ಅಂತರಾಷ್ಟ್ರೀಯ

ಜಗತ್ತಿನ ಅಂತ್ಯಕಾಲ ಸಮೀಪಿಸುತ್ತಿದೆಯೇ? ಏನಿದು ಡೂಮ್ಸ್‌ ಡೇ ಕ್ಲಾಕ್‌ !

Pinterest LinkedIn Tumblr

doomday clockಜಗತ್ತಿನ ಅಂತ್ಯವನ್ನು ಸಾಂಕೇತಿಕವಾಗಿ ತೋರಿಸುವ ಡೂಮ್ಸ್‌ ಡೇ ಕ್ಲಾಕ್‌ (ಪ್ರಳಯದಿನದ ಗಡಿಯಾರ)ದಲ್ಲಿ ಮಧ್ಯರಾತ್ರಿಗೆ ಇನ್ನು ಕೇವಲ 3 ನಿಮಿಷ ಮಾತ್ರ ಇದೆ ಎಂದು ತೋರಿಸಲಾಗಿದೆ. ಮಾನವ ಪೃಥ್ವಿಯನ್ನು ಅಂತ್ಯಗೊಳಿಸಲು ಹೊರಟಿದ್ದಾನೆ. ಅಪರಾಧ ಚಟುವಟಿಕೆ, ತಾಪಮಾನ ಹೆಚ್ಚಳ ಮತ್ತಿತರ ಕಾರಣದಿಂದಾಗಿ ಪ್ರಪಂಚ ಅಪಾಯಕ್ಕೆ ಸಿಲುಕಿದೆ ಎನ್ನುವುದನ್ನು ಸಾಂಕೇತಿಕವಾಗಿ ತೋರಿಸಲು ವಿಜ್ಞಾನಿಗಳು ಗಡಿಯಾರದ ಮುಳ್ಳನ್ನು ಮಧ್ಯರಾತ್ರಿಯ ಸಮೀಪಕ್ಕೆ ತಂದು ನಿಲ್ಲಿಸಿದ್ದಾರೆ. ಹಾಗಿದ್ದರೆ ಈಗ ಜಗತ್ತು ನಿಜಕ್ಕೂ ಅಪಾಯಕ್ಕೆ ಸಿಲುಕಿದೆಯೇ? ಡೂಮ್ಸ್‌ ಡೇ ಕ್ಲಾಕ್‌ ಅಂದರೆ ಏನು? ಅದರ ಮುಳ್ಳನ್ನು ಯಾರು ಸರಿಸುತ್ತಾರೆ? ಗಡಿಯಾರದ ಮುಳ್ಳನ್ನು ಹಿಂದೆ ಸರಿಸಲು ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎನ್ನುವ ಮಾಹಿತಿಗಳು ಇಲ್ಲಿವೆ.

ಏನಿದು ಡೂಮ್ಸ್‌ ಡೇ ಕ್ಲಾಕ್‌ ?
ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ಜಪಾನಿನ ಹಿರೋಶಿಮಾ ಮತ್ತು ನಾಗಾಸಾಕಿ ಮೇಲೆ ಅಮೆರಿಕ ಅಣುಬಾಂಬ್‌ ಅನ್ನು ಪ್ರಯೋಗಿಸಿತ್ತು. ಬಳಿಕ ಅಣು ಬಾಂಬಿನ ಭೀಕರ ಅಪಾಯವನ್ನು ತಿಳಿಸುವ ಸಲುವಾಗಿ ಶಿಕಾಗೋ ಯುನಿವರ್ಸಿಟಿಯ ವಿಜ್ಞಾನಿಗಳು ಬುಲಿಟಿನ್‌ ಆಫ್ ಅಟೊಮಿಕ್‌ ಸೈಂಟಿಸ್ಟ್ಸ್ ಎಂಬ ಸೈನ್ಸ್‌ ಜರ್ನಲ್‌ ಅನ್ನು 1945ರಲ್ಲಿ ಆರಂಭಿಸಿದ್ದರು. 16 ನೊಬೆಲ್‌ ಪ್ರಶಸ್ತಿ ಪುರಸ್ಕೃತ ವಿಜ್ಞಾನಿಗಳು ಈ ಜರ್ನಲ್‌ನ ಸದಸ್ಯರಾಗಿದ್ದು, ವಿಶ್ವ ಎಷ್ಟರ ಮಟ್ಟಿಗೆ ಅಪಾಯದಲ್ಲಿದೆ ಎನ್ನುವುದನ್ನು ಸಾಂಕೇತಿಕವಾಗಿ ತೋರಿಸಲು ಡೂಮ್ಸ್‌ ಡೇ ಕ್ಲಾಕ್‌ 1947ರಲ್ಲಿ ಸೃಷ್ಟಿಸಿದ್ದರು. ಆರಂಭದಲ್ಲಿ ಗಂಟೆಯ ಮುಳ್ಳು 12ನ್ನು ತೋರಿಸುತ್ತಿದ್ದು, ನಿಮಿಷದ ಮುಳ್ಳು ಮಧ್ಯರಾತ್ರಿಗೆ 7 ನಿಮಿಷ ಇದೆ ಎನ್ನುವುದನ್ನು ತೋರಿಸುತ್ತಿತ್ತು. ಆ ಬಳಿಕ ಅಪಾಯದ ಮಟ್ಟವನ್ನು ಗಮನಿಸಿ ವಿಜ್ಞಾನಿಗಳು ನಿಮಿಷದ ಮುಳ್ಳನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಸರಿಸುತ್ತಿದ್ದಾರೆ. ಈ ಮುಳ್ಳು ಒಮ್ಮೆಯೂ 12ನ್ನು ಮುಟ್ಟಿಲ್ಲ. ಒಂದು ವೇಳೆ ನಿಮಿಷದ ಮುಳ್ಳು 12ರ ಮೇಲೆ ಬಂದರೆ ಜಗತ್ತಿನ ಅಂತ್ಯ ಎಂದೇ ಲೆಕ್ಕ. ಆಯಾಯ ಪರಿಸ್ಥಿತಿಗೆ ತಕ್ಕಂತೆ ಗಡಿಯಾರದ ಮುಳ್ಳನ್ನು ಮುಂದಕ್ಕೆ ತಳ್ಳಬೇಕೇ ಅಥವಾ ಅದನ್ನು ಹಾಗೆಯೇ ಬಿಡಬೇಕೇ ಎಂಬ ನಿರ್ಧಾರ ವನ್ನು ಬುಲಿಟಿನ್‌ನ ವಿಜ್ಞಾನಿಗಳೇ ಕೈಗೊಳ್ಳುತ್ತಾರೆ.

ಈಗ ಮೂರು ನಿಮಿಷ ತೋರಿಸಲು ಏನು ಕಾರಣ?
2016ರ ಡೂಮ್ಸ್‌ ಡೇ ಕ್ಲಾಕ್‌ನಲ್ಲಿ ವಿಶ್ವದ ಅಂತ್ಯಕ್ಕೆ ಇನ್ನು ಮೂರೇ ನಿಮಿಷ ಬಾಕಿ ಇದೆ ಎಂದು ವಿಜ್ಞಾನಿಗಳು ಘೋಷಿಸಿದ್ದಾರೆ. 2015ರಲ್ಲಿಯೂ ಗಡಿಯಾರದ ಮುಳ್ಳು ಇದೇ ಸ್ಥಾನದಲ್ಲಿತ್ತು. ಈ ಬಾರಿ ವಿಜ್ಞಾನಿಗಳು ಗಡಿಯಾರದ ಮುಳ್ಳನ್ನು ಅದೇ ಸ್ಥಿತಿಯಲ್ಲೇ ಇರಿಸಿದ್ದಾರೆ. ಇದಕ್ಕೆ ಕಾರಣವನ್ನು ನೀಡಿರುವ ವಿಜ್ಞಾನಿಗಳು, ಇತ್ತೀಚೆಗೆ ಪ್ಯಾರಿಸ್‌ನಲ್ಲಿ ಮಾಡಿಕೊಳ್ಳಲಾದ ಜಾಗತಿಕ ಹವಾಮಾನ ಒಪ್ಪಂದ, ಇರಾನ್‌ ಅಣು ಒಪ್ಪಂದಗಳು ಮಾತ್ರ ಸಣ್ಣ ಆಶಾಕಿರಣವಾಗಿ ಗೋಚರಿಸುತ್ತಿದೆ. ಆದರೆ, ವಿಶ್ವ ಈಗಲೂ ಗಂಭೀರವಾದ ಅಪಾಯವನ್ನು ಎದುರಿಸುತ್ತಿದೆ. ನಾವು ನಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳದ ಹೊರತು ಮಾನವೀಯತೆ ಅಪಾಯದಲ್ಲಿಯೇ ಇರಲಿದೆ. ಹೀಗಾಗಿ ಈ ವರ್ಷ ಗಡಿಯಾರದ ಸಮಯದಲ್ಲಿ ಬದಲಾಣೆ ಮಾಡುವುದಿಲ್ಲ ಎಂದು ಎಂದು ಹೇಳಿದ್ದಾರೆ.

ಡೂಮ್ಸ್‌ ಡೇ ಕ್ಲಾಕ್‌ನ ಇತಿಹಾಸ
*1947ರಲ್ಲಿ ಡೂಮ್ಸ್‌ ಡೇ ಕ್ಲಾಕ್‌ ಅನ್ನು ಮೊದಲ ಬಾರಿ ಪ್ರಕಟಿಸಿದಾಗ 12ಗಂಟೆಗೆ ಇನ್ನು 7 ನಿಮಿಷವನ್ನು ತೋರಿಸಲಾಗಿತ್ತು.

*1953ರಲ್ಲಿ ಡೂಮ್ಸ್‌ ಡೇ ಕ್ಲಾಕ್‌ ಮಧ್ಯರಾತ್ರಿಗೆ ತೀರಾ ಸಮೀಪಕ್ಕೆ ಬಂದು ನಿಂತಿತ್ತು. ಅಮೆರಿಕ ಮತ್ತು ಸೋವಿಯತ್‌ ಒಕ್ಕೂಟ ಹೈಡ್ರೋಜನ್‌ ಬಾಂಬ್‌ಗಳನ್ನು ಪರೀಕ್ಷೆಗೆ ಒಳಪಡಿಸಿದ್ದರಿಂದ ಡೂಮ್ಸ್‌ ಡೇ ಕ್ಲಾಕ್‌ನಲ್ಲಿ 11:58 ಅನ್ನು ತೋರಿಸುತ್ತಿತ್ತು. ಅಂದರೆ, ವಿಶ್ವದ ಅಂತ್ಯ ಸಮೀಪಿಸಿದ್ದು, ಮಧ್ಯರಾತ್ರಿಗೆ 2ನೇ ನಿಮಿಷ ಇದೆ ಎಂದು ತಿಳಿಸಲಾಗಿತ್ತು.

*1963ರಲ್ಲಿ ಅಮೆರಿಕ ಮತ್ತು ಸೋವಿಯುತ್‌ ಒಕ್ಕೂಟ ಅಣ್ವಸ್ತ್ರ ಪರೀಕ್ಷೆಯನ್ನು ಮಿತಿಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದವು. ಹೀಗಾಗಿ ಗಡಿ ಯಾರದಲ್ಲಿ ಮಧ್ಯರಾತ್ರಿಗೆ ಇನ್ನೂ 12 ನಿಮಿಷ ಇದೆ ಎಂದು ವಿಜ್ಞಾನಿಗಳು ತೋರಿಸಿದ್ದರು.

*1984ರಲ್ಲಿ ಅಮೆರಿಕ ಮತ್ತು ಸೋವಿಯತ್‌ ಒಕ್ಕೂಟದ ಮಧ್ಯೆ ಮತ್ತೂಮ್ಮೆ ಯುದ್ಧದ ವಾತಾವರಣ ನೆಲೆಸಿತ್ತು. ಎರಡು ದೇಶಗಳ ಮಧ್ಯೆ ಶಸ್ತ್ರಾಸ್ತ್ರ ಪೈಪೋಟಿ ಆರಂಭವಾಗಿತ್ತು. ಅಣು ಬಾಂಬ್‌ ಪ್ರಯೋಗದ ಅಪಾಯ ಇರುವ ಹಿನ್ನೆಲೆಯಲ್ಲಿ ಗಡಿಯಾರದ ಮುಳ್ಳನ್ನು ಮತ್ತೆ 3 ನಿಮಿಷಕ್ಕೆ ತಂದು ನಿಲ್ಲಿಸಲಾಗಿತ್ತು.

*1991ರಲ್ಲಿ ಅಮೆರಿಕ ಮತ್ತು ರಷ್ಯಾ ನಡುವೆ ಶೀತಲ ಸಮರ ಅಧಿಕೃತವಾಗಿ ಅಂತ್ಯಗೊಂಡಾಗ ವಿಶ್ವಕ್ಕೆ ಎದುರಾಗಿದ್ದ ಬಹುದೊಡ್ಡ ಆತಂಕ ನಿವಾರಣೆಯಾಗಿತ್ತು. ಹೀಗಾಗಿ ಡೂಮ್ಸ್‌ ಡೇ ಕ್ಲಾಕ್‌ನ ಮುಳ್ಳನ್ನು 17 ನಿಮಿಷ ಹಿಂದಕ್ಕೆ ಅಂದರೆ 11:43 ಎಂದು ತೋರಿಸಲಾಗಿತ್ತು.

*2010ರಲ್ಲಿ ರಷ್ಯಾ ಮತ್ತು ಅಮೆರಿಕ ಮಧ್ಯೆ ನಡೆದ ಅಣ್ವಸ್ತ್ರ ಮಾತುಕತೆ, ಸಂಬಂಧಗಳ ಸುಧಾರಣೆ, ತಾಪಮಾನ ಇಳಿಕೆಗೆ
ಕೆಲವೊಂದು ಕ್ರಮಗಳನ್ನು ಕೈಗೊಂಡಿದ್ದರಿಂದ ಗಡಿ ಯಾರದ ಮುಳ್ಳನ್ನು 11:55ರಿಂದ 11:54ಕ್ಕೆ ಇಳಿಸಲಾಗಿತ್ತು.

*2015ರಲ್ಲಿ ಭಯೋತ್ಪಾದಕ ಚಟುವಟಿಕೆ ಹೆಚ್ಚಳ ಮತ್ತು ಮಾನವೀಯತೆ ಅಪಾಯಕ್ಕೆ ಸಿಲುಕಿದ್ದರಿಂದ ಗಡಿಯಾರದ ಮುಳ್ಳು ಮಧ್ಯರಾತ್ರಿಗೆ 3 ನಿಮಿಷವನ್ನು ತೋರಿಸುತ್ತಿದೆ. ಈ ವರ್ಷ ಅದನ್ನು ಬದಲಿಸಿಲ್ಲ.

ಗಡಿಯಾರದಮುಳ್ಳು ಹಿಂದೆ ಬರಲುಏನು ಮಾಡಬೇಕು?
ಡೂಮ್ಸ್‌ ಡೇ ಕ್ಲಾಕ್‌ನ ಮುಳ್ಳನ್ನು ಮತ್ತೆ ಹಿಂದಕ್ಕೆ ಸರಿಸಲು ಕೆಲವೊಂದು ಕ್ರಮಗಳನ್ನು ಬುಲೆಟಿನ್‌ನ ವಿಜ್ಞಾನಿಗಳು ಸೂಚಿಸಿದ್ದಾರೆ.

*ಅಣ್ವಸ್ತ್ರಗಳ ಮೇಲೆ ವಿಶ್ವದ ರಾಷ್ಟ್ರಗಳು ಮಾಡಲಾಗುತ್ತಿರುವ ವೆಚ್ಚವನ್ನು ಗಣನೀಯ ಪ್ರಮಾಣದಲ್ಲಿ ಇಳಿಸಬೇಕು.

*ಉತ್ತರ ಕೊರಿಯಾದಿಂದ ಎದುರಾಗಿರುವ ಅಣು ಬಾಂಬ್‌ನ ಅಪಾಯ ತಗ್ಗಬೇಕು

*ಜಾಗತಿಕ ತಾಪಮಾನ 2 ಡಿಗ್ರಿಯಷ್ಟು ಏರಿಕೆಯಾಗದಂತೆ ತಡೆಯುವ ನಿಟ್ಟಿನಲ್ಲಿ ಪ್ಯಾರಿಸ್‌ನಲ್ಲಿ ಮಾಡಿಕೊಳ್ಳಲಾದ ಜಾಗತಿಕ ಹವಾಮಾನ ಒಪ್ಪಂದದಲ್ಲಿನ ಕರಾರುಗಳನ್ನು ಎಲ್ಲ ದೇಶಗಳೂ ಪಾಲಿಸಬೇಕು.

*ವಾಣಿಜ್ಯಿಕ ಅಣು ತ್ಯಾಜ್ಯಗಳ ನಿರ್ವಹಣೆಗೆ ಒಂದು ಒಪ್ಪಂದ ಮಾಡಿಕೊಳ್ಳಬೇಕು.

*ನವೀನ ತಂತ್ರಜ್ಞಾನಗಳ ದುರ್ಬಳಕೆಯನ್ನು ತಡೆಯಲು ಒಂದು ಜಾಗತಿಕ ಸಂಸ್ಥೆಯನ್ನು ಸ್ಥಾಪನೆ ಮಾಡಬೇಕು.
-ಉದಯವಾಣಿ

Write A Comment