ಅಂತರಾಷ್ಟ್ರೀಯ

ವಿಶ್ವ ಹಿಂದೂ ಕಾಂಗ್ರೆಸ್ ಅಧ್ಯಕ್ಷರಾಗಿ ತುಳಸಿ ಗಬ್ಬಾರ್ಡ್ ಆಯ್ಕೆ!

Pinterest LinkedIn Tumblr

ವಾಷಿಂಗ್ಟನ್: ಇತ್ತೀಚೆಗಷ್ಟೇ ಅಮೆರಿಕ ಸಂಸತ್ ಗೆ ಆಯ್ಕೆಯಾಗಿದ್ದ ಮೊದಲ ಭಾರತೀಯ ಮೂಲದ ಅಮೆರಿಕ ಹಿಂದೂ ಮಹಿಳೆ ತುಳಸಿ ಗಬ್ಬಾರ್ಡ್ ಅವರು ಇದೀಗ ವಿಶ್ವ ಹಿಂದೂ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮುಂದಿನ ವರ್ಷ ಚಿಕಾಗೋದಲ್ಲಿ ವಿಶ್ವ ಹಿಂದೂ ಕಾಂಗ್ರೆಸ್ ಅಧಿವೇಶನ ನಡೆಯಲಿದ್ದು, ಇಂದು ಅದರ ವೇಳಾಪಟ್ಟಿಯನ್ನು ಘೋಷಣೆ ಮಾಡಲಾಯಿತು. ಈ ವೇಳೆ ಅಧಿವೇಶನದ ಅಧ್ಯಕ್ಷರಾಗಿ ತುಳಸಿ ಗಬ್ಬಾರ್ಡ್ ಅವರನ್ನು ಆಯ್ಕೆ ಮಾಡಲಾಗಿದೆ. ತುಳಸಿ ಗಬ್ಬಾರ್ಡ್ ಇತ್ತೀಚೆಗಷ್ಟೇ ಅಮೆರಿಕ ಸಂಸತ್ ಗೆ ಆಯ್ಕೆಯಾಗಿದ್ದರು. ಆ ಮೂಲಕ ಅಮೆರಿಕ ಸಂಸತ್ ಗೆ ಆಯ್ಕೆಯಾದ ಭಾರತೀಯ ಮೂಲದ ಮೊದಲ ಅಮೆರಿಕನ್ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾಗಿದ್ದರು. ಅಲ್ಲದೆ ಅಮೆರಿಕ ಸಂಸತ್ ನಲ್ಲಿ ಹಿಂದೂಗಳ ಪವಿತ್ರ ಗ್ರಂಥ ಭಗವದ್ಗೀತೆ ಮೇಲೆ ಪ್ರಮಾಣ ಮಾಡುವ ಮೂಲಕ ತುಳಸಿ ಗಬ್ಬಾರ್ಡ್ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.

ವಿಶ್ವ ಹಿಂದೂ ಕಾಂಗ್ರೆಸ್ ಅಧಿವೇಶನ ಪ್ರತೀ ನಾಲ್ಕು ವರ್ಷಕ್ಕೊಮ್ಮೆ ನಡೆಯಲಿದ್ದು, ಹಿಂದೂ ಸಮುದಾಯದ ಅಭಿಪ್ರಾಯ ಸಿದ್ಧಾಂತ ಮತ್ತು ಉತ್ತಮ ಚಿಂತನೆಗಳನ್ನು ಜಾಗತಿಕವಾಗಿ ಪಸರಿಸುವ ಉದ್ದೇಶದಿಂದ ಈ ಅಧಿವೇಶನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಇನ್ನು ಮುಂಬರುವ ಸೆಪ್ಟೆಂಬರ್ 7 ರಿಂದ 9ರವರೆಗೂ ಅಮೆರಿಕದ ಚಿಕಾಗೋದಲ್ಲಿ ಈ ಪ್ರಮುಖ ಅಧಿವೇಶನ ನಡೆಯಲಿದೆ. ಅಧಿವೇಶನವನ್ನು ವಿಶ್ವ ಹಿಂದೂ ಫೌಂಡೇಷನ್ ಸಂಸ್ಥೆ ಆಯೋಜಿಸುತ್ತಿದೆ.

ಕಳೆದ ಬಾರಿ ವಿಶ್ವ ಹಿಂದೂ ಕಾಂಗ್ರೆಸ್ ಅಧಿವೇಶನ 2014ರಲ್ಲಿ ಭಾರತ ರಾಜಧಾನಿ ದೆಹಲಿಯಲ್ಲಿ ನಡೆದಿತ್ತು.

Comments are closed.