ವಾಷಿಂಗ್ಟನ್ (ಪಿಟಿಐ): ಅಮೆರಿಕ ಅಧ್ಯಕ್ಷ ಗಾದಿಗೇರುವ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ತಮ್ಮ ಉತ್ತರಾಧಿಕಾರಿ ಆಗುವುದಿಲ್ಲ ಎಂದು ಹಾಲಿ ಅಧ್ಯಕ್ಷ ಬರಾಕ್ ಒಬಾಮಾ ತಿಳಿಸಿದ್ದಾರೆ.
ಕ್ಯಾಲಿಫೋರ್ನಿಯಾದ ಸನ್ನಿಲ್ಯಾಂಡ್ಸ್‌ನಲ್ಲಿ ಯುಎಸ್–ಆಸಿಯಾನ್ ಶೃಂಗದ ಬಳಿಕ ಸುದ್ದಿಗಾರರೊಟ್ಟಿಗೆ ಮಾತನಾಡಿದ ಅವರು, ಅಧ್ಯಕ್ಷರಾಗುವುದು ರಿಯಾಲಿಟಿ ಷೋ ಆಯೋಜಿಸುವುದಕ್ಕಿಂತಲೂ ಪ್ರಯಾಸಕರ ಎಂದರು.
‘ಟ್ರಂಫ್ ಅವರು ಅಧ್ಯಕ್ಷರಾಗಲ್ಲ ಎಂಬ ನಂಬಿಕೆ ನನ್ನದು. ಏಕೆಂದರೆ, ಅಧ್ಯಕ್ಷರದ್ದು ಗಂಭೀರ ಕೆಲಸ ಎಂದು ಅಮೆರಿಕದ ಜನರು ಪರಿಗಣಿಸುತ್ತಾರೆ. ಆ ಜನರಲ್ಲಿ ನನಗೆ ನಂಬಿಕೆ ಇದೆ’ ಎಂದು ನುಡಿದರು.
‘ಅದು ಒಂದು ಸಂವಾದ ಅಥವಾ ರಿಯಾಲಿಟಿ ಷೋ ಆಯೋಜಿಸಿದಂತಲ್ಲ. ಅದು ಪ್ರಚಾರ ಇಲ್ಲವೇ ಮಾರ್ಕೇಟಿಂಗ್ ಅಲ್ಲ’ ಎಂದರು.
ಟ್ರಂಫ್ ತಿರುಗೇಟು: ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ 69 ವರ್ಷದ ಕೋಟ್ಯಧಿಪತಿ ರಿಯಲ್ ಎಸ್ಟೇಟ್ ಉದ್ಯಮಿ ಟ್ರಂಪ್, 2012ರಲ್ಲಿ ನಾನು ಸ್ಪರ್ಧೆಯಲ್ಲಿ ಇಲ್ಲದಿರುವುದು ಒಮಬಾ ಅವರ ಅದೃಷ್ಟ ಎಂದಿದ್ದಾರೆ.
‘ನೀವು ಅದೃಷ್ಟವಂತರು. ನಾನು ಕಳೆದ ಬಾರಿ ಸ್ಪರ್ಧಿಸಿರಲಿಲ್ಲ ರೂಮ್ನಿ ಸ್ಪರ್ಧಿಸಿದ್ದರು. ನೀವಾಗ ಒಂದು ಅವಧಿಗೆ ಅಧ್ಯಕ್ಷರಾಗಿದ್ದವರು’ ಎಂದು ಟ್ರಂಫ್ ಅವರು ದಕ್ಷಿಣ ಕ್ಯಾಲಿಫೋರ್ನಿಯಾದ ರ್ಯಾಲಿಯೊಂದರಲ್ಲಿ ತಿರುಗೇಟು ನೀಡಿದ್ದಾರೆ.