ಅಂತರಾಷ್ಟ್ರೀಯ

ಕ್ಷಮೆಯಾಚಿಸಿದ ಫೇಸ್’ಬುಕ್ ಮುಖ್ಯಸ್ಥ; ತಪ್ಪು ಮರುಕಳುಹಿಸದು

Pinterest LinkedIn Tumblr

ವಾಷಿಂಗ್ಟನ್: ಅಮೆರಿಕಾದ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಗೆಲ್ಲಿಸಲು ಫೇಸ್’ಬುಕ್ ಬಳಕೆದಾರರ ರಹಸ್ಯ ಮಾಹಿತಿಗಳನ್ನು ಅಕ್ರಮವಾಗಿ ಬಳಸಿಕೊಳ್ಳಲಾಗಿದೆ ಎಂಬ ಸುದ್ದಿ ಜಾಗತಿಕ ಮಟ್ಟದಲ್ಲಿ ಕೋಲಾಹಲ ಸೃಷ್ಟಿಸಿರುವ ಬೆನ್ನಲ್ಲೇ, ಫೇಸ್’ಬುಕ್ ಮುಖ್ಯಸ್ಥ ಮಾರ್ಕ್ ಜುಕರ್’ಬರ್ಗ್ ಅವರು ಬಳಕೆದಾರರ ಬಳಿ ಗುರುವಾಗ ಕ್ಷಮೆಯಾಚಿಸಿದ್ದಾರೆ.

ಪ್ರಕರಣ ಸಂಬಂಧ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿರುವ ಅವರು, ಕೇಂಜ್ರಿಜ್ ಅನಾಲಿಟಿಕಾದ ಪ್ರಮಾಣೀಕರಣವನ್ನು ನಾವು ನಂಬಬಾರದಿತ್ತು. ಈ ರೀತಿಯ ತಪ್ಪುಗಳು ಮರುಕಳಿಸುವುದಿಲ್ಲ. ನಿಮ್ಮ ಮಾಹಿತಿಗಳನ್ನು ರಕ್ಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಅದನ್ನು ಮಾಡಲು ನಮಗೆ ಸಾಧ್ಯವಾಗದಿದ್ದರೆ, ಸೇವೆ ಮಾಡಲು ನಾವು ಅರ್ಹರಾಗುವುದಿಲ್ಲ ಎಂದು ಹೇಳಿದ್ದಾರೆ.

ಸೋರಿಕೆಯಾಗಿರುವ ಮಾಹಿತಿಗಳನ್ನು ಹತೋಟಿಗೆ ತರುವ ಸಲುವಾಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಬಳಕೆದಾರರು ತಮ್ಮ ಮಾಹಿತಿಗಳನ್ನು ಗೌಪ್ಯವಾಗಿಡಲು ಮತ್ತಷ್ಟು ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದೊಂದು ವಿಶ್ವಾಸಾರ್ಹತೆಗೆ ಬಿದ್ದ ದೊಡ್ಡ ಹೊಡೆತವಾಗಿದೆ. ಪ್ರಸ್ತುತ ಆಗಿರುವ ತಪ್ಪಿಗೆ ಕ್ಷಮೆಯಾಚಿಸುತ್ತೇನೆಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ನೆಟ್’ವರ್ಕ್ ಗಳ ಮೇಲಿನ ನಿಯಂತ್ರಣಗಳ ವಿರುದ್ಧ ನಾನಿಲ್ಲ. ವಾಸ್ತವವಾಗಿ ನಮ್ಮ ಮೇಲೂ ನಿಯಂತ್ರಣ ಹೇರಲಾಗುತ್ತಿದೆ ಎಂದು ನನಗೂ ಖಚಿತ ಮಾಹಿತಿಯಿಲ್ಲ. ತಂತ್ರಜ್ಞಾನವು ಜಗತ್ತಿನಲ್ಲಿ ಹೆಚ್ಚುತ್ತಿರುವ ಪ್ರಮುಖ ಪ್ರವೃತ್ತಿಯಾಗಿದೆ. ಮಾಹಿತಿ ಸೋರಿಕೆಯಾಗದಂತೆ 2014ರಲ್ಲಿಯೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಮತ್ತಷ್ಟು ಹೆಚ್ಚಿನ ಜಾಗ್ರತೆವಹಿಸುವ ಅಗತ್ಯವಿದೆ.

ಹಗರಣ ಬೆಳಕಿಗೆ ಬರುವುದಕ್ಕೂ ಹಿಂದೆಯೇ ಫೇಸ್’ಬುಕ್ ಸಾಕಷ್ಟು ಪ್ರಮುಖ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು. 2014ರಲ್ಲಿ ಹೊರಗಿನ ಆ್ಯಪ್ ಗಳನ್ನು ಕಡಿಮೆ ಮಾಡಿತ್ತು. ಕೆಲವು ಕ್ರಮಗಳು ವರ್ಷಗಳಾದರು ಜಾರಿಗೆ ಬರಲು ಸಾಧ್ಯವಾಗಿಲ್ಲ. ಮಧ್ಯಂತರ ತಿಂಗಳುಗಳಲ್ಲಿ ಕೇಂಬ್ರಿಜ್ ಅನಾಲಿಟಿಕಲ್ ಜೊತೆಗೆ ಒಪ್ಪಂದ ಮಾಡಿಕೊಂಡು ದತ್ತಾಂಶ ಪಡೆಯಲು ಅವಕಾಶ ನೀಡಲಾಯಿತು. ಶೀಘ್ರದಲ್ಲಿಯೇ ಮಾಹಿತಿ ಸೋರಿಕೆ ಕುರಿತಂತೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಜುಕರ್ ಬರ್ಗ್ ತಿಳಿಸಿದ್ದಾರೆ.

2016ರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ತಮ್ಮ ಪರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಕೈಗೊಳ್ಳಲು ಕೇಂಬ್ರಿಜ್ ಅನಾಲಿಟಿಕಾ ಎಂಬ ಕಂಪನಿಯನ್ನು ನೇಮಿಸಿಕೊಂಡಿದ್ದರು. ಆ ಕಂಪನಿಯು ಫೇಸ್’ಬುಕ್ ಜೊತೆ ಕೈಜೋಡಿಸಿ ರಹಸ್ಯವಾಗಿ 5 ಕೋಟಿಗೂ ಹೆಚ್ಚು ಫೇಸ್’ಬುಕ್ ಬಳಕೆದಾರರ ದತ್ತಾಂಶಗಳನ್ನು ಪಡೆದು ಅಕ್ರಮವಾಗಿ ಬಳಸಿಕೊಂಡಿದೆ ಎಂದು ಅಮೆರಿಕಾದ ನ್ಯೂಯಾರ್ಕ್ ಟೈಮ್ಸ್ ಪತ್ರಿಗೆ ಹಾಗೂ ಬ್ರಿಟನ್ನಿನ ಅಬ್ಸರ್ವರ್ ಪತ್ರಿಕೆಗಳು ತನಿಖಾ ವರದಿ ಪ್ರಕಟಿಸಿತ್ತು.

ಇದರ ಬೆನ್ನಲ್ಲೇ ಜಾಗತಿಕ ಮಟ್ಟದಲ್ಲಿ ಫೇಸ್’ಬುಕ್ ನ ವಿಶ್ವಾಸಾರ್ಹತೆ ಬಗ್ಗೆ ಪ್ರಶ್ನೆಗಳು ಎದ್ದಿದ್ದು, ಫೇಸ್’ಬುಕ್’ಗೆ ಕಡಿವಾಣ ಹಾಕಬೇಕೆಂದು ಆಗ್ರಹಗಳು ಕೇಳಿ ಬರುತ್ತಿವೆ. ಅಕ್ರಮಗಳು ನಡೆದಿರುವುದು ಅಮೆರಿಕಾ ದೇಶದಲ್ಲೇ ಆದ್ದರಿಂದ ಸಹಜವಾಗಿಯೇ ಅಮೆರಿಕಾದ ಸಂಸತ್ತಿನಲ್ಲಿ ಈ ಬಗ್ಗೆ ಕೋಲಾಹಲ ಆರಂಭವಾಗಿದೆ. ಇನ್ನು ಅಕ್ರಮ ನಡೆಸಿದ ಕೇಂಬ್ರಿಜ್ ಅನಾಲಿಟಿಕಾ ಕಂಪನಿಯು ಬ್ರಿಟನ್ ಮೂಲದ್ದಾಗಿದ್ದು, ಅಮೆರಿಕಾದ ಚುನಾವಣೆ ವಿಷಯದಲ್ಲೂ ಬ್ರಿಟನ್ನಿಗೆ ಹಿತಾಸಕ್ತಿ ಇರುವುದಿರಂದ ಬ್ರಿಟನ್ ಸಂಸತ್ತಿನಲ್ಲಿ ಸಂಸದರು ಫೇಸ್’ಬುಕ್ ವಿರುದ್ಧ ತನಿಖೆಗೆ ಆಗ್ರಹಿಸಿದ್ದಾರೆ.

Comments are closed.