ಅಂತರಾಷ್ಟ್ರೀಯ

ಪಾಕ್ : ಶೇ.30ಕ್ಕೆ ಮುಸ್ಲಿಮೇತರ ಮತದಾರರ ಸಂಖ್ಯೆ ಹೆಚ್ಚಳ

Pinterest LinkedIn Tumblr


ಇಸ್ಲಾಮಾಬಾದ್‌ : ಇದೇ ವರ್ಷ ಜುಲೈ 25ರಂದು ಪಾಕಿಸ್ಥಾನ ಮಹಾ ಚುನಾವಣೆಯನ್ನು ಕಾಣಲಿದೆ. ಈ ಸಂಬಂಧ ನಡೆಸಲಾದ ಅಧ್ಯಯನವೊಂದರಲ್ಲಿ ಪಾಕಿಸ್ಥಾನದಲ್ಲಿನ ಮುಸ್ಲಿಮೇತರ ಮತದಾರರ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿದೆ.

ಪಾಕಿಸ್ಥಾನದ ಡಾನ್‌ ಸುದ್ದಿ ಪತ್ರಿಕೆ ಮಾಡಿರುವ ವರದಿಯ ಪ್ರಕಾರ ದೇಶದಲ್ಲಿ 2013ರಲ್ಲಿ ಮುಸ್ಲಿಮೇತರ ಮತದಾರರ ಸಂಖ್ಯೆ 27.70 ಲಕ್ಷ ಇತ್ತು. ಈ ವರ್ಷ ಅದು 36.30 ಲಕ್ಷಕ್ಕೆ ಏರಿದೆ. ಎಂದರೆ ಶೇ.30ರ ಏರಿಕೆ ಕಂಡು ಬಂದಂತಾಗಿದೆ.

ಅಲ್ಪ ಸಂಖ್ಯಾಕರೆಂದು ಕರೆಯಲ್ಪಡುವ ಮುಸ್ಲಿಮೇತರ ಮತದಾರರ ಪೈಕಿ ಅತ್ಯಧಿಕ ಸಂಖ್ಯೆಯ ಮತದಾರರು ಹಿಂದುಗಳಾಗಿದ್ದಾರೆ. 2013ರಲ್ಲಿ ಮುಸ್ಲಿಮೇತರ ಮತದಾರರಲ್ಲಿ ಹಿಂದುಗಳ ಪ್ರಮಾಣ ಅರ್ಧದಷ್ಟಿತ್ತು. ಈ ವರ್ಷ ಅದು ಅರ್ಧಕ್ಕಿಂತ ಕೆಳಕ್ಕೆ ಇಳಿದಿದೆ.

2013ರಲ್ಲಿ ಪಾಕಿಸ್ಥಾನದಲ್ಲಿ ಒಟ್ಟು ಹಿಂದು ಮತದಾರರ ಸಂಖ್ಯೆ 14 ಲಕ್ಷ ಇತ್ತು. 2018ರಲ್ಲಿ ಅದು 17.70 ಲಕ್ಷವಾಗಿದೆ. ಆದರೆ ಹಿಂದುಯೇತರ ಮತದಾರರ ಸಂಖ್ಯೆ ಹೆಚ್ಚಿರುವುದು ಗಮನಾರ್ಹವಾಗಿದೆ.

ಡಾನ್‌ ವರದಿಯ ಪ್ರಕಾರ ಪಾಕಿಸ್ಥಾನದ ಎರಡನೇ ದೊಡ್ಡ ಅಲ್ಪ ಸಂಖ್ಯಾಕ ಮತದಾರರು ಕ್ರೈಸ್ತರಾಗಿದ್ದಾರೆ. ಈ ವರ್ಷ ನಡೆಯುವ ಮಹಾ ಚುನಾವಣೆಯಲ್ಲಿ ಮತ ಹಾಕುವ ಕ್ರೈಸ್ತರ ಸಂಖ್ಯೆ 16.40 ಲಕ್ಷ ಇದೆ. ಕ್ರೈಸ್ತ ಮತದಾರರ ಸಂಖ್ಯೆಯಲ್ಲಿನ ಏರಿಕೆಯ ಹಿಂದೂ ಮತದಾರರ ಏರಿಕೆಗಿಂದ ಹೆಚ್ಚಿರುವುದು ಕಂಡು ಬಂದಿದೆ.

ಇದೇ ರೀತಿ ಪಾರ್ಸಿ ಮತದಾರರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ ಎಂದು ಡಾನ್‌ ದೈನಿಕ ವರದಿ ಮಾಡಿದೆ.

ಪಾಕ್‌ ಚುನಾವಣಾ ಆಯೋಗವು ಜು.25ರಿಂದ 27ರ ವರೆಗಿನ ದಿನಾಂಕದಲ್ಲಿ ಮಹಾ ಚುನಾವಣೆ ನಡೆಸುವುದಕ್ಕೆ ರಾಷ್ಟ್ರಪತಿಗಳ ಅನುಮತಿಯನ್ನು ಕೋರಿದೆ. ರಾಷ್ಟ್ರಪತಿಯವರು ಮಹಾ ಚುನಾವಣೆಯ ಅಂತಿಮ ದಿನಾಂಕವನ್ನು ನಿರ್ಧರಿಸುವ ಅಧಿಕಾರ ಹೊಂದಿದ್ದಾರೆ.

ಈಗಿನ ಪಾಕ್‌ ಸರಕಾರದ ಅಧಿಕಾರಾವಧಿ ಮೇ 31ಕ್ಕೆ ಕೊನೆಗೊಳ್ಳುತ್ತದೆ. ಜೂನ್‌ 1ರಂದು ಅದು ಉಸ್ತುವಾರಿ ಸರಕಾರವಾಗಲಿದ್ಧು ಹೊಸ ಸರಕಾರ ಅಸ್ತಿತ್ವಕ್ಕೆ ಬರುವ ತನಕ ಕರ್ತವ್ಯ ನಿರ್ವಹಿಸಲಿದೆ.

Comments are closed.