ಅಂತರಾಷ್ಟ್ರೀಯ

ಭಾರತ ಒಂದು ಹೆಜ್ಜೆಯನ್ನಿಟ್ಟರೆ ನಾವು ಎರಡು ಹೆಜ್ಜೆಯನ್ನಿಡುತ್ತೇವೆ: ಇಮ್ರಾನ್ ಖಾನ್​

Pinterest LinkedIn Tumblr


ನವದೆಹಲಿ: ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿಯ ಬಗ್ಗೆ ಚರ್ಚಿಸಲು ನಾನು ಸಿದ್ಧನಿದ್ದೇನೆ. ಕಾಶ್ಮೀರ ವಿವಾದವನ್ನು ಬಗೆಹರಿಸಲು ಭಾರತ ಒಂದು ಹೆಜ್ಜೆಯನ್ನಿಟ್ಟರೆ, ನಾವು ಎರಡು ಹೆಜ್ಜೆಯನ್ನಿಡುತ್ತೇವೆ. ಕಾಶ್ಮೀರ ವಿವಾದ ಮಾತಿನ ಮೂಲಕವೇ ಇತ್ಯರ್ಥಗೊಳ್ಳಬೇಕಿದೆ ಎಂದು ಪಾಕಿಸ್ತಾನ ಪಿಟಿಐ ಪಕ್ಷದ ವರಿಷ್ಠ ಇಮ್ರಾನ್​ ಖಾನ್​ ಹೇಳಿದ್ದಾರೆ.

ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಸಾಧಿಸಿ ಬಹು ದೊಡ್ಡ ಪಕ್ಷವಾಗಿ ಹೊರ ಹೊಮ್ಮುತ್ತಿರುವ ಪಾಕಿಸ್ತಾನ್​ ತೆಹರಿಕ್​ ಇ ಇನ್ಸಾಪ್ (ಪಿಟಿಐ) ಪಕ್ಷದ ನಾಯಕ ಇಮ್ರಾನ್​ ಖಾನ್​ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧದ ಬಗ್ಗೆ ತಮ್ಮ ವಿಜಯೋತ್ಸವ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

ವ್ಯವಹಾರಿಕ ಒಪ್ಪಂದಗಳಲ್ಲಿ ಉತ್ತಮ ಸಂಬಂಧ ಬೆಳೆಸಲು ಉಭಯ ರಾಷ್ಟ್ರಗಳು ಆಸಕ್ತಿ ವಹಿಸಬೇಕೆಂದು ಸಲಹೆ ನೀಡಿದ್ದಾರೆ.

ಬಹುಕಾಲದಿಂದ ಕಾಶ್ಮೀರಿಗಳು ಈ ವಿಚಾರವಾಗಿ ಬಳಲುತ್ತಿದ್ದಾರೆ. ಉಭಯ ರಾಷ್ಟ್ರಗಳು ಚರ್ಚಿಸುವ ಮೂಲಕ ವಿವಾದ ಬಗೆಹರಿಸಬೇಕಿದೆ. ಭಾರತದ ನಾಯಕರು ಆಸಕ್ತಿ ತೋರುವುದಾದರೆ, ಇಬ್ಬರು ಕುಳಿತು ಮಾತಿನ ಮೂಲಕ ಬಗೆಹರಿಸಿಕೊಳ್ಳೋಣ, ಇದು ಎರಡು ರಾಷ್ಟ್ರಗಳಿಗೂ ಒಳ್ಳೆಯದು ಎಂಬ ಮಾತನ್ನಾಡಿದ್ದಾರೆ.

ಖಳನಾಯಕನಂತೆ ಚಿತ್ರಿಸಿದರು
ಇದೇ ವೇಳೆ ಭಾರತೀಯ ಮಾಧ್ಯಮಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಖಾನ್​ ಮಾಧ್ಯಮಗಳು ನನ್ನನ್ನು ಖಳನಾಯಕನಾಗಿ ಬಿಂಬಿಸಿದರು ಎಂದು ಆರೋಪಿಸಿದರು. ಇತ್ತೀಚೆಗೆ ಭಾರತೀಯ ಮಾಧ್ಯಮಗಳು ನನ್ನನ್ನು ಬಿಂಬಿಸಿದ ರೀತಿ ನೋಡಿದರೆ ನನಗೆ ಬಾಲಿವುಡ್ ಖಳನಾಯಕನ ಭಾವನೆ ವ್ಯಕ್ತವಾಯಿತು. ಭಾರತೀಯರು ನನ್ನ ಕ್ರಿಕೆಟ್​ ದಿನಗಳಿಂದ ನೋಡಿಕೊಂಡು ಬರುತ್ತಿದ್ದಾರೆ. ಭಾರತದೊಂದಿಗಿನ ಸಂಬಂಧ ವೃದ್ಧಿ ನನಗೆ ಬೇಕಾಗಿದೆ. ನಾವೆಲ್ಲರು ಸೇರಿ ಆಗ್ನೇಯ ಏಷ್ಯಾ ಭಾಗದಲ್ಲಿನ ಬಡತನವನ್ನು ನಿವಾರಿಸೋಣ ಎಂದು ಹೇಳಿದ್ದಾರೆ.

Comments are closed.