
ಲಂಡನ್ : ತನ್ನ ಬಗ್ಗೆ ಪ್ರೀತಿ ಮಮತೆಯ ಕಾಳಜಿ ತೋರದೆ, ದಾಂಪತ್ಯ ಜೀವನಕ್ಕೆ ಸಹಕರಿಸುತ್ತಿಲ್ಲ ಎಂಬ ನೆಪ ಒಡ್ಡಿ ತನ್ನ ಹೆಂಡತಿಯನ್ನು ಬಳಸಲ್ಪಟ್ಟ ಕಾರಿಗೆ ಹೋಲಿಸಿ ಆಕೆಯನ್ನು ಇ-ಬೇ ತಾಣದಲ್ಲಿ, ಆಕೆಯ ಅತೀ ಕೆಟ್ಟ ಫೋಟೋದೊಂದಿಗೆ, ಮಾರಾಟಕ್ಕೆ ಹಾಕಿದ ಪತಿರಾಯನಿಗೆ 66,000 ಪೌಂಡ್‌ಗಳ ಬಂಪರ್ ಖರೀದಿ ಆಫರ್ ಬಂದಿದೆ. ಆದರೆ ತನ್ನನ್ನು ತನ್ನ ಪತಿಯು ಈ ರೀತಿ ಮಾರಾಟಕ್ಕೆ ಇಟ್ಟಿರುವುದನ್ನು ತಿಳಿದು ಅತ್ಯಂತ ಕ್ರುದ್ಧಳಾದ ಪತ್ನಿಯು, ಪತಿಯನ್ನೇ ತಾನು ಕೊಂದೇ ಬಿಡುವುದಾಗಿ ಗರ್ಜಿಸಿದ್ದಾಳೆ.
ಈ ಒಟ್ಟು ಪ್ರಹಸನ ಆರಂಭವಾದದ್ದು ಕಳೆದ ಬುಧವಾರ. 33ರ ಹರೆಯದ, ಯಾರ್ಕ್‌ಶಯರ್‌ನ ವೇಕ್‌ಫೀಲ್ಡ್ ನಿವಾಸಿಯಾಗಿರುವ ಸೈಮನ್ ಓ ಕೇನ್, ತನಗೆ ಮೈ ಹುಷಾರಿಲ್ಲ ಎಂದು ಬೇಗನೆ ಮನೆಗೆ ಮರಳಿದ್ದ. ಆದರೆ 27ರ ಹರೆಯದ ಆತನ ಪತ್ನಿ, ಎರಡು ಮಕ್ಕಳು ತಾಯಿ, ಲಿಯಾಂಡ್ರಾ, ಅಸ್ವಸ್ಥ ಪತಿಯ ಬಗ್ಗೆ ಯಾವುದೇ ಕಾಳಜಿ ತೋರಲಿಲ್ಲ.
ಸಿಟ್ಟಿಗೆದ್ದ ಸೈಮನ್, “ನೀನೇನೂ ನನಗೆ ಬೇಕಾಗಿಲ್ಲ; ನಿನ್ನನ್ನು ಮಾರಿ ಬಿಡುತ್ತೇನೆ’ ಎಂದು ಬೆದರಿಕೆ ಹಾಕಿದ. “ಏನ್ ಬೇಕಾದ್ರೂ ಮಾಡಿಕೋ’ ಎಂದು ಲಿಯಾಂಡ್ರಾ ಮುಲಾಜಿಲ್ಲದೆ ಉತ್ತರಿಸಿದಳು.
ಕೂಡಲೇ ಸೈಮನ್ ಇ ಬೇ ಅಂತರ್ಜಾಲ ಮಾರಾಟ ತಾಣದಲ್ಲಿ ಪೋಸ್ಟ್ ಹಾಕಿದ :
ಬಳಸಲ್ಪಟ್ಟ ಪತ್ನಿ ಮಾರಾಟಕ್ಕಿದ್ದಾಳೆ. ಹೊಸ ಮಾಡೆಲ್ ಅಲ್ಲದಿದ್ದರೂ ಸಾಕಷ್ಟು ಮೈಲೇಜ್ ಸಿಗುವುದು ಗ್ಯಾರಂಟಿ. ಹೊರ ಮೈ ಒಪ್ಪ – ಓರಣ ಎಲ್ಲವೂ ಚೆನ್ನಾಗಿದೆ. ಶೇಪ್ ಬಹುಮಟ್ಟಿಗೆ ಚೆನ್ನಾಗಿದೆ; ಕಿಚನ್ ಕೌಶಲವೂ ಚೆನ್ನಾಗಿದೆ. ಆದರೂ ಕೆಲವೊಮ್ಮೆ ಅಸ್ಪತ್ರೆ ಸೇರಬೇಕಾದ ಸಮಸ್ಯೆ ಎದುರಾಗಬಹುದು. ಬಳಕೆಯಲ್ಲಿ ಅಲ್ಪಸ್ವಲ್ಪ ಸದ್ದು ಮಾಡಬಹುದು; ಆದರೆ ಅದನ್ನು ನಿಲ್ಲಿಸಲು ಸ್ವಲ್ಪ ಹೆಚ್ಚು ಹಣ ಖರ್ಚು ಮಾಡಬೇಕಾದೀತು. ಎಕ್ಸ್‌ಚೇಂಜ್ ರೂಪದಲ್ಲಿ ಕಡಿಮೆ ವಯಸ್ಸಿನ ಮಾಡೆಲ್ ಕೊಟ್ಟು ವ್ಯವಹಾರ ಕುದುರಿಸಬಹುದು !
ಅಂದ ಹಾಗೆ ಇ-ಬೇ ಜಾಲತಾಣದಲ್ಲಿ ಸೈಮನ್ ಈ ಆಕರ್ಷಕ ಮಾರಾಟದ ಪೋಸ್ಟ್ ಹಾಕಿದೊಡನೆಯೇ ಅಚ್ಚರಿ ಪಡುವ ರೀತಿಯಲ್ಲಿ 65,880 ಪೌಂಡ್‌ಗಳ ಖರೀದಿ ಆಫರ್ ಬಂದೇ ಬಿಟ್ಟಿತು !
ಇ-ಬೇ ಜಾಲ ತಾಣದಲ್ಲಿ ಸೈಮನ್ ತನ್ನನ್ನು ಮಾರಾಟಕ್ಕೆ ಹಾಕಿದ ಜಾಹೀರಾತು ಕಂಡು ಅತ್ಯಂತ ಕ್ರುದ್ಧಳಾದ ಲಿಯಾಂಡ್ರಾ “ನಾನು ಅವನನ್ನು ಕೊಂದೇ ಬಿಡುತ್ತೇನೆ; ಇಂಟರ್‌ನೆಟ್‌ನಲ್ಲಿ ನನ್ನ ಮಾರಾಟದ ಫೋಟೋ ನೋಡಿ ನನ್ನ ಸಹೋದ್ಯೋಗಿಗಳೆಲ್ಲ ನಕ್ಕು ನನ್ನನ್ನು ಗೇಲಿ ಮಾಡತೊಡಗಿದ್ದಾರೆ; ಆತ ನನ್ನನ್ನು ಮಾರಾಟಕ್ಕೆ ಇಟ್ಟದ್ದು ಮಾತ್ರವಲ್ಲ ಅದರ ಜೊತೆಗೆ ನನ್ನ ಅತ್ಯಂತ ಕೆಟ್ಟ ಫೋಟೋವನ್ನು ಹಾಕಿ ನನ್ನ ಮರ್ಯಾದೆ ಹರಾಜು ಮಾಡಿದ್ದಾನೆ; ಒಂದು ವೇಳೆ ಆತ ಇನ್ನೂ ಒಳ್ಳೆಯ ಫೋಟೋ ಹಾಕಿದ್ದರೆ ಇನ್ನೂ ದೊಡ್ಡ ಖರೀದಿ ಆಫರ್ ಬರುತ್ತಿತ್ತು’ ಎಂದು ಗುಡುಗಿದ್ದಾಳೆ. ಲಿಯಾಂಡ್ರಾ ವೃತ್ತಿಯಲ್ಲಿ ಸೌಂದರ್ಯ ಚಿಕಿತ್ಸಕಳಾಗಿದ್ದಾಳೆ.
ಈ ದಂಪತಿಯ ನಡುವಿನ ಈ ಮಾರಾಟದ ಜಗಳ ಯಾವ ಮಟ್ಟಕ್ಕೆ ಹೋದೀತು ಎಂಬುದನ್ನು ಇನ್ನು ಕಾದು ನೋಡಬೇಕಾಗಿದೆ !
Comments are closed.