ಅಂತರಾಷ್ಟ್ರೀಯ

ಗಡಿಪಾರು ವಿಚಾರಣೆ ಆರಂಭ: ಆಪಾದನೆಗಳೆಲ್ಲ ಸುಳ್ಳು: ಮಲ್ಯ

Pinterest LinkedIn Tumblr


ಲಂಡನ್‌: ಮದ್ಯ ದೊರೆ ವಿಜಯ್‌ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡುವ ಕುರಿತ ವಿಚಾರಣೆ ಲಂಡನ್‌ನ ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ನಲ್ಲಿ ಇಂದು ಸೋಮವಾರ ಮತ್ತೆ ಆರಂಭವಾಗಿದ್ದು ವಿಚಾರಣೆ ಎದುರಿಸಲು ಮಲ್ಯ ಅವರು ಕೋರ್ಟಿಗೆ ಹಾಜರಾಗಿದ್ದಾರೆ.

ತಮ್ಮ ಮುಚ್ಚಿಹೋಗಿರುವ ಕಿಂಗ್‌ಫಿಶರ್‌ ಏರ್‌ ಲೈನ್ಸ್‌ಗೆ ಸಂಬಂಧಿಸಿದಂತೆ, 61ರ ಹರೆಯದ ವಿಜಯ್‌ ಮಲ್ಯ ಅವರು ಭಾರತದಲ್ಲಿ ವಿವಿಧ ಬ್ಯಾಂಕುಗಳಲ್ಲಿ ಸುಮಾರು 9,000 ಕೋಟಿ ರೂ.ಗಳನ್ನು ಬಾಕಿ ಇರಿಸಿ ಕಳೆದ ವರ್ಷ ಮಾರ್ಚ್‌ನಲ್ಲಿ ಲಂಡನ್‌ಗೆ ಪಲಾಯನ ಮಾಡಿದ್ದರು.

ಭಾರೀ ಪ್ರಮಾಣದ ಹಣ ವಂಚನೆ, ದುರುಪಯೋಗ ಇತ್ಯಾದಿ ಆರೋಪಗಳ ಮೇಲೆ ಸ್ಕಾಟ್ಲಂಡ್‌ ಯಾರ್ಡ್‌ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಮಲ್ಯ 6,50 ಲಕ್ಷ ಪೌಂಡ್‌ ಬಾಂಡ್‌ ಮೇಲೆ ಬೇಲ್‌ ಪಡೆದು ಸದ್ಯ ಹೊರಗಿದ್ದಾರೆ.

ಲಂಡನ್‌ ವೆಸ್ಟ್‌ ಮಿನಿಸ್ಟರ್‌ ಕೋರ್ಟಿನಲ್ಲಿ ವಿಚಾರಣೆ ಎದುರಿಸಿದ ಮದ್ಯ ದೊರೆ ವಿಜಯ್‌ ಮಲ್ಯ ಇಂದು ಹೇಳಿದ್ದು ಇಷ್ಟು : ನನ್ನ ವಿರುದ್ಧದ ಆರೋಪಗಳು ಸುಳ್ಳು, ನಿರಾಧಾರ ಮತ್ತು ಸೃಷ್ಟಿಸಲ್ಪಟ್ಟು ಎಂದು ನಾನು ಈ ತನಕವೂ ಪದೇ ಪದೇ ಹೇಳುತ್ತಾ ಬಂದಿದ್ದೇನೆ; ಇದಕ್ಕೆ ಹೊರತಾಗಿ ನನಗೆ ಬೇರೇನೂ ಹೇಳುವುದಕ್ಕಿಲ್ಲ; ನಾನು ಕೋರ್ಟಿಗೆ ಸಲ್ಲಿಸಿರುವ ಹೇಳಿಕೆಯಲ್ಲೇ ಇದು ಸಷ್ಟವಿದೆ.

ಕೋರ್ಟ್‌ ವಿಚಾರಣೆಯು ವಾದಗಳೊಂದಿಗೆ ಆರಂಭಗೊಂಡಿದ್ದು ಇದನ್ನು ಅನುಸರಿಸಿ ವಾಯು ಯಾನ ತಜ್ಞರಾದ ಡಾ. ಬಿ ಹಂಫ್ರೆàಸ್‌ ಅವರು ಸಾಕ್ಷ್ಯ ನುಡಿಯಲಿದ್ದಾರೆ.

ಮಲ್ಯ ವಿರುದ್ಧದ ಗಡಿಪಾರು ವಿಚಾರಣೆ ಡಿ.14ರ ವರೆಗೆ ನಡೆಯಲಿದೆ. ಡಿ.6 ಮತ್ತು 8ರ ದಿನಾಂಕವನ್ನು ನಾನ್‌ ಸೆಟ್ಟಿಂಗ್‌ ಡೇ ಎಂದು ಗುರುತಿಸಲಾಗಿದೆ. ಮುಂದಿನ ವರ್ಷದ ಆರಂಭದ ವರೆಗೂ ತೀರ್ಪನ್ನು ನಿರೀಕ್ಷಿಸುವಂತಿಲ್ಲ ಎನ್ನಲಾಗಿದೆ.

-ಉದಯವಾಣಿ

Comments are closed.