ಅಂತರಾಷ್ಟ್ರೀಯ

ಅಮೆರಿಕ ಅಧ್ಯಕ್ಷರ 1 ಟ್ವೀಟ್ ನಿಂದಾಗಿ ಟೊಯೊಟಾಗೆ 8 ಸಾವಿರ ಕೋಟಿ ನಷ್ಟ!

Pinterest LinkedIn Tumblr


ವಾಷಿಂಗ್ಟನ್: ಅಮೆರಿಕಾದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಡಿದ ಕೇವಲ ಒಂದು ಟ್ವೀಟ್ ನಿಂದಾಗಿ ವಿಶ್ವದ ಪ್ರತಿಷ್ಠಿತ ವಾಹನ ತಯಾರಿಕಾ ಸಂಸ್ಥೆ ಬರೊಬ್ಬರಿ 8 ಸಾವಿರ ಕೋಟಿ ನಷ್ಟ ಅನುಭವಿಸಿದೆ.
ಡೊನಾಲ್ಡ್ ಟ್ರಂಪ್ ಮಾಡಿದ್ದ ಒಂದು ಟ್ವೀಟ್ ನಿಂದಾಗಿ ಟೊಯೊಟಾ ಸಂಸ್ಥೆಯ ಷೇರುಗಳು ಕ್ಷಣ ಮಾತ್ರದಲ್ಲಿ ಪಾತಳಕ್ಕಿಳಿಯುವ ಮೂಲಕ ಸಂಸ್ಥೆಗೆ ಒಟ್ಟು 8,156 ಕೋಟಿ ರು. ನಷ್ಟ ಉಂಟಾಗಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮೂಲಗಳ ಪ್ರಕಾರ ಟೊಯೊಟಾ ಕಂಪೆನಿ ಮೆಕ್ಸಿಕೋದಲ್ಲಿ ತನ್ನ ಉತ್ಪಾದನಾ ಘಟಕವನ್ನು ಸ್ಥಾಪಿಸಲು ಉದ್ದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿದ್ದ ಟ್ರಂಪ್, “ಅದಕ್ಕೆ ಅವಕಾಶವಿಲ್ಲ, ಅಮೆರಿಕದಲ್ಲಿ ನಿಮ್ಮ ತಯಾರಿಕಾ ಘಟಕ ಸ್ಥಾಪಿಸಿ.. ಇಲ್ಲವೇ ದೊಡ್ಡ ಮೊತ್ತದ ಗಡಿ ತೆರಿಗೆ ಪಾವತಿಸಿ”.. ಎಂದು ಹೇಳಿದ್ದರು.
ಈ ಟ್ವೀಟ್ ಸುದ್ದಿಯಾದ ಬೆನ್ನಲ್ಲೇ ಷೇರುಮಾರುಕಟ್ಟೆಯಲ್ಲಿ ಟೊಯೊಟಾ ಸಂಸ್ಥೆಯ ಷೇರುಗಳ ಮೌಲ್ಯ ಮಾರುಕಟ್ಟೆಯಲ್ಲಿ ಕುಸಿಯಲಾರಂಭಿಸಿತು. ಕೇವಲ ಐದೇ ನಿಮಿಷದಲ್ಲಿ ಟೊಯೊಟಾ ಸಂಸ್ಥೆಯ ಷೇರು ಮೌಲ್ಯ ಶೇ.0.5ರಷ್ಟು ಕುಸಿದಿತ್ತು. ಅದರಂತೆ ಸಂಸ್ಥೆಗೆ ಸುಮಾರು 8, 156 ಕೋಟಿ ನಷ್ಟವಾಗಿತ್ತು ಎಂದು ಆರ್ಥಿಕ ತಜ್ಞರು ಅಂದಾಜಿಸಿದ್ದಾರೆ.
ಟೊಯೊಟಾ ಸಂಸ್ಥೆ ತನ್ನ ಹೊಸ ಉತ್ಪಾದನಾ ಘಟಕವನ್ನು ಮೆಕ್ಸಿಕೋದ ಬಜ ಕ್ಯಾಲಿಫೋರ್ನಿಯಾದಲ್ಲಿ ಸ್ಥಾಪಿಸಲುದ್ದೇಶಿಸಿತ್ತು. ಕಂಪೆನಿಯು ಇಲ್ಲಿ ಅದಾಗಲೇ ಒಂದು ಘಟಕವನ್ನು ಹೊಂದಿದೆ. ಈ ಘಟಕ ವಾರ್ಷಿಕ ಒಂದು ಲಕ್ಷ ಪಿಕಪ್ ಟ್ರಕ್ ಗಳನ್ನು ತಯಾರಿಸುತ್ತಿದೆ. ಕಂಪೆನಿ ತನ್ನ ಈ ಘಟಕದ ಉತ್ಪಾದನಾ ಸಾಮರ್ಥ್ಯವನ್ನು ವಾರ್ಷಿಕ 1.6 ಲಕ್ಷಕ್ಕೆ ಏರಿಸುವ ಯೋಜನೆ ಹೊಂದಿದೆ.
ಟ್ರಂಪ್ ಟ್ವೀಟ್ ಟೊಯೊಟಾ ಎರಡನೇ ಬಲಿ, ಮೊದಲ ಬಲಿ ಬೋಯಿಂಗ್ ವಿಮಾನ ತಯಾರಿಕಾ ಸಂಸ್ಥೆ
ಇನ್ನು ಟ್ರಂಪ್ ಟ್ವೀಟ್ ದಾಳಿಗೆ ತುತ್ತಾಗಿ ನಷ್ಟ ಅನುಭವಿಸಿದ ಸಂಸ್ಥೆಗಳಲ್ಲಿ ಟೊಯೊಟಾ ಮೊದಲೇನಲ್ಲ. ಈ ಹಿಂದೆ ವಿಮಾನ ತಯಾರಿಕಾ ಸಂಸ್ಥೆ ಬೋಯಿಂಗ್ ಕುರಿತಂತೆ ಟ್ರಂಪ್ ಮಾಡಿದ್ದ ಟ್ವೀಟ್ ನಿಂದಾಗಿ ಬೋಯಿಂಗ್ ಸಂಸ್ಥೆಯ ಷೇರುಗಳು ಕೂಡ ಕುಸಿತ ಅನುಭವಿಸಿತ್ತು. ಬೋಯಿಂಗ್ ಸಂಸ್ಥೆಯ ಮತ್ತು ಸರ್ಕಾರದ ಗುತ್ತಿಗೆ ವೆಚ್ಚಗಳು ನಿಯಂತ್ರಣದಲ್ಲಿಲ್ಲ. ವಾರ್ಷಿಕ 4 ಬಿಲಿಯನ್ ಡಾಲರ್ ಹಣ ವೆಚ್ಚ ದುಬಾರಿಯಾಗಿ ಎಂದು ಟ್ರಂಪ್ ಟ್ವೀಟ್ ಮಾಡಿದ್ದರು.

Comments are closed.