ಅಂತರಾಷ್ಟ್ರೀಯ

ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ: ಡ್ಯಾಂ ಒಡೆದು 47 ಜನರು ಮೃತ

Pinterest LinkedIn Tumblr


ನೈರೋಬಿ: ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಣೆಕಟ್ಟು ಒಡೆದು ಕೆಸರು ಮಿಶ್ರಿತ ನೀರಿನ ಪ್ರವಾಹಕ್ಕೆ ಸಿಲುಕಿ 47 ಜನರು ಮೃತಪಟ್ಟಿದ್ದಾರೆ.

ಮಧ್ಯ ಕೀನ್ಯಾದ ನಕುರು ನಗರದ ಸಮೀಪವಿರುವ ಸೋಲೈನಲ್ಲಿ ಈ ದುರ್ಘಟನೆ ನಡೆದಿದೆ. ಭಾರತೀಯ ಮೂಲದ ಕೃಷಿಕ ಮನ್​ಸುಕುಲ್​ ಪಟೇಲ್​ ಎಂಬುವವರು ತಮ್ಮ ಜಮೀನಿನಲ್ಲಿ ನೀರಿನ ಸಂಗ್ರಹಕ್ಕಾಗಿ ಅಣೆಕಟ್ಟು ನಿರ್ಮಿಸಿದ್ದರು. ಈ ಅಣೆಕಟ್ಟು ಭಾರಿ ಮಳೆಯಿಂದಾಗಿ ಒಡೆದಿದೆ. ಕೆಸರು ಮಿಶ್ರಿತ ನೀರು ಅಣೆಕಟ್ಟೆಯ ಕೆಳಭಾಗದ ಪ್ರದೇಶದಲ್ಲಿದ್ದ ಮನೆಗಳಿಗೆ ನುಗ್ಗಿದ್ದರಿಂದ 20 ಮಕ್ಕಳು ಸೇರಿ ಕನಿಷ್ಠ 47 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವಾಹದ ತೀವ್ರತೆಗೆ 2 ಹಳ್ಳಿಗಳು ಸಂಪೂರ್ಣವಾಗಿ ನಾಶವಾಗಿವೆ. ರಾತ್ರಿ ವೇಳೆ ಈ ದುರ್ಘಟನೆ ಸಂಭವಿಸಿರುವುದರಿಂದ ಸಾವು ನೋವಿನ ಪ್ರಮಾಣ ಹೆಚ್ಚಾಗಿದೆ. ಘಟನೆಯಲ್ಲಿ 36 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಣೆಯಾಗಿರುವವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೀವ್ರ ಬರದಿಂದ ಕಂಗೆಟ್ಟಿದ್ದ ಕೀನ್ಯಾದಲ್ಲಿ ಈಗ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪ್ರವಾಹ ಮತ್ತು ಭೂಕುಸಿತದಿಂದಾಗಿ ಇದುವರೆಗೆ 172 ಜನರು ಮೃತಪಟ್ಟಿದ್ದಾರೆ.

Comments are closed.