ಇರಾಕ್ : ಇರಾಕ್ – ಇರಾನ್ ಗಡಿಪ್ರದೇಶದಲ್ಲಿ ಭಾನುವಾರ ರಾತ್ರಿ ಸ್ಥಳೀಯ ಕಾಲಾಮಾನ 9.30ಕ್ಕೆ ಭಾರಿ ಭೂಕಂಪ ಸಂಭವಿಸಿದ್ದು ಕನಿಷ್ಠ 150 ಮಂದಿ ಸಾವಿಗೀಡಾಗಿದ್ದಾರೆ.
ರಿಕ್ಟರ್ ಮಾಪನದಲ್ಲಿ 7.3 ತೀವ್ರತೆಯ ಭೂಕಂಪ ಸಂಭವಿಸಿದ್ದು ಟರ್ಕಿ, ಕುವೈತ್ ಮತ್ತು ಅರಬ್ ರಾಷ್ಟ್ರಗಳಲ್ಲಿ ಭೂಕಂಪನ ಅನುಭವಕ್ಕೆ ಬಂದಿದೆ.
ಅಮೆರಿಕದ ಜಿಯಾಲಾಜಿಕಲ್ ಸರ್ವೇ ಪ್ರಕಾರ ಹಲಾಭಾಜ್ನಲ್ಲಿ ಭೂಕಂಪನದ ಕೇಂದ್ರ ಬಿಂದು ಇದ್ದು, ಇರಾನ್ ಗಡಿ ಭಾಗದಲ್ಲಿ 7.2 ತೀವ್ರತೆಯ ಭೂಕಂಪನ ಸಂಭವಿಸಿದೆ. ಅದೇ ವೇಳೆ ಇರಾನ್ ಭೂಕಂಪನಶಾಸ್ತ್ರ ಕೇಂದ್ರ ಪ್ರಕಾರ ಅಜ್ಗಲೇಹ್ ಬಳಿ 7.3 ತೀವ್ರತೆಯ ಭೂಕಂಪನವುಂಟಾಗಿದೆ.
ಭಾರೀ ಭೂಕುಸಿತ ಸಂಭವಿಸಿರುವುದರಿಂದ ನೂರಾರು ಮಂದಿ ಅವಶೇಷಗಳಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಶಂಕೆಯಿದೆ. ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಕೆಲವರು ಪೋಸ್ಟ್ ಮಾಡಿರುವ ವಿಡಿಯೊದಲ್ಲಿ ಉತ್ತರ ಇರಾಕ್ ನ ಸುಲೈಮಾನಿಯಾದಲ್ಲಿ ನೋವಿನಿಂದ ಚೀರಾಡುತ್ತಾ ಹಲವರು ಓಡುತ್ತಿರುವ ದೃಶ್ಯ ಕಂಡುಬರುತ್ತಿದೆ. ಪಕ್ಕದ ದರ್ಬಂಡಿಕಾನ್ ಎಂಬಲ್ಲಿ ಅನೇಕ ಕಟ್ಟಡಗಳು ಕುಸಿದು ಬೀಳುವ ದೃಶ್ಯ ಕಾಣುತ್ತಿದೆ.