ಅಂತರಾಷ್ಟ್ರೀಯ

ಪಾಕಿಸ್ತಾನಕ್ಕೆ ಅಮೇರಿಕ ನೀಡಿರುವ ಎಲ್ಲಾ ಎಫ್-16 ಯುದ್ಧ ವಿಮಾನಗಳು ಸುರಕ್ಷಿತವಾಗಿದ್ದು, ಭಾರತದ ಹೇಳಿಕೆ ನಿಜವಲ್ಲ: ಅಮೆರಿಕಾದ ಖ್ಯಾತ ಮ್ಯಾಗಜೀನ್ ವರದಿ

Pinterest LinkedIn Tumblr

ವಾಷಿಂಗ್ಟನ್: ಪಾಕಿಸ್ತಾನಕ್ಕೆ ನೀಡಿರುವ ಎಲ್ಲಾ ಎಫ್-16 ಯುದ್ಧ ವಿಮಾನಗಳು ಪಾಕಿಸ್ತಾನದಲ್ಲಿದ್ದು, ಗಣನೆಗೆ ಸಿಗುತ್ತಿದೆ ಎಂದು ಅಮೆರಿಕಾದ ಖ್ಯಾತ ಮ್ಯಾಗಜೀನ್ ವರದಿ ಮಾಡಿದೆ.

ಕಳೆದ ಫೆಬ್ರವರಿ 27ರಂದು ಏರ್ ಸ್ಟ್ರೈಕ್ ನಲ್ಲಿ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವೊಂದನ್ನು ಹೊಡೆದುರುಳಿಸಲಾಗಿದೆ ಎಂಬ ಭಾರತದ ಹೇಳಿಕೆಗೆ ಈ ವರದಿ ವ್ಯತಿರಿಕ್ತವಾಗಿದೆ.

ಕಳೆದ ಫೆಬ್ರವರಿ 28ರಂದು ಭಾರತೀಯ ವಾಯುಪಡೆ ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಸ್ಫೋಟಗೊಳಿಸಿದ ಅಮ್ರಾನ್ ಕ್ಷಿಪಣಿಯ ಚೂರುಗಳನ್ನು ಪ್ರದರ್ಶಿಸಿತ್ತು. ಕಾಶ್ಮೀರದಲ್ಲಿ ಭಾರತೀಯ ಮಿಲಿಟರಿ ವಸಾಹತುಗಳನ್ನು ಗುರಿಯಾಗಿಟ್ಟುಕೊಂಡು ನಡೆಸಲಾದ ವೈಮಾನಿಕ ದಾಳಿಯಲ್ಲಿ ಅಮೆರಿಕಾ ಉತ್ಪಾದನೆಯ ಎಫ್-16 ಯುದ್ಧವಿಮಾನವನ್ನು ಪಾಕಿಸ್ತಾನ ಬಳಸಿತ್ತು ಎಂಬ ಹೇಳಿಕೆಗೆ ಸ್ಪಷ್ಟತೆ ನೀಡಲು ಸಾಕ್ಷಿಯಾಗಿ ಭಾರತ ಇದನ್ನು ಪ್ರದರ್ಶಿಸಿತ್ತು.

ಆದರೆ ಭಾರತದ ಹೇಳಿಕೆಯನ್ನು ಪಾಕಿಸ್ತಾನ ನಿರಾಕರಿಸುತ್ತಲೇ ಬಂದಿದೆ. ಎಫ್-16 ಯುದ್ಧ ವಿಮಾನವನ್ನು ಬಳಸಿಲ್ಲ ಮತ್ತು ಭಾರತೀಯ ವಾಯುಪಡೆ ಯುದ್ಧ ವಿಮಾನವನ್ನು ಹೊಡೆದುರುಳಿಸಿಲ್ಲ ಎಂದು ನಿರಾಕರಿಸುತ್ತಲೇ ಬಂದಿದೆ.

ಇದೀಗ ಇದನ್ನು ಬೆಂಬಲಿಸಿ ಅಮೆರಿಕಾದ ಫಾರಿನ್ ಪಾಲಿಸಿ ಮ್ಯಾಗಜಿನ್ ವರದಿ ಮಾಡಿದೆ. ಅದರಲ್ಲಿ ಪಾಕಿಸ್ತಾನ ತನ್ನಲ್ಲಿರುವ ಎಫ್-16 ಯುದ್ಧ ವಿಮಾನವನ್ನು ಖುದ್ದಾಗಿ ಲೆಕ್ಕ ಹಾಕಲು ಅಮೆರಿಕಾವನ್ನು ಆಹ್ವಾನಿಸಿತ್ತು. ಅಮೆರಿಕಾ ಖುದ್ದಾಗಿ ಹೋಗಿ ಪರಿಶೀಲನೆ ನಡೆಸಿ ನೋಡಿದಾಗ ಭಾರತದ ಹೇಳಿಕೆ ಸುಳ್ಳು ಎಂದು ತಿಳಿದುಬಂದಿದೆ ಎಂದು ಮ್ಯಾಗಜಿನ್ ನ ಲಾರಾ ಸೆಲಿಗ್ಮಾನ್ ವರದಿ ಮಾಡಿದ್ದಾರೆ.

ಪಾಕಿಸ್ತಾನದಲ್ಲಿರುವ ಎಫ್-16 ಯುದ್ಧ ವಿಮಾನವನ್ನು ಎಣಿಕೆ ಮಾಡಿ ಪೂರ್ಣಗೊಳಿಸಿದ್ದೇವೆ. ಎಲ್ಲಾ ಯುದ್ಧ ವಿಮಾನಗಳು ಅಲ್ಲಿದ್ದು ಲೆಕ್ಕಹಾಕಿದಾಗ ನಾವು ನೀಡಿದಷ್ಟೇ ಸಂಖ್ಯೆಯ ವಿಮಾನಗಳು ಅಲ್ಲಿವೆ ಎಂದು ಅಮೆರಿಕಾ ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಮ್ಯಾಗಜೀನ್ ವರದಿ ಮಾಡಿದೆ.

ಪಾಕಿಸ್ತಾನದ ವಿರುದ್ಧ ತಕ್ಕ ಪ್ರತೀಕಾರ ನೀಡಲು ವಿಫಲವಾಗಿ ಭಾರತ ಈ ರೀತಿ ಸುಳ್ಳು ಹೇಳುತ್ತಿದೆ, ಇದಕ್ಕೆ ಬದಲಾಗಿ ಭಾರತದ ವಿಮಾನ ಮತ್ತು ಹೆಲಿಕಾಪ್ಟರ್ ನಾಶವಾಗಿದೆ ಎಂದು ಮಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರೊಫೆಸರ್ ವಿಪಿನ್ ನಾರಂಗ್ ತಿಳಿಸಿದ್ದಾರೆ ಎಂದು ಫಾರಿನ್ ಪಾಲಿಸಿ ಮ್ಯಾಗಜಿನ್ ಉಲ್ಲೇಖ ಮಾಡಿದೆ.

ಸಾಮಾನ್ಯವಾಗಿ ಇಂತಹ ವಿಮಾನ ಮಾರಾಟ ಪ್ರಕ್ರಿಯೆಯಲ್ಲಿ ಯುದ್ಧ ವಿಮಾನ ಸ್ವೀಕರಿಸಿದ ದೇಶ ಮಾರಾಟ ಮಾಡಿದ ದೇಶದ ಅಧಿಕಾರಿಗಳಿಗೆ ಕಾಲಕಾಲಕ್ಕೆ ವಿಮಾನದ ಉಪಕರಣಗಳ ತಪಾಸಣೆ ಮಾಡಲು ಬಿಡುತ್ತದೆ ಎಂದು ಮ್ಯಾಗಜೀನ್ ವರದಿ ಮಾಡಿದೆ.

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14ರಂದು 40 ಸಿಆರ್ ಪಿಎಫ್ ಉಗ್ರರನ್ನು ಜೈಶ್ ಎ ಮೊಹಮ್ಮದ್ ಉಗ್ರಗಾಮಿಗಳು ಕೊಂದು ಹಾಕಿದ ನಂತರ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಅದಕ್ಕೆ ಪ್ರತೀಕಾರವಾಗಿ ಭಾರತ ಫೆಬ್ರವರಿ 27ರಂದು ಪಾಕಿಸ್ತಾನದ ಬಾಲಾಕೋಟ್ ನಲ್ಲಿರುವ ಜೈಶ್ ಎ ಮೊಹಮ್ಮದ್ ಉಗ್ರಗಾಮಿ ಶಿಬಿರ ತಾಣದ ಮೇಲೆ ವಾಯುದಾಳಿಯನ್ನು ನಡೆಸಿತ್ತು. ಮರುದಿನ ಪಾಕಿಸ್ತಾನ ವಾಯುಪಡೆ ಭಾರತದೊಂದಿಗೆ ವಾಯುದಾಳಿ ನಡೆಸಿ ಮಿಗ್ -21 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಅದರ ಪೈಲಟ್ ಅಭಿನಂದನ್ ವರ್ಧಮಾನ್ ರನ್ನು ಬಂಧಿಸಿತ್ತು. ನಂತರ ಮಾರ್ಚ್ 1ರಂದು ಬಿಡುಗಡೆ ಮಾಡಿತ್ತು.

Comments are closed.