ್ ಆಂಥೋನಿ ಶ್ರೈನ್ ಚರ್ಚ್‌ನಲ್ಲಿ ಮೊದಲ ಬಾಂಬ್ ಸ್ಪೋಟಗೊಂಡಿದೆ. ಸ್ಪೋಟದ ಶಬ್ದ ಕೇಳುತ್ತಿದ್ದಂತೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಇಲ್ಲಿಯವರೆಗೂ ಯಾವುದೇ ಉಗ್ರ ಸಂಘಟನೆ ದಾಳಿಯ ಹೊಣೆ ಹೊತ್ತಿಲ್ಲ.

ಘಟನೆಯಲ್ಲಿ 137ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರೆ, 400 ಕ್ಕೂ ಅಧಿಕ ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಘೋರ ಘಟನೆಯನ್ನು ಖಂಡಿಸಿರುವ ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಕೊಲಂಬೊದಲ್ಲಿರುವ ಭಾರತೀಯ ಹೈ ಕಮಿಷನರ್ ಜತೆ ನಿರಂತರ ಸಂಪರ್ಕದಲ್ಲಿರುವುದಾಗಿ ಟ್ವೀಟ್ ಮಾಡಿದ್ದಾರೆ.

ಇದರ ಬೆನ್ನಲ್ಲೇ ಸ್ಪೋಟಕ ಮಾಹಿತಿಯೊಂದು ಹೊರಬಂದಿದ್ದು ಹತ್ತು ದಿನಗಳ ಹಿಂದೆಯೇ ಶ್ರೀಲಂಕಾದ ಪಾರಂಪರಿಕ ಚರ್ಚ್ ಗಳ ಮೇಲೆ ಬಾಂಬ್ ದಾಳಿ ನಡೆಯಲಿದೆ ಎಂದು ಶ್ರೀಲಂಕಾದ ಪೊಲೀಸ್ ಮುಖ್ಯಸ್ಥ ಎಚ್ಚರಿಕೆ ನೀಡಿದ್ದರು.

ಪೊಲೀಸ್ ಮುಖ್ಯಸ್ಥ ಪೂಜೂತ್ ಜಯಸುಂದರ ಅವರು ಏಪ್ರಿಲ್ 11ರಂದು ಶ್ರೀಲಂಕಾದ ಉನ್ನತ ತನಿಖಾಧಿಕಾರಿಗಳಿಗೆ ಈ ಕುರಿತು ಎಚ್ಚರಿಕೆ ನೀಡಿದ್ದರು ಎಂದು ಎ.ಎಫ್.ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

Comments are closed.