ಢಾಕಾ (ಪಿಟಿಐ): ಜುಲೈ 1ರ ಶುಕ್ರವಾರ ರಾತ್ರಿ ಢಾಕಾದ ಹೋಲಿ ಆರ್ಟಿಸಾನ್ ಬೇಕರಿ ಕೆಫೆಗೆ ನುಗ್ಗಿ ಒಬ್ಬ ಭಾರತೀಯ ಯುವತಿಯ ಸಹಿತ 20 ಮಂದಿ ವಿದೇಶೀಯರನ್ನು ಅಮಾನುಷವಾಗಿ ಕತ್ತು ಸೀಳಿ ಹತ್ಯೆಗೈದ ಪ್ರಕರಣದಲ್ಲಿ ಬಂಧಿತರಾಗಿರುವ ಉಗ್ರರು ಅಚ್ಚರಿಪಡಿಸುವಂತ ಮಾಹಿತಿಯೊಂದನ್ನು ಬಹಿರಂಗ ಪಡಿಸಿದ್ದಾರೆ.
ಪೈಶಾಚಿಕ ಕೃತ್ಯವೆಸಗಿ ಬಂಧಿತರಾಗಿರುವ ಈ ಉಗ್ರರು ಮುಂಬೈ ಮೂಲದ ಇಸ್ಲಾಂ ಧರ್ಮ ಪ್ರಚಾರಕ ಜಕೀರ್ ನಾಯಕ್ (ಟಿ.ವಿ.ಯಲ್ಲಿ ಧರ್ಮೋಪದೇಶ ನೀಡುವ ಮತ್ತು ಜಗತ್ತಿನಾದ್ಯಂತ ಹಲವು ಅನುಯಾಯಿಗಳನ್ನು ಹೊಂದಿರುವ ಮುಂಬೈ ಮೂಲದ ವೈದ್ಯ) ಅವರ ಅನುಯಾಯಿಗಳಾಗಿದ್ದಾರೆ. ಈ ಉಗ್ರರಲ್ಲಿ ರೋಹನ್ ಇಮ್ತಿಯಾಜ್ ಎಂಬಾತ ಆವಾಮಿ ಲೀಗ್ ಮುಖಂಡನ ಪುತ್ರನಾಗಿದ್ದಾನೆ.
ಈ ಹಿಂದೆ “ಪ್ರತಿಯೊಬ್ಬ ಮುಸ್ಲಿಮರು ಭಯೋತ್ಪಾದಕರಾಗಬೇಕು ” ಎಂಬ ಹೇಳಿಕೆ ನೀಡಿ ಜಕೀರ್ ನಾಯಕ್ ವಿವಾದಕ್ಕೀಡಾಗಿದ್ದರು. ವಿವಾದಿತ ಹೇಳಿಕೆಯಿಂದಲೇ ಸುದ್ದಿಯಾಗಿದ್ದ ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ನ ಸ್ಥಾಪಕ ಮತ್ತು ಪ್ರಚಾರಕ ಜಕೀರ್ ನಾಯಕ್‍ಗೆ ಬ್ರಿಟನ್ ಮತ್ತು ಕೆನಡಾ ನಿಷೇಧ ಹೇರಿದೆ. ಮಲೇಷ್ಯಾದಲ್ಲಿ ನಿಷೇಧಕ್ಕೊಳಗಾಗಿರುವ 16 ಇಸ್ಲಾಮಿಕ್ ಪ್ರಚಾರಕರಲ್ಲಿ ಜಕೀರ್ ಕೂಡಾ ಒಬ್ಬರು.
ಬಾಂಗ್ಲಾದೇಶದಲ್ಲಿ ಪೀಸ್ ಟಿವಿಯಲ್ಲಿ ಭಾಷಣ ನೀಡಿ ಖ್ಯಾತರಾಗಿರುವ ಜಕೀರ್, ತಮ್ಮ ಭಾಷಣದಲ್ಲಿ ಇತರ ಧರ್ಮಗಳ ವಿರುದ್ಧ ಕಿಡಿಕಾರುತ್ತಿರುತ್ತಾರೆ. ಇನ್ನೊಬ್ಬ ದಾಳಿಕೋರ ನಿಬ್ರಾಸ್ ಇಸ್ಲಾಂ (22) ಇಸ್ಲಾಮಿಕ್ ಸ್ಟೇಟ್‍ನ ನಿಯೋಜಕರು ಎಂದು ಶಂಕಿಸಲ್ಪಡುವ ಅಂಜೇಮ್ ಚೌಧರಿ ಮತ್ತು ಶಮಿ ವಿಟ್ನೆಸ್ ಅವರನ್ನು 2014ರಿಂದ ಟ್ವಿಟರ್ ನಲ್ಲಿ ಫಾಲೋ ಮಾಡುತ್ತಿದ್ದಾರೆ . 24 ರ ಹರೆಯದ ಮೆಹ್ದಿ ಬಿಸ್ವಾಸ್ ಅವರ ಟ್ವಿಟರ್ ಖಾತೆಯ ಹೆಸರು ಶಮಿ ವಿಟ್ನೆಸ್ ಎಂದಾಗಿದ್ದು, ಈತ ಭಾರತದಲ್ಲಿಯೂ ವಿಚಾರಣೆ ಎದುರಿಸುತ್ತಿದ್ದಾರೆ.ಇಸ್ಲಾಮಿಕ್ ಸ್ಟೇಟ್ ಬಗ್ಗೆ ಪ್ರಚಾರ ನಡೆಸಿದ್ದಕ್ಕಾಗಿ 2014 ಡಿಸೆಂಬರ್ ನಲ್ಲಿ ಈತನನ್ನು ಬಂಧಿಸಲಾಗಿತ್ತು. ಐಎಸ್ ಪರವಾಗಿ ಟ್ವೀಟ್ ಮಾಡುತ್ತಿದ್ದ ಪ್ರಧಾನ ವ್ಯಕ್ತಿಯಾಗಿದ್ದಾರೆ ಬಿಸ್ವಾಸ್.
ಪಾಕಿಸ್ತಾನ ಮೂಲದ ಬ್ರಿಟಿಷ್ ಪೌರನಾಗಿರುವ 49ರ ಹರೆಯದ ಚೌಧರಿ ಬ್ರಿಟಿಷ್ ಭಯೋತ್ಪಾದನಾ ನಿಗ್ರಹ ಕಾನೂನನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಇಂಗ್ಲೆಂಡ್‍ನಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಇವರ ವಿರುದ್ಧ ಪ್ರಕರಣ ದಾಖಲಾದ ನಂತರ ಡಿಸೆಂಬರ್ 2015 ರಲ್ಲಿ ಇವರ ಟ್ವಿಟರ್ ಖಾತೆ ಕೂಡಾ ನಿಷ್ಕ್ರಿಯವಾಗಿತ್ತು.
ಇದನ್ನೆಲ್ಲಾ ಗಮನಿಸಿದರೆ ನಿಬ್ರಾಸ್ ಮತ್ತು ರೋಹನ್ ರಾತ್ರೋರಾತ್ರಿ ಉಗ್ರ ಸಂಘಟನೆಗೆ ಸೇರಿದವರಲ್ಲ. ಒಂದೆರಡು ವರ್ಷಗಳ ಕಾಲ ಈ ಸಂಘಟನೆಯೊಂದಿಗೆ ಒಡನಾಟ ಇರಿಸಿಕೊಂಡು ನಂತರ ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಐಎಸ್ ಉಗ್ರರಾಗಿ ಢಾಕಾದಲ್ಲಿ ದಾಳಿ ನಡೆಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಐಎಸ್ ಮಾಧ್ಯಮಗಳಲ್ಲಿ ಪ್ರಕಟವಾದ ಚಿತ್ರಗಳನ್ನು ಗಮನಿಸಿದರೆ ಈ ಉಗ್ರರಿಗೆ ದಾಳಿಯ ಮುನ್ನ ಸಾಕಷ್ಟು ಆಯುಧಗಳನ್ನು ಪೂರೈಸಲಾಗಿತ್ತು, ಸೇನೆ ಕಾರ್ಯಾಚರಣೆ ಮಾಡುವ ಮುನ್ನ 15 ನಿಮಿಷಗಳಲ್ಲಿ ಒತ್ತೆಯಾಳುಗಳನ್ನು ಪೈಶಾಚಿಕ ರೀತಿಯಲ್ಲಿ ಹತ್ಯೆಗೈದಿರುವುದನ್ನು ನೋಡಿದರೆ ಯಾವ ರೀತಿ ಈ ಯುವಕರನ್ನು ಬ್ರೈನ್ ವಾಶ್ ಮಾಡಲಾಗಿತ್ತು ಎಂಬುದು ಗೊತ್ತಾಗುತ್ತಿದೆ ಎಂದು ಪತ್ರಿಕೆಯೊಂದು ಉಲ್ಲೇಖಿಸಿದೆ,
Comments are closed.