ಅಂತರಾಷ್ಟ್ರೀಯ

ಅಮೆರಿಕ ವೀಸಾ ಬೇಕಾದರೆ ಫೇಸ್’ಬುಕ್ ಫಾಸ್’ವರ್ಡ್ ಕೊಡಿ..!

Pinterest LinkedIn Tumblr


ವಾಷಿಂಗ್ಟನ್(ಫೆ.08): ಏಳು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳ ನಾಗರಿಕರಿಗೆ ಅಮೆರಿಕ ಪ್ರವೇಶ ನಿರ್ಬಂಧ ಆದೇಶ ವಿವಾದಕ್ಕೆ ಕಾರಣವಾಗಿರುವಾಗಲೇ, ಅಮೆರಿಕದ ವೀಸಾಕ್ಕೆ ಅರ್ಜಿಸಲ್ಲಿಸುವವರು ತಮ್ಮ ಫೇಸ್‌ಬುಕ್, ಟ್ವೀಟರ್ ಮತ್ತಿತರ ಸಾಮಾಜಿಕ ಜಾಲತಾಣಗಳ ಪಾಸ್‌’ವರ್ಡ್‌ಗಳನ್ನು ನೀಡಬೇಕು ಎಂಬ ನಿಯಮ ರೂಪಿಸಲು ಟ್ರಂಪ್ ಸರ್ಕಾರ ಮುಂದಾಗಿದೆ.
ಅಮೆರಿಕವನ್ನು ಪ್ರವೇಶಿಸುವ ವ್ಯಕ್ತಿಗಳ ಹಿನ್ನೆಲೆಯನ್ನು ತಿಳಿದುಕೊಳ್ಳುವ ನಿಟ್ಟಿನಿಂದ ಸಾಮಾಜಿಕ ಜಾಲತಾಣಗಳ ಪಾಸ್‌ವರ್ಡ್‌ಗಳನ್ನು ಅಮೆರಿಕ ರಾಯಭಾರ ಕಚೇರಿಗಳು ಕೇಳುವ ಸಾಧ್ಯತೆ ಇದೆ ಎಂದು ಹೋಮ್‌’ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಜಾನ್ ಕೆಲ್ಲಿ ತಿಳಿಸಿದ್ದಾರೆ.
ಅಮೆರಿಕಕ್ಕೆ ಭೇಟಿ ನೀಡುವ ವ್ಯಕ್ತಿಗಳನ್ನು ಭದ್ರತಾ ದೃಷ್ಟಿಯಿಂದ ಕೂಲಂಕುಷವಾಗಿ ವಿಚಾರಣೆ ನಡೆಸುವ ನಿಟ್ಟಿನಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಇರಾನ್, ಇರಾಕ್, ಲಿಬಿಯಾ, ಸೋಮಾಲಿಯಾ, ಸುಡಾನ್, ಸಿರಿಯಾ ಮತ್ತು ಯೆಮೆನ್ ಈ ಏಳು ಮುಸ್ಲಿಂ ರಾಷ್ಟ್ರಗಳಿಂದ ಆಗಮಿಸುವ ವ್ಯಕ್ತಿಗಳ ಹಿನ್ನೆಲೆ ತಿಳಿಯಲು ಸಾಮಾಜಿಕ ಜಾಲತಾಣಗಳ ಪಾಸ್‌’ವರ್ಡ್ ಪಡೆಯಲು ತೀರ್ಮಾನಿಸಲಾಗಿದೆ.
ಇಂಟರ್‌’ನೆಟ್‌’ನಲ್ಲಿ ಅವರು ಏನು ಮಾಡುತ್ತಿದ್ದಾರೆ. ಅವರು ಯಾರೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನುವುದನ್ನು ತಿಳಿಯಲಾಗುವುದು. ಒಂದು ವೇಳೆ ಅರ್ಜಿದಾರರು ಸಹಕಾರ ನೀಡದೇ ಇದ್ದರೆ ಅವರು ಅಮೆರಿಕಕ್ಕೆ ಆಗಮಿಸಲು ತಡೆ ಹೇರಲಾಗುವುದು ಎಂದು ಹೇಳಿದ್ದಾರೆ.

Comments are closed.