ಅಂತರಾಷ್ಟ್ರೀಯ

ರಾತ್ರಿ ಡ್ರಾಪ್​ ಕೊಡುವ ನೆಪದಲ್ಲಿ ಪೊಲೀಸ್ ಅಧಿಕಾರಿಯಿಂದ 56 ಮಹಿಳೆಯರ ಹತ್ಯೆ!

Pinterest LinkedIn Tumblr


ಮಾಸ್ಕೋ: ಆತ ಸೈಬೀರಿಯಾದ ಓರ್ವ ಪೊಲೀಸ್​ ಅಧಿಕಾರಿ. ರಾತ್ರಿ ವೇಳೆ ರೌಂಡ್ಸ್​ ಹೋಗುವಾಗ ಯಾರಾದರೂ ಮಹಿಳೆಯರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ. ಬಸ್​​ಸ್ಟಾಂಡ್​ನಲ್ಲಿ ಕಾಯುತ್ತಿದ್ದರೆ ಅವರನ್ನು ಮಾತಾಡಿಸಿ, ಎಲ್ಲಿಗೆ ಹೋಗಬೇಕೆಂದು ಕೇಳಿ, ಇಷ್ಟು ಹೊತ್ತಲ್ಲಿ ಒಂಟಿಯಾಗಿ ಇಲ್ಲಿ ಇರಬಾರದು ಎಂದು ಬುದ್ಧಿವಾದ ಹೇಳುತ್ತಿದ್ದ. ಹಾಗೇ ಅವರ ಮನೆಯ ಬಳಿ ಬಿಡುವುದಾಗಿ ತನ್ನ ಕಾರನ್ನು ಹತ್ತಿಸಿಕೊಳ್ಳುತ್ತಿದ್ದ. ಎಂತಹ ಒಳ್ಳೆಯ ಗುಣವಿರುವ ಪೊಲೀಸ್​ ಅಧಿಕಾರಿಯಪ್ಪ! ಎಂದು ನಿಮ್ಮ ಮನಸಿನಲ್ಲಿ ಮೆಚ್ಚುಗೆಯ ಭಾವವೊಂದು ಮೂಡಿದ್ದರೆ ಅದನ್ನು ಹಾಗೇ ಅಳಿಸಿಹಾಕಿಬಿಡಿ.

ಯಾಕೆಂದರೆ ಪೊಲೀಸ್​ ಅಧಿಕಾರಿಗೆ ಅತ್ಯಂತ ಅಪಾಯಕಾರಿ ಸರಣಿ ಹಂತಕ ಎಂಬ ಬಿರುದು ನೀಡಲಾಗಿದೆ!. ರಾತ್ರಿ ವೇಳೆ ಒಂಟಿಯಾಗಿ ಹೋಗುತ್ತಿದ್ದ ಅಥವಾ ಫುಟ್​ಪಾತ್​ನಲ್ಲಿ ನಿಂತಿರುತ್ತಿದ್ದ ಮಹಿಳೆಯರಿಗೆ ಸಹಾಯ ಮಾಡುವ ನೆಪದಲ್ಲಿ ಈ ಪೊಲೀಸ್​ ಅಧಿಕಅರಿ ಕಾರು ನಿಲ್ಲಿಸುತ್ತಿದ್ದ. ಕ್ಯಾಬಿಗೋ, ಬಸ್​ಗೋ ಕಾಯುತ್ತಿದ್ದ ಮಹಿಳೆಯರು ಈ ಪೊಲೀಸ್​ ಕಾರು ಕಂಡೊಡನೆ ಸ್ವಲ್ಪ ಧೈರ್ಯದಿಂದ ಮರು ಯೋಚನೆ ಮಾಡದೆ ಆತನೊಂದಿಗೆ ಹೋಗುತ್ತಿದ್ದರು.

ಡ್ರಾಪ್​ ನೀಡುತ್ತೇನೆ ಎಂದು ಕೊಲೆ ಮಾಡುತ್ತಿದ್ದ:

ಆದರೆ, ಆ ಅಧಿಕಾರಿಯ ನಿಜವಾದ ಮುಖವೇ ಬೇರೆ ಇರುತ್ತಿತ್ತು. ಹೀಗೆ ಅವರ ಮನೆಯ ಬಳಿ ಸುರಕ್ಷಿತವಾಗಿ ಬಿಡಬಹುದು ಎಂಬ ನಂಬಿಕೆಯೊಂದಿಗೆ ಕಾರು ಹತ್ತುತ್ತಿದ್ದ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಹತ್ಯೆ ಮಾಡುತ್ತಿದ್ದ ಪೊಲೀಸ್​ ಅಧಿಕಾರಿಯ ಅಸಲಿ ಮುಖ ಅಂತೂ ಬಯಲಾಗಿದೆ. ಈ ರೀತಿ ಅತ್ಯಾಚಾರ ನಡೆಸಿ ಆತ ಕೊಲೆ ಮಾಡಿದ ಒಟ್ಟು ಮಹಿಳೆಯರ ಸಂಖ್ಯೆ ಬರೋಬ್ಬರಿ 56! ಹಾಗಾಗಿಯೇ ಈತನನ್ನು ರಷ್ಯಾದ ಅತ್ಯಂತ ‘ಅಪಾಯಕಾರಿ ಸರಣಿ ಹಂತಕ’ ಎಂದು ಹೇಳಲಾಗಿದೆ.

ಮಹಿಳೆಯರನ್ನು ಕೊಲೆ ಮಾಡಿ ಯಾರಿಗೂ ಗೊತ್ತಾಗದಂತೆ ಆ ಕೇಸನ್ನು ಮುಚ್ಚಿ ಹಾಕುತ್ತಿದ್ದ ಈ ಪೊಲೀಸ್​ ಅಧಿಕಾರಿಯ ಕೃತ್ಯಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ. ಅದರ ತನಿಖೆ ನಡೆಸಲಾರಂಭಿಸಿದ ಹಿರಿಯ ಪೊಲೀಸ್​ ಅಧಿಕಾರಿಗಳಿಗೆ ಒಂದರ ಹಿಂದೊಂದು ಶಾಕ್ ಉಂಟಾಗಿದ್ದು, ಈ ರೀತಿ 56 ಮಹಿಳೆಯರ ಮೇಲೆ ಆತ ಅತ್ಯಾಚಾರ ನಡೆಸಿರುವುದು ಗೊತ್ತಾಗಿದೆ. ತನ್ನ ಪೊಲೀಸ್ ಕಾರಿನಲ್ಲಿ ಡ್ರಾಪ್​ ನೀಡುವುದಾಗಿ ಹೇಳುತ್ತಿದ್ದ ಪಾಪ್​ಕೋವ್ ಮಹಿಳೆಯರನ್ನು ಲೈಂಗಿಕ ತೃಷೆಗಾಗಿ ಬಳಸಿಕೊಂಡು, ಹ್ಯಾಮರ್, ಕಬ್ಬಿಣದ ಸರಳು ಮುಂತಾದ ಆಯುಧಗಳಿಂದ ಕೊಲೆ ಮಾಡಿ ರಸ್ತೆ ಪಕ್ಕದಲ್ಲಿ ಎಲ್ಲಾದರೂ ಶವವನ್ನು ಎಸೆದು ಹೋಗುತ್ತಿದ್ದ.

2ನೇ ಬಾರಿ ಜೀವಾವಧಿ ಶಿಕ್ಷೆ:

ರಷ್ಯಾದ ಇರ್ಕುಟಸ್ಕ್​ನ ನ್ಯಾಯಾಲಯದಲ್ಲಿ ಸೈಬೀರಿಯಾದ ಮಿಖೈಲ್ ಪಾಪ್​ಕೋವ್​ ಎಂಬ ಪೊಲೀಸ್​ ಅಧಿಕಾರಿಯ ಈ ಆಘಾತಕಾರಿ ಕೃತ್ಯಗಳು ಸಾಬೀತಾಗಿದೆ. 1992ರಿಂದ 2007ರವರೆಗೆ 56 ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿ, ಅದರ ಸುಳಿವು ಸಿಗದಂತೆ ಮುಚ್ಚಿ ಹಾಕಿರುವುದಕ್ಕೆ ಸಾಕ್ಷಿಗಳು ಸಿಕ್ಕಿವೆ. ಈಗಾಗಲೇ 2015ರಲ್ಲಿ ಆತನ ಮೇಲೆ 22 ಮಹಿಳೆಯರನ್ನು ಈ ರೀತಿ ಹತ್ಯೆ ಮಾಡಿದ್ದ ಆರೋಪ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು. ಇದೀಗ ಅದು 22 ಅಲ್ಲ 56 ಮಹಿಳೆಯರನ್ನು ಹತ್ಯೆ ಮಾಡಿರುವ ಬಗ್ಗೆ ಸಾಕ್ಷಿಗಳು ಸಿಕ್ಕಿರುವುದರಿಂದ 2ನೇ ಬಾರಿ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ಘೋಷಿಸಿದೆ.

ಶಿಕ್ಷೆ ನೀಡಲೆಂದು ಸಾಯಿಸುತ್ತಿದ್ದೆ:

54 ವರ್ಷದ ಪಾಪ್​ಕೋವ್​ ಹೇಳುವ ಪ್ರಕಾರ ಆತ ಬಹಳ ಶುದ್ಧ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ. ಯಾವ ಮಹಿಳೆಯರು ಕುಡಿದುಕೊಂಡು ಒಂಟಿಯಾಗಿ ಹೋಗುತ್ತಿರುತ್ತಾರೋ, ಯಾರಿಗೋಸ್ಕರವೋ ರಾತ್ರಿ ವೇಳೆ ಕಾಯುತ್ತಿರುತ್ತಾರೋ ಅಂಥವರನ್ನು ಸಾಯಿಸುತ್ತಿದ್ದೆ. ಅದು ನಾನನು ಅವರಿಗೆ ಕೊಡುತ್ತಿದ್ದ ಶಿಕ್ಷೆ. ಯಾವ ಮಹಿಳೆಯರು ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸುತ್ತಿರಲಿಲ್ಲವೋ ಅವರನ್ನು ಮಾತ್ರ ಕೊಲ್ಲುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ.

ಆದರೆ, ವಕೀಲರು ವಾದಿಸುವ ಪ್ರಕಾರ, ಆತ ಕೊಲ್ಲುವ ಮೂಲಕ ವಿಕೃತವಾದ ಸಂತೋಷವನ್ನು ಅನುಭವಿಸುತ್ತಿದ್ದ. ಕ್ರಮೇಣ ಅದರಲ್ಲೇ ಸಂತೋಷವನ್ನು ಕಾಣತೊಡಗಿದ. 1998ರವರೆಗೆ ಪೊಲೀಸ್​ ವೃತ್ತಿಯಲ್ಲಿದ್ದ ಆತ ಆ ವೃತ್ತಿಯನ್ನು ಬಿಟ್ಟ ನಂತರವೂ ಈ ರೀತಿಯ ಕೃತ್ಯಗಳನ್ನು ಮಾಡುತ್ತಲೇ ಇದ್ದ. ಹೀಗಿದ್ದರೂ ಆತ ಸಿಕ್ಕಿಕೊಂಡು ಬೀಳದೇ ಇರುವುದಕ್ಕೆ ಬೇರೊಬ್ಬ ಪೊಲೀಸ್ ಅಧಿಕಾರಿಯ ಸಹಾಯ ಇರಬಹುದು ಎಂಬ ಅನುಮಾನವನ್ನು ವಕೀಲರು ವ್ಯಕ್ತಪಡಿಸಿದ್ದರು. ಆತ ಸದ್ಯಕ್ಕೆ 59 ಕೊಲೆಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ, ಉಳಿದ ಮೂರು ಕೊಲೆಗಳಿಗೆ ಸಾಕ್ಷಿಗಳು ಸಿಗದ ಕಾರಣ 56 ಕೊಲೆಗಳ ಆಧಾರದಲ್ಲಿ ಆತನಿಗೆ 2ನೇ ಬಾರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದು ತೀರಾ ಅಪರೂಪದ ಪ್ರಕರಣವಾಗಿದೆ.

Comments are closed.