ಅಂತರಾಷ್ಟ್ರೀಯ

ಪಠಾಣ್‌ಕೋಟ್ ದಾಳಿ: ಶಂಕಿತರನ್ನು ಬಂಧಿಸಿದ ಪಾಕ್

Pinterest LinkedIn Tumblr

Pathankotಇಸ್ಲಾಮಾಬಾದ್ (ಪಿಟಿಐ): ಪಂಜಾಬ್‌ನ ಪಠಾಣ್‌ಕೋಟ್‌ ವಾಯುನೆಲೆ ಮೇಲಿನ ಉಗ್ರರ ದಾಳಿ ಘಟನೆಯಲ್ಲಿ ತನ್ನ ದೇಶವಾಸಿಗಳ ಪಾತ್ರದ ಕುರಿತ ತನಿಖೆಯನ್ನು ಪಾಕಿಸ್ತಾನ ಚುರುಕುಗೊಳಿಸಿದ್ದು, ಕೆಲವರನ್ನು ಬಂಧಿಸಿದೆ.

ಗುಜ್ರಾನವಾಲಾ, ಝೇಲಂ ಹಾಗೂ ಬಹವಲ್ಪುರ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ. ಆದರೆ, ಬಂಧಿತರ ನಿಖರ ಸಂಖ್ಯೆ ತಿಳಿದು ಬಂದಿಲ್ಲ ಎಂದು ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ದಾಳಿ ಘಟನೆಯಲ್ಲಿ ಅವರು ಪಾಲ್ಗೊಂಡಿದ್ದರೆ ಅಥವಾ ಕೆಲವರು ಆ ಕೃತ್ಯಕ್ಕೆ ಸಹಕರಿಸಿದ್ದರೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ’ ಎಂದು ಆ ಅಧಿಕಾರಿ ಹೇಳಿದ್ದಾರೆ.

ಶಂಕಿತರ ಬಂಧನ ಬೆಳವಣಿಗೆಯು ಪಠಾಣ್‌ಕೋಟ್‌ ದಾಳಿ ತನಿಖೆಗಾಗಿ ಐಬಿ, ಐಎಸ್‌ಐ ಹಾಗೂ ‌ಸೇನಾ ಗುಪ್ತಚರ ಒಳಗೊಂಡ ಜಂಟಿ ತನಿಖಾ ಸಮಿತಿ ರಚನೆಗೆ ಆದೇಶಿಸಲು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರ ಮೇಲೆ ಒತ್ತಡ ಹೆಚ್ಚಿಸಿತ್ತು.

ಇದಕ್ಕೂ ಮೊದಲು ಕೂಡ ಉಗ್ರರ ದಾಳಿ ಘಟನೆಯಲ್ಲಿ ಪಾಕಿಸ್ತಾನ ಪ್ರಜೆಗಳ ಪಾತ್ರದ ಕುರಿತು ಪಾರದರ್ಶಕ ತನಿಖೆ ನಡೆಸುವುದಾಗಿ ಷರೀಫ್ ಅವರು ಸ್ಪಷ್ಟಪಡಿಸಿದ್ದರು.

ಜನವರಿ 2ರಂದು ಪಠಾಣ್‌ಕೋಟ್‌ ವಾಯುನೆಲೆ ಮೇಲಿನ ಉಗ್ರರ ದಾಳಿಯ ವೇಳೆಗೆ ಭಯೋತ್ಪಾದಕರು ಸಂಪರ್ಕಿಸಿದ್ದ ಪಾಕಿಸ್ತಾನ ದೂರವಾಣಿ ಸಂಖ್ಯೆಗಳನ್ನು ಭಾರತವು ಷರೀಫ್ ಅವರ ಸರ್ಕಾರಕ್ಕೆ ಒದಗಿಸಿತ್ತು.

Write A Comment