ಸಿಂಗಾಪುರ: ದೇಶ ಬಿಟ್ಟು ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿರುವ ಸುಮಾರು 7 ಲಕ್ಷಕ್ಕೂ ಹೆಚ್ಚು ರೋಹಿಂಗ್ಯಾ ಮುಸ್ಲಿಮರನ್ನು ವಾಪಸ್ ಕರೆಸಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಮ್ಯಾನ್ಮಾರ್ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಥೌಂಗ್ ಟುನ್ ತಿಳಿಸಿದ್ದಾರೆ.
ಶಾಂಘ್ರಿ-ಲಾ ಶೃಂಗದಲ್ಲಿ ಮಾತನಾಡಿದ ಅವರು ಸ್ವ ಇಚ್ಛೆಯಿಂದ ವಾಪಸ್ ಬರುವುದಾದರೆ ನಾವು ಅವರಿಗೆ ಹಾರ್ದಿಕ ಸ್ವಾಗತ ಕೋರುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ 2 ವರ್ಷಗಳಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ವಾಪಸ್ ಕರೆಸಿಕೊಳ್ಳಲು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಕಳೆದ ಜನವರಿಯಲ್ಲಿ ಒಪ್ಪಿಗೆ ಸೂಚಿಸಿದ್ದವು. ಜತೆಗೆ ಕಳೆದ ಗುರುವಾರ ರೋಹಿಂಗ್ಯಾ ಮುಸ್ಲಿಮರಿಗೆ ತಮ್ಮ ದೇಶದಲ್ಲಿ ನೆಲೆಸಲು ಸುರಕ್ಷಿತ ವಾತಾವರಣ ಕಲ್ಪಿಸುವುದಾಗಿ ಮ್ಯಾನ್ಮಾರ್ ದೇಶ ವಿಶ್ವಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
2017ರ ಆಗಸ್ಟ್ನಿಂದ ಸುಮಾರು 7 ಲಕ್ಷ ರೋಹಿಂಗ್ಯಾ ಮುಸ್ಲಿಮರು ಮ್ಯಾನ್ಮಾರ್ ತೊರೆದು ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿದ್ದಾರೆ. ಮ್ಯಾನ್ಮಾರ್ನಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲೆ ದೊಡ್ಡ ಪ್ರಮಾಣದಲ್ಲಿ ದೌರ್ಜನ್ಯ ನಡೆದಿದೆ ಎಂದು ವಿಶ್ವಸಂಸ್ಥೆ ಮತ್ತು ಇತರ ಸಂಸ್ಥೆಗಳು ತಮ್ಮ ವರದಿಯಲ್ಲಿ ತಿಳಿಸಿದ್ದವು.
Comments are closed.