ಅಂತರಾಷ್ಟ್ರೀಯ

ಹಿಂದಿ ಹಾಡಿಗೆ ಪಾಕಿಸ್ತಾನೀ ಶಾಲಾ ಮಕ್ಕಳು ಕುಣಿದಾಗ ಆಗಿದ್ದೇನು…!!?

Pinterest LinkedIn Tumblr


ನವದೆಹಲಿ: ಬಾಲಿವುಡ್​ನ ಜನಪ್ರಿಯ ದೇಶಪ್ರೇಮಿ ಹಾಡೊಂದಕ್ಕೆ ಪಾಕಿಸ್ತಾನ ಶಾಲಾ ಮಕ್ಕಳು ನರ್ತಿಸಿದ್ದಕ್ಕೆ ಅಲ್ಲಿಯ ಅಧಿಕಾರಿಗಳು ಆ ಶಾಲೆಯ ನೊಂದಣಿಯನ್ನೇ ರದ್ದು ಮಾಡಿದ ಘಟನೆ ವರದಿಯಾಗಿದೆ. ಕರಾಚಿ ನಗರದ ಮಮ ಬೇಬಿ ಕೇರ್ ಎಂಬ ಶಾಲೆಯ ಮಕ್ಕಳು “ಫಿರ್ ಬೀ ದಿಲ್ ಹೈ ಹಿಂದೂಸ್ಥಾನೀ” ಹಾಡಿಗೆ ಹೆಜ್ಜೆ ಹಾಕುತ್ತಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿತ್ತು. ಈ ವಿಡಿಯೋ ರಾಷ್ಟ್ರದ ಘನತೆಗೆ ಧಕ್ಕೆ ತರುವಂತಿದೆ. ಇಂಥದ್ದಕ್ಕೆ ಸ್ವಲ್ಪವೂ ಅವಕಾಶವಿಲ್ಲ ಎಂದಿರುವ ಸಿಂಧ್ ಪ್ರಾಂತ್ಯದ ಖಾಸಗಿ ಸಂಸ್ಥೆ ನೊಂದಣಿ ನಿರ್ದೇಶನಾಲಯದ ಅಧಿಕಾರಿಗಳು, ಶಾಲೆಯ ಮಾನ್ಯತೆಯನ್ನೇ ಅಮಾನತುಗೊಳಿಸಿದೆ. ವಿವಿಧೆಡೆಯಿರುವ ಈ ಶಾಲೆಯ ಎಲ್ಲಾ ಬ್ರ್ಯಾಂಚ್​ಗಳ ನೊಂದಣಿಯನ್ನೂ ರದ್ದು ಮಾಡಲಾಗಿದೆ. ಜೊತೆಗೆ ನಿರ್ದೇಶನಾಲಯದ ಕಚೇರಿಗೆ ವಿಚಾರಣೆಗಾಗಿ ಖುದ್ದಾಗಿ ಆಗಮಿಸಬೇಕೆಂದು ಶಾಲೆಯ ಮುಖ್ಯಸ್ಥರಿಗೆ ನೋಟೀಸ್ ಜಾರಿ ಮಾಡಿದೆ.

ಪಾಕ್ ಅಧಿಕಾರಿಗಳು ಕಳುಹಿಸಿರುವ ಆದೇಶದ ಪ್ರತಿಯು  ಲಭ್ಯವಿದೆ. ಶಾರುಕ್ ಖಾನ್ ಅಭಿನಯದ ಈ ಸಿನಿಮಾದ ಹಾಡಿಗೆ ಕುಣಿಯುವ ವೇಳೆ ಸ್ಟೇಜ್ ಮೇಲೆ ಭಾರತದ ಧ್ವಜ ಹಾರಾಡುತ್ತಿದ್ದ ಗ್ರಾಫಿಕ್ಸನ್ನು ಬ್ಯಾಕ್​ಗ್ರೌಂಡ್ ಆಗಿ ಬಳಕೆ ಮಾಡಿಕೊಳ್ಳಲಾಗಿತ್ತು. ಇದು ಪಾಕ್ ಅಧಿಕಾರಿಗಳಿಗೆ ಆಕ್ಷೇಪಾರ್ಹವಾಗಿ ಕಂಡಿದೆ. ಶತ್ರು ದೇಶದ ಧ್ವಜ ಹಾರಾಟದಿಂದ ಪಾಕಿಸ್ತಾನದ ಘನತೆಗೆ ಕುಂದುಟ್ಟಾಗಿದೆ. ಇದು ರಾಷ್ಟ್ರ ದ್ರೋಹವೆನಿಸುತ್ತದೆಂಬುದು ಅವರ ಅಭಿಪ್ರಾಯವಾಗಿದೆ.

ಪಾಕಿಸ್ತಾನದಲ್ಲಿ ಬಾಲಿವುಡ್ ಸಿನಿಮಾಗಳು ಬಹಳ ಜನಪ್ರಿಯವಾಗಿವೆ. ಅಕ್ಷಯ್ ಕುಮಾರ್, ಸಲ್ಮಾನ್, ಆಮೀರ್ ಮೊದಲಾದವರ ಚಿತ್ರಗಳು ಆ ದೇಶದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತವೆ. ಹಿಂದಿ ಡಬ್ ಆದ ದಕ್ಷಿಣ ಭಾರತೀಯ ಸಿನಿಮಾಗಳೂ ಕೂಡ ಪಾಕಿಸ್ತಾನೀಯರಿಗೆ ಆಕರ್ಷಕವೆನಿಸಿವೆ. ನಮ್ಮ ಕನ್ನಡದ ಕೆಜಿಎಫ್ ಸಿನಿಮಾ ಕೂಡ ಪಾಕಿಸ್ತಾನದಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಂಡಿದ್ದನ್ನು ನಾವು ನೋಡಿದ್ಧೇವೆ.

ಎರಡೂ ದೇಶಗಳ ಮಧ್ಯೆ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾದ ಸಂದರ್ಭದಲ್ಲಿ ಅಲ್ಲಿ ಬಾಲಿವುಡ್ ಸಿನಿಮಾಗಳ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾಗುತ್ತದೆ. ಉಳಿದಂತೆ ಜನರು ಭಾರತೀಯ ಸಿನಿಮಾಗಳನ್ನು ಸ್ವಾಭಾವಿಕವಾಗಿಯೇ ಸ್ವೀಕರಿಸುತ್ತಾರೆ. ಫಿರ್ ಬೀ ದಿಲ್ ಹೈ ಹಿಂದೂಸ್ಥಾನೀ ಹಾಡು ಭಾರತದ ದೇಶಪ್ರೇಮವನ್ನು ವೈಭವೀಕರಿಸುವುದರಿಂದ ಹಾಗೂ ಭಾರತದ ಧ್ವಜ ಹಾರಾಡುತ್ತಿದ್ದರಿಂದ ಪಾಕಿಸ್ತಾನಕ್ಕೆ ಆಕ್ಷೇಪಕರವಾಗಿ ಕಂಡಿದ್ದು ಸಹಜವಿರಬಹುದು.

Comments are closed.