ಅಂತರಾಷ್ಟ್ರೀಯ

ಇಸ್ರೇಲ್ ಜೊತೆ ರಹಸ್ಯ ಸಭೆಗಳನ್ನು ನಡೆಸಿದ ಬ್ರಿಟನ್ ಸಂಸದೆ ಪ್ರೀತಿ ಪಟೇಲ್ ಈಗ ಸಂಕಷ್ಟದಲ್ಲಿ !

Pinterest LinkedIn Tumblr

ಲಂಡನ್: ಅನಧಿಕೃತವಾಗಿ ವಿದೇಶಾಂಗ ವ್ಯವಹಾರ ನಡೆಸಿದ ಬ್ರಿಟನ್ ಸಂಸದೆ ಪ್ರೀತಿ ಪಟೇಲ್ ಈಗ ತಮ್ಮ ದೇಶದಲ್ಲಿ ದೊಡ್ಡ ವಿವಾದಕ್ಕೆ ಸಿಲುಕಿದ್ದಾರೆ. ಬ್ರಿಟನ್ ಸಂಸತ್ತಿನಲ್ಲಿ ಪಕ್ಷಭೇದ ಮರೆತು ಎಲ್ಲಾ ಜನಪ್ರತಿನಿಧಿಗಳು ಪ್ರೀತಿ ಪಟೇಲ್ ಅವರನ್ನು ತರಾಟೆಗೆ ತೆಗೆದುಕೊಂಡಿವೆ. ಇಸ್ರೇಲ್’ನಲ್ಲಿ ರಹಸ್ಯವಾಗಿ 12 ಮೀಟಿಂಗ್’ಗಳಲ್ಲಿ ಪ್ರೀತಿ ಭಾಗವಹಿಸಿದ್ದು ಈ ವಿವಾದಕ್ಕೆ ಕಾರಣವಾಗಿದೆ. ಪ್ರೀತಿ ಪಟೇಲ್ ತಮ್ಮ ತಪ್ಪಿಗೆ ಕ್ಷಮೆ ಕೇಳಿದ್ದಾರಾದರೂ ಅವರನ್ನು ಸಂಪುಟದಿಂದ ಹೊರಹಾಕುವ ಸಾಧ್ಯತೆ ದಟ್ಟವಾಗಿದೆ.

ಥೆರೆಸಾ ಮೇ ನೇತೃತ್ವದ ಬ್ರಿಟನ್ ಸರಕಾರದಲ್ಲಿ ಪ್ರೀತಿ ಪಟೇಲ್ ಅವರು ಅಂತಾಷ್ಟ್ರೀಯ ಅಭಿವೃದ್ಧಿ ಕಾರ್ಯದರ್ಶಿಯಾಗಿದ್ದಾರೆ. ಬ್ರಿಟನ್’ನ ಇತಿಹಾಸದಲ್ಲಿ ಸಂಪುಟ ದರ್ಜೆಯ ಹುದ್ದೆ ಪಡೆದ ಭಾರತೀಯ ಮೂಲದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಪ್ರೀತಿ ಪಟೇಲ್ ಅವರದ್ದು. ಬ್ರಿಟನ್’ನಲ್ಲಿರುವ ಭಾರತೀಯ ಸಮುದಾಯವು ಕನ್ಸರ್ವೇಟಿವ್ ಪಕ್ಷಕ್ಕೆ ಹೆಚ್ಚಿನ ಬೆಂಬಲ ಕೊಡಲು ಇದೇ ಪ್ರೀತಿ ಪಟೇಲ್ ಕಾರಣ. ಹೊಸ ಇತಿಹಾಸ ನಿರ್ಮಿಸಿದ 45 ವರ್ಷದ ಪ್ರೀತಿ ಪಟೇಲ್ ಇಸ್ರೇಲ್’ನಲ್ಲಿ ರಹಸ್ಯವಾಗಿ 12 ಸಭೆಗಳಲ್ಲಿ ಭಾಗವಹಿಸುವ ಮೂಲಕ ಎಡವಟ್ಟು ತಂದಿಟ್ಟುಕೊಂಡಿದ್ದಾರೆ. ರಜೆ ಹಾಕಿ ಇಸ್ರೇಲ್’ಗೆ ಹೋಗುತ್ತಿದ್ದ ಪ್ರೀತಿ, ನಿಯಮ ಮತ್ತು ಶಿಷ್ಟಾಚಾರಗಳನ್ನು ಉಲ್ಲಂಘಿಸಿ ಪ್ರಧಾನಿ ಬೆಂಜಮಿನ್ ನೆಟ್ಯಾನ್ಯಹು ಸೇರಿದಂತೆ ಅಲ್ಲಿಯ ಸರಕಾರದ ಪ್ರತಿನಿಧಿಗಳೊಂದಿಗೆ ರಹಸ್ಯೆ ಸಭೆ ನಡೆಸುತ್ತಿದ್ದರೆನ್ನಲಾಗಿದೆ.

ಇಸ್ರೇಲ್ ಸೇರಿದಂತೆ ಮಧ್ಯಪ್ರಾಚ್ಯ ರಾಷ್ಟ್ರಗಳೊಂದಿಗೆ ಬ್ರಿಟನ್ ದೇಶ ಬಹಳ ಸಂಕೀರ್ಣ ರಾಜತಾಂತ್ರಿಕ ಸಂಬಂಧವೊಂದಿದೆ. ಈ ಹಿನ್ನೆಲೆಯಲ್ಲಿ ತನ್ನ ಪ್ರತಿನಿಧಿಯೊಬ್ಬರು ಇಸ್ರೇಲ್ ಜೊತೆ ರಹಸ್ಯ ಮಾತುಕತೆ ನಡೆಸಿರುವುದು ಬ್ರಿಟನ್ ದೇಶಕ್ಕೆ ನುಂಗಲಾರದ ತುತ್ತಾಗಿದೆ. ಆಡಳಿತ ಪಕ್ಷದ ಸದಸ್ಯರೇ ಪ್ರೀತಿ ಪಟೇಲ್ ಅವರನ್ನು ವಿರೋಧಿಸುತ್ತಿದ್ದಾರೆ. “ಗೋಲನ್ ಹೈಟ್ಸ್” ಎಂಬ ಸ್ಥಳದಲ್ಲಿ ಇಸ್ರೇಲ್’ಗೆ ನೆರವು ಒದಗಿಸುವ ಕುರಿತು ಪ್ರೀತಿ ಪಟೇಲ್ ತಮ್ಮದೊಂದು ಸಭೆಯಲ್ಲಿ ಭರವಸೆ ನೀಡಿದ್ದರೆನ್ನಲಾಗಿದೆ. ಆದರೆ, ಈ ಗೋಲನ್ ಹೈಟ್ಸ್ ಎಂಬುದು ಸಿರಿಯಾದಿಂದ ಇಸ್ರೇಲ್ ವಶಪಡಿಸಿಕೊಂಡ ಪ್ರದೇಶವಾಗಿದೆ. ಬ್ರಿಟನ್ ಇದನ್ನು ಬಲವಾಗಿ ವಿರೋಧಿಸುತ್ತಾ ಬಂದಿದೆ. ಇದೇ ಕಾರಣಕ್ಕೆ, ಸಿರಿಯಾದ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಇಸ್ರೇಲ್ ನಡೆಸುತ್ತಿರುವ ಆಸ್ಪತ್ರೆಗೆ ಬ್ರಿಟನ್ ಯಾವುದೇ ವೈದ್ಯಕೀಯ ನೆರವು ನೀಡಲು ನಿರಾಕರಿಸುತ್ತಿದೆ. ಹೀಗಿರುವಾಗ ಪ್ರೀತಿ ಪಟೇಲ್ ಅದ್ಯಾವ ಧೈರ್ಯದಿಂದ ಇಂಥ ಕೆಲಸ ಮಾಡಿದರು ಎಂದನಿಸದೇ ಇರದು.

ಪ್ರೀತಿ ಪಟೇಲ್ ಮೊದಲಿಂದಲೂ ಇಸ್ರೇಲ್ ಅಭಿಮಾನಿ. ಇನ್ನು ಇಸ್ರೇಲ್’ಗೆ ಭಾರತವೆಂದರೆ ಆಪ್ತ ಭಾವನೆ. ಪ್ರೀತಿ ಪಟೇಲ್ ಇಸ್ರೇಲ್’ನಲ್ಲಿ ಪ್ರಧಾನಿಯನ್ನು ಭೇಟಿಯಾದಾಗ ತಮ್ಮ ಭಾರತೀಯ ಹಿನ್ನೆಲೆ ಬಗ್ಗೆ ತಿಳಿಸಿದ್ದರಂತೆ.

Comments are closed.