ಮಾಸ್ಕೊ: ಜರ್ಮನಿಯ ಸರ್ವಾಧಿಕಾರಿ ಅಡಾಲ್ಪ್ ಹಿಟ್ಲರನ ನೇರ ಆದೇಶದ ಮೇರೆಗೆ ನಿರ್ಮಿಸಲಾಗಿದ್ದ ರಹಸ್ಯ ನಾಜಿ ನೆಲೆಯೊಂದನ್ನು ಉತ್ತರ ಧ್ರುವದಿಂದ 1000 ಕಿಮೀ ದೂರದಲ್ಲಿ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
‘ಸ್ಕಾಟ್ಜ್ಗ್ರಾಬರ್’ ಅಥವಾ ‘ಟ್ರೆಜರ್ ಹಂಟರ್’ ಎಂದೇ ಪರಿಚಿತವಾಗಿದ್ದ ಆಕ್ಟಿಕ್ ಸರ್ಕಲ್ ಅಲೆಗ್ಸಾಂಡ್ರಾ ಲ್ಯಾಂಡಿನಲ್ಲಿದ್ದ ಈ ನಿಗೂಢ ನಿವೇಶನ ದಶಕಗಳ ಕಾಲ ಯಾರ ಗಮನಕ್ಕೂ ಬಂದಿರಲಿಲ್ಲ.
ಪ್ರಸ್ತುತ ರಷ್ಯಾದ ಪ್ರದೇಶವಾಗಿರುವ ನಿರ್ಜನವಾದ ಪ್ರತ್ಯೇಕ ದ್ವೀಪದಲ್ಲಿ ನಿರ್ಮಿಸಲಾಗಿದ್ದ ಈ ನೆಲೆಯಲ್ಲಿ ಬಂಕರುಗಳ ಅವಶೇಷಗಳು, ಖಾಲಿ ಪೆಟ್ರೋಲ್ ಡಬ್ಬಗಳು ಮತ್ತು ಕಾಗದದ ದಾಖಲೆಗಳು ಲಭಿಸಿದ್ದು, ದ್ವೀಪದ ಅತಿಶೀತ ಪರಿಸರದಲ್ಲಿ ಅವು ನಾಶಗೊಳ್ಳದೆ ಉಳಿದಿವೆ. ಹವಾಮಾನ ಕೇಂದ್ರವಾಗಿತ್ತೆಂದು ಊಹಿಸಲಾಗಿರುವ ಈ ನೆಲೆಯನ್ನು ರಷ್ಯಾದ ಮೇಲಿನ ತನ್ನ ದಾಳಿಯ ಒಂದು ವರ್ಷದ ಬಳಿಕ 1942ರಲ್ಲಿ ಹಿಟ್ಲರನ ನೇರ ಆದೇಶದ ಮೇರೆಗೆ ನಿರ್ಮಿಸಲಾಗಿತ್ತು ಎಂದು ಊಹಿಸಲಾಗಿದೆ.
1943ರಿಂದ 1944ರ ಜುಲೈಯಲ್ಲಿ ಇಲ್ಲಿನ ಸಿಬ್ಬಂದಿ ಅಗತ್ಯ ವಸ್ತುಗಳ ಕೊರತೆಯಾದಾಗ ಉತ್ತರ ಧ್ರುವದ ಕರಡಿಯ ವಿಷಪೂರಿತ ಮಾಂಸವನ್ನು ಅನಿವಾರ್ಯವಾಗಿ ತಿಂದು ಸಾವನ್ನಪ್ಪುವವರೆಗೂ ಈ ನೆಲೆಯನ್ನು ಬಳಸಲಾಗುತ್ತಿತ್ತು ಎಂದು ‘ಡೈಲಿ ಎಕ್ಸ್ ಪ್ರೆಸ್’ ವರದಿ ಮಾಡಿದೆ.
Comments are closed.