ಇಸ್ಲಾಮಾಬಾದ್: ಕಾಶ್ಮೀರದಲ್ಲಿ ಹತ್ಯೆಯಾದ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಕಮಾಂಡರ್ ಬುರ್ಹಾನ್ ವಾನಿ ಹುತಾತ್ಮ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ಶುಕ್ರವಾರ ಘೋಷಿಸಿದ್ದಾರೆ. ಅಲ್ಲದೆ ಉಗ್ರನ ಹತ್ಯೆ ಖಂಡಿಸಿ ಜು.19ರಂದು ಕರಾಳ ದಿನ ಆಚರಿಸುವುದಾಗಿ ಹೇಳಿದ್ದಾರೆ.
ಕಾಶ್ಮೀರ ಪರಿಸ್ಥಿತಿ ಕುರಿತು ಚರ್ಚಿಸಲು ಕರೆದಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಉದ್ದೇಶಿಸಿ ಮಾತನಾಡಿದ ನವಾಜ್ ಷರೀಫ್ ಅವರು, ಪಾಕಿಸ್ಥಾನವು ಕಾಶ್ಮೀರೀ ಜನರಿಗೆ ನೈತಿಕ, ರಾಜಕೀಯ ಹಾಗೂ ರಾಜತಾಂತ್ರಿಕ ಬೆಂಬಲ ನೀಡುವುದನ್ನು ಮುಂದುವರಿಸಲಿದೆ ಎಂದು ಹೇಳಿದರು.
ಕಾಶ್ಮೀರದ ಜನರಿಗೆ ಸಂಪೂರ್ಣ ಬೆಂಬಲ ಪ್ರಕಟಿಸುವ ಸಲುವಾಗಿ ಜುಲೈ 19ರಂದು ಕರಾಳ ದಿನ ಆಚರಿಸುವುದು ಮತ್ತು ಕಾಶ್ಮೀರ ಪರಿಸ್ಥಿತಿಯನ್ನು ಚರ್ಚಿಸಲು ಪಾಕ್ ಸಂಸತ್ತಿನ ಜಂಟಿ ಅಧಿವೇಶನ ನಡೆಸಲು ಕೂಡ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಯಿತು.
ಜಮ್ಮು ಕಾಶ್ಮೀರವನ್ನು ಭಾರತ ಆಕ್ರಮಿತ ಪ್ರದೇಶವೆಂದು ಕರೆದಿರುವ ನವಾಜ್ ಷರೀಫ್ ಅವರು ಕಾಶ್ಮೀರ ಜನರ ಸ್ವಯಂ ಆಡಳಿತೆಯ ಹಕ್ಕನ್ನು ಗೌರವಿಸಲು ಅಲ್ಲಿ ವಿಶ್ವಸಂಸ್ಥೆಯ ಠರಾವಿನ ಪ್ರಕಾರ ಜನಮತ ಸಂಗ್ರಹ ನಡೆಯಬೇಕೆಂದು ಆಗ್ರಹಿಸಿದ ಕೆಲವೇ ದಿನಗಳ ಬಳಿಕ ಇದೀಗ ಜು.19ರಂದು ಪಾಕಿಸ್ಥಾನವು ಕರಾಳ ದಿನ ಆಚರಿಸಲಿದೆ ಎಂದು ಘೋಷಿಸಿದ್ದಾರೆ.
ಉಗ್ರ ಬುರ್ಹಾನ್ ವಾನಿ ಹತ್ಯೆಗೆ ತೀವ್ರ ಕಳವಳ ಹಾಗೂ ಶೋಕ ವ್ಯಕ್ತಪಡಿಸಿದ ಅವರು, ಕಾಶ್ಮೀರದಲ್ಲಿ ನಾಗರಿಕರ ಹತ್ಯೆಗೆ ಭಾರತೀಯ ಪಡೆಗಳು ಸೇನಾ ಬಲ ಪ್ರಯೋಗಿಸುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
Comments are closed.