ಓಸ್ಲೋ, ಅ.9: ಟ್ಯುನಿಶಿಯಾದ ‘ನ್ಯಾಷನಲ್ ಡೈಲಾಗ್ ಕ್ವಾರ್ಟೆಟ್’ ಎಂಬ ಸಣ್ಣ ಗುಂಪಿಗೆ 2015ರ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ.
2011ರ ಜಾಸ್ಮಿನ್ ಕ್ರಾಂತಿಯ ಹಿನ್ನೆಲೆಯಲ್ಲಿ ಟ್ಯುನಿಶಿಯಾದಲ್ಲಿ ಬಹುಸಂಸ್ಕೃತಿಯನ್ನು ಒಳಗೊಂಡ ಪ್ರಜಾಪ್ರಭುತ್ವ ವ್ಯವಸ್ಥೆಯ ನಿರ್ಮಾಣದಲ್ಲಿ ‘ನ್ಯಾಷನಲ್ ಡೈಲಾಗ್ ಕ್ವಾರ್ಟೆಟ್’ ನಿರ್ಣಾಯಕ ಕೊಡುಗೆಯನ್ನು ನೀಡಿದೆ ಎಂದು ನಾರ್ವೆಯ ನೊಬೆಲ್ ಸಮಿತಿ ಹೇಳಿದೆ.
9,72,000 ಡಾಲರ್ ಮೊತ್ತದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಡಿಸೆಂಬರ್ 10ರಂದು ಓಸ್ಲೋದಲ್ಲಿ ಪ್ರದಾನ ಮಾಡಲಾಗುವುದು.
ಟ್ಯುನಿಶಿಯಾದಲ್ಲಿ ರಾಜಕೀಯ ಹತ್ಯೆಗಳು ಮತ್ತು ವ್ಯಾಪಕ ಸಾಮಾಜಿಕ ಅಶಾಂತಿಯ ಪರಿಣಾಮಗ ಳಿಂದಾಗಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ಕುಸಿದು ಬೀಳುವ ಹಂತದಲ್ಲಿದ್ದಾಗ 2013ರಲ್ಲಿ ನ್ಯಾಷನಲ್ ಡೈಲಾಗ್ ಕ್ವಾರ್ಟೆಟ್ ರಚಿಸಲಾಗಿತ್ತು. ದೇಶವು ನಾಗರಿಕ ಯುದ್ಧದ ಸನ್ನಿವೇಶದಲ್ಲಿದ್ದಾಗ ಶಾಂತಿಯುತ ರಾಜಕೀಯ ಪ್ರಕ್ರಿಯೆಯ ರೂಪದಲ್ಲಿ ಈ ಗುಂಪು ರಚನೆಗೊಂಡು ಕೆಲಸ ಮಾಡಿತ್ತು.
ಕೆಲವೇ ವರ್ಷಗಳ ಅವಧಿಯಲ್ಲಿ ದೇಶದ ಜನತೆಗೆ ಮೂಲಭೂತ ಹಕ್ಕುಗಳನ್ನು ಒದಗಿಸುವ ಹಾಗೂ ಸಂವಿಧಾನಿಕ ವ್ಯವಸ್ಥೆಯುಳ್ಳ ಸರಕಾರವನ್ನು ಸ್ಥಾಪನೆ ಮಾಡುವಲ್ಲಿ ಈ ಗುಂಪು ಯಶಸ್ವಿಯಾಗಿತ್ತು ಎಂದು ಸಮಿತಿ ತಿಳಿಸಿದೆ.
‘ನ್ಯಾಷನಲ್ ಡೈಲಾಗ್ ಕ್ವಾರ್ಟೆಟ್’ನಲ್ಲಿ ನಾಲ್ಕು ಪ್ರಮುಖ ಸಂಘಟನೆಗಳಿವೆ. ಟ್ಯುನಿಶಿಯನ್ ಜನರಲ್ ಲೇಬರ್ ಯೂನಿಯನ್; ಟ್ಯುನಿಶಿಯನ್ ಕಾನ್ಫಿಡರೇಷನ್ ಆಫ್ ಇಂಡಸ್ಟ್ರಿ, ಟ್ರೇಡ್ ಆಂಡ್ ಹ್ಯಾಂಡಿಕ್ರಾಫ್ಟ್ಸ್; ಟ್ಯುನಿಶಿಯನ್ ಹ್ಯೂಮನ್ ರೈಟ್ಸ್ ಲೀಗ್; ಮತ್ತು ಟ್ಯುನಿಶಿಯನ್ ಆರ್ಡರ್ ಆಫ್ ಲಾಯರ್ಸ್ ಇವು ಆ ಸಂಘಟನೆಗಳಾಗಿವೆ. 2015ರ ಶಾಂತಿ ಪ್ರಶಸ್ತಿಯನ್ನು ಕ್ವಾರ್ಟೆಟ್‌ಗೆ ನೀಡಲಾಗಿದೆ. ಈ ನಾಲ್ಕು ಸಂಘಟನೆಗಳಿಗೆ ಅಲ್ಲ ಎಂದು ಸಮಿತಿ ಸ್ಪಷ್ಟಪಡಿಸಿದೆ.