ಅಂತರಾಷ್ಟ್ರೀಯ

ಮೋದಿ ಬ್ರಿಟನ್ ಪ್ರವಾಸ ಆರಂಭ: ಕ್ಯಾಮರೂನ್ ಜೊತೆ ಮಾತುಕತೆ ನಾಗರಿಕ ಅಣುಒಪ್ಪಂದಕ್ಕೆ ಸಹಿ

Pinterest LinkedIn Tumblr

Modi__________________________ಲಂಡನ್, ನ.12: ಭಾರತ-ಬ್ರಿಟನ್ ನಡುವಿನ ಆರ್ಥಿಕ ಸಂಬಂಧಗಳನ್ನು ಹೆಚ್ಚಿಸುವ ಉದ್ದೇಶದೊಡನೆ ಬಿಡುವಿಲ್ಲದ ಕಾರ್ಯಸೂಚಿಯೊಂದಿಗೆ ಬ್ರಿಟನ್‌ಗೆ ತನ್ನ ಮೂರು ದಿನಗಳ ಪ್ರವಾಸವನ್ನು ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಲಂಡನ್ನಿಗೆ ಆಗಮಿಸಿದರು. ಸಂಜೆ ಬಕಿಂಗ್‌ಹ್ಯಾಮ್‌ಶೈರ್‌ನಲ್ಲಿ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಹಾಗೂ ಮೋದಿ ನೇತೃತ್ವದಲ್ಲಿ ಉಭಯದೇಶಗಳ ನಿಯೋಗಗಳು ಜಂಟಿ ಮಾತುಕತೆಯನ್ನು ನಡೆಸಿದವು. ಈ ಸಂದರ್ಭದಲ್ಲಿ ಭಾರತ-ಬ್ರಿಟನ್ ಮಹತ್ವದ ನಾಗರಿಕ ಅಣುಒಪ್ಪಂದಕ್ಕೆ ಸಹಿಹಾಕಿದವು.
ಮೂರು ದಿನಗಳ ಬ್ರಿಟನ್ ಪ್ರವಾಸಕ್ಕಾಗಿ ಇಂದು ಏರ್‌ಇಂಡಿಯಾದ ವಿಶೇಷ ವಿಮಾನದಲ್ಲಿ ಹೀಥ್ರೋ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮೋದಿಯವರನ್ನು ಬ್ರಿಟಿಷ್ ಭಾರತೀಯ ಸಂಸದೆ ಪ್ರೀತಿ ಪಟೇಲ್, ವಿದೇಶಾಂಗ ಮತ್ತು ಕಾಮನ್‌ವೆಲ್ತ್ ಕಚೇರಿಯ ಸಹಾಯಕ ಸಚಿವ ಹ್ಯುಗೋ ಸ್ವೈರ್ ಮತ್ತು ಭಾರತದಲ್ಲಿ ಬ್ರಿಟಿಷ್ ರಾಯಭಾರಿಯಾಗಿರುವ ಜೇಮ್ಸ್ ಬೆವನ್ ಅವರು ಸ್ವಾಗತಿಸಿದರು.
ಆನಂತರ 10, ಡೌನಿಂಗ್ ಸ್ಟ್ರೀಟ್ ಬಳಿಯ ಟ್ರೆಝರಿ ಕ್ವಾಡ್ರಾಂಗಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೋದಿಯವರಿಗೆ ಬ್ರಿಟನ್ ಸಶಸ್ತ್ರ ಪಡೆಗಳು ಗೌರವರಕ್ಷೆಯ ಸ್ವಾಗತ ನೀಡಿದವು. ಈ ಮಧ್ಯೆ ಬ್ರಿಟನ್‌ಗೆ ಮೋದಿಯವರ ಆಗಮನದ ದಿನವನ್ನು ಹಲವಾರು ಗುಂಪುಗಳು ‘ಪ್ರತಿಭಟನಾ ದಿನ’ವನ್ನಾಗಿ ಘೋಷಿಸಿವೆ. ದ.ಏಷ್ಯಾ ಮತ್ತು ಇಂಗ್ಲೆಂಡ್‌ನಲ್ಲಿ ಧಾರ್ಮಿಕ ದ್ವೇಷವನ್ನು ಶಮನಗೊಳಿಸಲು ಶ್ರಮಿಸುತ್ತಿರುವ ದಿ ಆವಾಜ್ ನೆಟ್‌ವರ್ಕ್ ‘ಮೋದಿಗೆ ಸ್ವಾಗತವಿಲ್ಲ’ ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದು, ರವಿವಾರ ರಾತ್ರಿ ಅದು ಬ್ರಿಟನ್ ಸಂಸತ್ ಇರುವ ವೆಸ್ಟ್‌ಮಿನ್ಸ್ಟ್‌ರ್ ಅರಮನೆಯ ಮೇಲೆ ಸ್ವಸ್ತಿಕ್ ಚಿಹ್ನೆಯನ್ನು ಪ್ರದರ್ಶಿಸಿತ್ತು.
ಮೋದಿ ತನ್ನ ಅಧಿಕೃತ ಕಾರ್ಯಕ್ರಮಗಳನ್ನು ಆರಂಭಿಸುವ ಮುನ್ನ ಸಿಖ್ ಸಮುದಾಯದ ಸದಸ್ಯರನ್ನು ಭೇಟಿಯಾದರು.
ಇಂದು ರಾತ್ರಿ ಬ್ರಿಟನ್ ಪ್ರಧಾನಿಯ ಬಕಿಂಗ್‌ಹ್ಯಾಮ್‌ಶೈರ್‌ನ ಚೆಕರೆಸ್ ನಿವಾಸದಲ್ಲಿ ಅವರ ಅತಿಥಿಯಾಗಿ ತಂಗಿರುವ ಮೋದಿ ನಾಳೆ ಲಂಡನ್ನಿಗೆ ಮರಳಲಿದ್ದು, ಸಿಇಒಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅವರು ಲಂಡನ್‌ನ ಥೇಮ್ಸ್ ನದಿಯ ದಂಡೆಯಲ್ಲಿ ನಿರ್ಮಿಸಲ್ಪಟ್ಟಿರುವ 12ನೇ ಶತಮಾನದ ತತ್ವಜ್ಞಾನಿ ಬಸವೇಶ್ವರರ ನೂತನ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ಲಂಡನ್‌ನಲ್ಲಿ ನೂತನ ಅಂಬೇಡ್ಕರ್ ಸ್ಮಾರಕವನ್ನು ಉದ್ಘಾಟಿಸಲಿದ್ದಾರೆ. ಲಂಡನ್ ಸಮೀಪದ ಸೋಲಿಹುಲ್‌ನಲ್ಲಿ ಟಾಟಾ ಮೋಟರ್ಸ್‌ ಒಡೆತನದ ಜಾಗ್ವಾರ್ ಲ್ಯಾಂಡ್ ರೋವರ್ ಕಾರ್ಖಾನೆಗೆ ಭೇಟಿ ನೀಡಲಿದ್ದಾರೆ.

9 ಶತಕೋಟಿ ಪೌಂಡ್ ಡೀಲ್
ಭಾರತ ಮತ್ತು ಇಂಗ್ಲೆಂಡ್ ಒಂಬತ್ತು ಶತಕೋಟಿ ಪೌಂಡ್ ವೌಲ್ಯದ ಒಪ್ಪಂದಗಳನ್ನು ಪ್ರಕಟಿಸಿದ್ದು, ನಾಗರಿಕ ಪರಮಾಣು ಒಪ್ಪಂದವೊಂದಕ್ಕೆ ಸಹಿ ಹಾಕಿವೆ. ಇದೇ ವೇಳೆ ರಕ್ಷಣೆ ಮತ್ತು ಸೈಬರ್ ಭದ್ರತೆ ಕ್ಷೇತ್ರದಲ್ಲಿ ಪರಸ್ಪರ ಸಹಭಾಗಿತ್ವಕ್ಕೂ ಉಭಯ ರಾಷ್ಟ್ರಗಳು ಒಪ್ಪಿಕೊಂಡಿದ್ದು, ರೈಲ್ವೆ ರುಪೀ ಬಾಂಡ್‌ಗೆ ಚಾಲನೆ ನೀಡಲೂ ನಿರ್ಧರಿಸಿವೆ.
ಮೋದಿಯವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಪ್ರಧಾನಿ ಕ್ಯಾಮರೂನ್ ಅವರು ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ‘ಹೊಸ ಕ್ರಿಯಾಶೀಲ ಆಧುನಿಕ ಸಹಭಾಗಿತ್ವ ’ಎಂದು ಬಣ್ಣಿಸಿದರಲ್ಲದೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ತನ್ನ ರಾಷ್ಟ್ರದ ಬೆಂಬಲವನ್ನು ಪುನರುಚ್ಚರಿಸಿದರು.
ನಿಧಿಎತ್ತುಗೆಗಾಗಿ ಲಂಡನ್‌ನ್ನು ಹಣಕಾಸು ನೆಲೆಯನ್ನಾಗಿ ಮಾಡಿಕೊಳ್ಳುವ ಭಾರತದ ಯೋಜನೆಯನ್ನು ಮೋದಿ ಪ್ರಮುಖವಾಗಿ ಬಿಂಬಿಸಿದರು.
ಇದಕ್ಕೂ ಮುನ್ನ ಉಭಯ ನಾಯಕರು ಸುಮಾರು 90 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದು, ವಿದೇಶ ಕಾರ್ಯದರ್ಶಿ ಫಿಲಿಪ್ ಹ್ಯಾಮಂಡ್,ಉದ್ಯೋಗ ಸಚಿವೆ ಪ್ರೀತಿ ಪಟೇಲ್ ಮತ್ತು ಉದ್ಯಮ ಸಚಿವ ಸಾಜಿದ್ ಜಾವೇದ್ ಸೇರಿದಂತೆ ಹಿರಿಯ ಸಚಿವರು ಈ ಸಂದರ್ಭ ಉಪಸ್ಥಿತರಿದ್ದರು.
ಇಂಗ್ಲೆಂಡ್‌ನಲ್ಲಿ ಭಾರತದ ರಾಯಭಾರಿಯಾಗಿರುವ ರಂಜನ ಮಥಾಯಿ, ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಅವರನ್ನು ಭಾರತೀಯ ನಿಯೋಗವು ಒಳಗೊಂಡಿದೆ.

Write A Comment