ಅಂತರಾಷ್ಟ್ರೀಯ

ಅತಿಯಾದ ಹಾರ್ನ್ ಇರುವ ಟ್ರಾಫಿಕ್​ನಿಂದ ಬೊಜ್ಜು!

Pinterest LinkedIn Tumblr

ಲಂಡನ್: ವಾಹನಗಳ ಹಾರ್ನ್ ಮತ್ತು ಇನ್ನಿತರ ಶಬ್ದಕ್ಕೂ ಮನುಷ್ಯನ ಸ್ಥೂಲಕಾಯಕಕ್ಕೂ ಸಂಬಂಧವಿದೆಯೇ? ಹೌದು ಎನ್ನುತ್ತದೆ ಸ್ಪೇನ್ ವಿಜ್ಞಾನಿಗಳ ಅಧ್ಯಯನ. ದೀರ್ಘವಾಗಿ ಮೊಳಗುವ ಹಾರ್ನ್​ಗೆ ಮತ್ತು ರಸ್ತೆ ಸಂಚಾರದಲ್ಲಿನ ಇನ್ನಿತರ ಶಬ್ದಮಾಲಿನ್ಯಕ್ಕೆ ತೆರೆದುಕೊಂಡರೆ ಬೊಜ್ಜು ಅಧಿಕವಾಗುತ್ತದೆ. 10 ಡಿಸಿಬಲ್ (ಡಿಬಿ) ಶಬ್ದ ಹೆಚ್ಚಳವಾದರೆ, ದೇಹ ಶೇ.17ರಷ್ಟು ದಢೂತಿಯಾಗುತ್ತದೆ ಎಂದು ಸ್ಪೇನ್​ನ ಬಾರ್ಸಿಲೋನಾ ಗ್ಲೋಬಲ್ ಹೆಲ್ತ್ ಸಂಸ್ಥೆಯ ಸಂಶೋಧಕರು ಹೇಳಿದ್ದಾರೆ.

ಅತಿಯಾದ ಶಬ್ದದಿಂದ ಒತ್ತಡ ಹೆಚ್ಚುತ್ತದೆ. ಇದು ನಿದ್ರಾಹೀನತೆಗೆ ಕಾರಣವಾಗುತ್ತದೆ. ನಿದ್ರಾಹೀನತೆಯಿಂದ ಬಳಲಿದರೆ ಹಾಮೋನ್​ಗಳಲ್ಲಿ ಬದಲಾವಣೆ ಉಂಟಾಗಿ ರಕ್ತದೊತ್ತಡ ಏರುತ್ತದೆ. ಇದು ಬೊಜ್ಜು ಬರಲು ಕಾರಣ. ನಿದ್ರೆಗೆ ಆಗುವ ಆಡಚಣೆಯಿಂದ ಚಯಾಪಚಯ ಕ್ರಿಯೆಯಲ್ಲಿ ವ್ಯತ್ಯಯವಾಗುತ್ತದೆ. ಹಸಿವು, ಲೈಂಗಿಕತೆಯಂತಹ ಸ್ವಾಭಾವಿಕ ಅಪೇಕ್ಷೆಗಳು ಬದಲಾಗುತ್ತವೆ. ಇದರಿಂದಲೂ ಸ್ಥೂಲದೇಹ ಬರುವ ಸಾಧ್ಯತೆ ಇದೆ ಎಂದು ಅಧ್ಯಯನ ಹೇಳಿದೆ. ವಿಶೇಷವೆಂದರೆ, ರೈಲು ಮತ್ತು ವಿಮಾನಗಳಿಂದ ಉಂಟಾಗುವ ಶಬ್ದಗಳಿಗೆ ದಿನನಿತ್ಯ ದೇಹವನ್ನು ಒಡ್ಡುವವರಲ್ಲಿ ಸ್ಥೂಲದೇಹದ ಪ್ರಮಾಣ ಅತ್ಯಂತ ಕಡಿಮೆ. ದೀರ್ಘಾವಧಿವರೆಗೆ ರೈಲು ಮತ್ತು ವಿಮಾನದ ಶಬ್ದಗಳಿಗೆ ತೆರೆದುಕೊಂಡರೆ ತೂಕ ಹೆಚ್ಚಳವಾಗುತ್ತದೆ ಹೊರತು ಸಾಮಾನ್ಯವಾಗಿ ಬೊಜ್ಜು ಉಂಟಾಗುವುದಿಲ್ಲ ಎಂದು ಅಧ್ಯಯನಕಾರರು ಹೇಳಿದ್ದಾರೆ.

ದೀರ್ಘಾವಧಿಯಲ್ಲಿ ಟ್ರಾಫಿಕ್ ಜಾಮ್ಲ್ಲಿ ಸಿಲುಕಿರುವ ಒತ್ತಡದಿಂದ ದೇಹದಲ್ಲಿ ಪ್ರಮುಖ ಬದಲಾವಣೆಗಳಾಗುತ್ತವೆ. ಹೃದಯ ಸಂಬಂಧಿ ಕಾಯಿಲೆಗೂ ಟ್ರಾಫಿಕ್​ನಲ್ಲಿನ ಶಬ್ದಮಾಲಿನ್ಯಕ್ಕೂ ಇರುವ ಸಂಬಂಧವನ್ನು ಈಗಾಗಲೇ ಬಹಿರಂಗಪಡಿಸಲಾಗಿದೆ. ಚಯಾಪಚಯ (ಮೆಟಬಾಲಿಸಮ್ ವ್ಯತ್ಯಯದಿಂದ ಹಸಿವಿನ ಪ್ರಮಾಣ ಏರುಪೇರಾಗುತ್ತದೆ. ನೇರವಾಗಿ ದೇಹ ಹಾಗೂ ಮನಸಿನ ಮೇಲೆ ಪರಿಣಾಮ ಹೆಚ್ಚುತ್ತದೆ.

| ಮರಿಯಾ ಫೊರಾಸ್ಟರ್, ಸಂಶೋಧಕಿ

3,786 ಮಂದಿ ಮೇಲೆ ಪ್ರಯೋಗ

ರಸ್ತೆ ಸಂಚಾರದ ಶಬ್ದದಿಂದ ಬರುವ ಬೊಜ್ಜು ಕುರಿತ ಅಧ್ಯಯನವನ್ನು 3,786 ಜನರ ಮೇಲೆ ನಡೆಸಲಾಗಿದೆ. ಈ ಪ್ರಯೋಗಕ್ಕೆ ಒಳಗಾಗುವುದಕ್ಕೂ ಮುನ್ನ ಮತ್ತು ನಂತರ ದೇಹ ಸ್ಥೂಲತೆ ಸೂಚ್ಯಂಕ (ಬಿಎಂಐ) ವನ್ನು ಲೆಕ್ಕಹಾಕಲಾಗಿದೆ. ಸೊಂಟದ ಸುತ್ತಳತೆ, ದೇಹದಲ್ಲಿ ಶೇಖರಣೆಯಾಗಿರುವ ಕೊಬ್ಬು, ಹೊಟ್ಟೆ ಭಾಗದಲ್ಲಿನ ಬೊಜ್ಜು ಮತ್ತು ಅಧಿಕ ತೂಕದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಸಂಶೋಧಕರ ವಿಶ್ಲೇಷಣಾತ್ಮಕ ಪ್ರಬಂಧ ಇನ್ವಿರಾನ್ಮೆಂಟ್ ಇಂಟರ್​ನ್ಯಾಷನಲ್ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

Comments are closed.