
ಅವತಾರ್ ಚಿತ್ರದ ಭೂದೃಶ್ಯಗಳಿಗೆ ಸ್ಪೂರ್ತಿಯಾಗಿದ್ದ ಚೀನಾದ ಝಾಂಗ್ಜಿಯಾಜಿ ಫಾರೆಸ್ಟ್ ಪಾರ್ಕ್ನ ಬೆಟ್ಟವೊಂದಕ್ಕೆ ಲಿಫ್ಟ್ ಅಳವಡಿಸಲಾಗಿದೆ. ಈ ಲಿಫ್ಟ್ನ ಎತ್ತರ ನೋಡಿದರೆ ಅಬ್ಬಬ್ಬಾ ಎನ್ನುತ್ತೀರಿ..ಇನ್ನು ಇದು ಸಾಗುವ ವೇಗ ನೋಡಿದರೆ ಮತ್ತೊಮ್ಮೆ ಓ ಗಾಡ್ ಎನ್ನುವವರೇ ಜಾಸ್ತಿ.. ಈ ಕಾರಣದಿಂದಾಗಿ ಇಲ್ಲಿಗೆ ಭೇಟಿ ನಿಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.
ಹಂಡ್ರೆಡ್ ಡ್ರಾಗನ್ಸ್ ಸ್ಕೈ ಲಿಫ್ಟ್ ಹೆಸರಿನಿಂದ ಕರೆಯಲ್ಪಡುವ ಈ ಲಿಫ್ಟ್ ತಳದಿಂದ ತುತ್ತತುದಿಗೆ ಕೇವಲ ಎರಡು ನಿಮಿಷಗಳಲ್ಲಿ ತಲುಪುತ್ತದೆ. ಆರಂಭದಲ್ಲಿ ಇದರ ಸುರಕ್ಷತೆಯ ಕುರಿತು ಕೆಲವೊಂದು ಅಪವಾದವೆದ್ದು, ಸ್ವಲ್ಪಕಾಲ ಮುಚ್ಚಲಾಗಿತ್ತಾದರೂ, ಇದೀಗ ಮತ್ತೆ ಪ್ರವಾಸಿಗರಿಗಾಗಿ ತೆರೆದುಕೊಂಡಿದೆ.
ಇದೇ ಪ್ರದೇಶದಲ್ಲಿ ನಿರ್ವಿುಸಲಾಗಿರುವ ಜಗತ್ತಿನ ಅತಿ ಉದ್ದದ ಗಾಜಿನ ವಾಕ್ವೇ ಮುಂದಿನ ತಿಂಗಳು ಪ್ರವಾಸಿಗರಿಗಾಗಿ ತೆರೆಯಲಿದೆ. ಈ ಪರ್ವತವನ್ನು ಮೆಟ್ಟಿಲುಗಳ ಮೂಲಕ ಕೆಲವು ಪ್ರವಾಸಿಗರು ಏರಲು ಬಯಸಿದರೆ ಕೆಲವರು ಲಿಫ್ಟ್ ಮೂಲಕವೇ ಸಾಗಿ ಪ್ರಕೃತಿ ಸೌಂದರ್ಯ ಸವಿಯುತ್ತಾರೆ. ಕೆಳಗಿನಿಂದ ಕಾಣುವ ದೃಶ್ಯವೊಂದು ಬೇರೆಯದೇ ಆಗಿದ್ದರೆ, ಇನ್ನು ಮೇಲಿನಿಂದ ಸಾಗಿ ಕೆಳಗೆ ನೋಡುವಾಗ ಮೈ ಜುಮ್ಮೆನ್ನುತ್ತದೆ. ಒಟ್ಟಾರೆ ಮೈ ನವಿರೇಳಿಸುವ ಅನುಭವ. ಪರ್ವತದ ತುದಿಯಿಂದ ಸುತ್ತಲಿನ ನೋಟವನ್ನು ಸವಿಯುವುದೇ ಕಣ್ಣಿಗೆ ಹಬ್ಬ. ಅದೇ ರೀತಿ ವೇಗವಾಗಿ ಕಣಿವೆಗೆ ಧುಮುಕುವ ಲಿಫ್ಟ್, ಅದೇ ವೇಗದಲ್ಲಿ ಮತ್ತೆ ಮೇಲೇರುತ್ತದೆ. ಝಾಂಗ್ಜಿಯಾಜಿ ಫಾರೆಸ್ಟ್ ಪಾರ್ಕನ್ನು ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಿದೆ. ಇಲ್ಲಿನ ಲಿಫ್ಟ್ ಜಗತ್ತಿನ ಅತಿ ಎತ್ತರದ, ಅತಿ ದೊಡ್ಡ ಹೊರಾಂಗಣ ಲಿಫ್ಟ್ ಎಂಬ ಖ್ಯಾತಿ ಗಳಿಸಿದೆ. ಲಿಫ್ಟ್ ಹೆಸರಿನಲ್ಲಿ ಮೂರು ಗಿನ್ನೆಸ್ ದಾಖಲೆಗಳಿವೆ. ಅದೆಂದರೆ ಅತಿ ವೇಗದ, ಅತಿ ಹೆಚ್ಚು ಜನರನ್ನು ಒಯ್ಯುವ ಮತ್ತು ಅತಿ ಎತ್ತರದ ಲಿಫ್ಟ್ ಎಂಬ ಹೆಮ್ಮೆ ಈ ಲಿಫ್ಟ್ನದು. ಇದರಲ್ಲಿ ಮೂರು ಕಂಪಾರ್ಟ್ವೆುಂಟ್ಗಳಿದ್ದು, ಪ್ರತಿ ಲಿಫ್ಟ್ ಒಂದು ಬಾರಿ 50 ಜನರನ್ನು ಸಾಗಿಸುತ್ತದೆ.