ಅಂತರಾಷ್ಟ್ರೀಯ

ಉಪವಾಸದ ಸವಾಲು ಪೂರೈಸಲು ಹೋಗಿ ಸಾಯಿ ಬಾಬಾ ಭಕ್ತೆಯಾದ ರಷ್ಯಾ ಮಹಿಳೆ ಸಾವು

Pinterest LinkedIn Tumblr

ಮಾಸ್ಕೋ: ಸಾಯಿ ಬಾಬಾ ಪಂಥದ ಭಕ್ತೆಯಾಗಿದ್ದ ರಷ್ಯಾ ಮಹಿಳೆಯೊಬ್ಬರು ಉಪವಾಸದ ಸವಾಲು ಪೂರೈಸಲು ಹೋಗಿ ಸಾವನ್ನಪ್ಪಿದ್ದಾರೆ.

ಒಳಾಂಗಣ ವಿನ್ಯಾಸಕಿ ಎಲೆನಾ ಸ್ಮೊರೊಡಿನೋವಾ(35) ತನ್ನ ಪತಿಯೊಂದಿಗೆ ವಿಚ್ಛೇದನವಾದ ಬಳಿಕ ಸಾಯಿ ಬಾಬಾ ಭಕ್ತೆಯಾಗಿದ್ದರು. ದಕ್ಷಿಣ ಕೇಂದ್ರ ರಷ್ಯಾದ ನೋವೋಸಿಬಿಸ್ರ್ಕ್ ನಗರದಲ್ಲಿ 2 ವರ್ಷಗಳ ಹಿಂದೆ ಎಲೆನಾ ಸಾಯಿ ಬಾಬಾ ಅನುಯಾಯಿಯಾದ ನಂತರ ಆಕೆ ನಮ್ಮೆಲ್ಲರಿಂದ ದೂರವಿದ್ದಳು ಎಂದು ಸಂಬಂಧಿಕರು ಹಾಗೂ ಸ್ನೇಹಿತರು ಹೇಳಿದ್ದಾರೆ.

ಸೈಬೀರಿಯಾದವರಾದ ಎಲೆನಾ ತುಂಬಾ ಉತ್ಸಾಹ ಹಾಗೂ ಸಂತೋಷದಿಂದ ಇರುತ್ತಿದ್ದ ವ್ಯಕ್ತಿಯಾಗಿದ್ದರು. ಆದ್ರೆ ಪಂಥ ಸೇರಿದ ನಂತರ ಸಂಪೂರ್ಣ ಬದಲಾಗಿದ್ದರು. ಈ ಪಂಥವನ್ನ ಮಾಜಿ ಫ್ಯಾಶನ್ ಡಿಸೈನರ್ ಹಾಗೂ ಮನಶಾಸ್ತ್ರಜ್ಞೆ ಲೋಲಾ ಮುನ್ನಡೆಸುತ್ತಿದ್ದಳು. ಲೋಲಾ ತಾನು 2011 ರಲ್ಲಿ ವಿಧಿವಶರಾದ ಸತ್ಯ ಸಾಯಿ ಬಾಬಾ ಪ್ರತಿನಿಧಿ ಎಂದು ಹೇಳಿಕೊಂಡಿದ್ದಳು.

ಲೋಲಾ ಎಲೆನಾಗೆ ದೀರ್ಘ ಉಪವಾಸ ಮಾಡುವ ಸವಾಲು ನೀಡುತ್ತಿದ್ದಳು. ಹಾಗೂ ತನ್ನ ಸ್ನೇಹಿತರ ಸಂಪರ್ಕದಿಂದ ದೂರವಿರಲು ಹೇಳುತ್ತಿದ್ದಳು ಎಂದು ಎಲೆನಾ ಸ್ನೇಹಿತರೊಬ್ಬರು ಹೇಳಿದ್ದಾರೆ.

ಲೋಲಾ ನೀಡಿದ್ದ ಹಲವಾರು ಉಪವಾಸದ ಸವಾಲುಗಳನ್ನ ಎಲೆನಾ ಪೂರೈಸಿದ್ದರು. ಆದ್ರೆ ಕೊನೆಯ ಹಾಗೂ ಕಠಿಣ ಸವಾಲಾಗಿ ಮೂರು ವಾರಗಳ ಉಪವಾಸ ಮಾಡಲು ಹೇಳಿ ಮೊದಲೆರಡು ವಾರ ನೀರು ಕೂಡ ಸೇವಿಸದಂತೆ ಹೇಳಿದ್ದಳು. ಎಲೆನಾ ತಾನು ಈ ಸವಾಲನ್ನ ಕೈಬಿಡುತ್ತೇನೆ ಎಂದು ಲೋಲಾ ಗೆ ಹೇಳಿದ್ದರು. ಆದ್ರೆ ಅಪೌಷ್ಟಿಕತೆ ಹಾಗೂ ನಿರ್ಜಲೀಕರಣದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಲೋಲಾ ಬೇಕೆಂತಲೇ ಎಲೆನಾಗೆ ತೊಂದರೆ ಮಾಡಲು ಹೀಗೆ ಮಾಡಿದ್ದಾಳೆ ಎಂದು ಎಲೆನಾ ಸ್ನೇಹಿತರು ಹೇಳಿದ್ದಾರೆ. ಸಂಪರ್ಕದ ಮೇಲೆ ನಿಷೇಧವಿದ್ದರೂ ಎಲೆನಾ ಬಾಯ್‍ಫ್ರೆಂಡ್ ಆಕೆಗೆ ಮೆಸೇಜ್ ಮಾಡಲು ಇಷ್ಟಪಡುತ್ತಿದ್ದ. ಇದರಿಂದ ಲೋಲಾಗೆ ಹೊಟ್ಟೆಉರಿ ಇತ್ತು ಎಂದು ಎಲೆನಾ ಸ್ನೇಹಿತರು ಅನುಮಾನಿಸಿದ್ದಾರೆ.

ಎಲೆನಾ ಸಾವಿನ ನಂತರ ಲೋಲಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ಎದುರಿಸುವ ಸಾಧ್ಯತೆಯಿರೋದ್ರಿಂದ ಸದ್ಯ ತಲೆಮರೆಸಿಕೊಂಡಿದ್ದಾಳೆ.

Comments are closed.