ಅಂತರಾಷ್ಟ್ರೀಯ

2 ದಿನದಲ್ಲಿ ಕ್ಯಾನ್ಸರ್ ಮೂಲ ಪತ್ತೆ ಹಚ್ಚುವ ತಂತ್ರಾಂಶ

Pinterest LinkedIn Tumblr

cancer-fiಲಂಡನ್: ಕ್ಯಾನ್ಸರ್ ಮೂಲವನ್ನು ಪತ್ತೆ ಹಚ್ಚುವ ತಾಂತ್ರಿಕತೆಯಲ್ಲಿ ಮಹತ್ವದ ಸಂಶೋಧನೆಯೊಂದು ಹೊರಬಿದ್ದಿದ್ದು, ಡೆನ್ಮಾರ್ಕ್​ನ ಸಂಶೋಧಕರು ಕ್ಯಾನ್ಸ್​ರ್​ನ ಮೂಲವನ್ನು 2 ದಿನಗಳಲ್ಲಿ ಪತ್ತೆ ಹಚ್ಚುವ ಸಾಫ್ಟ್​ವೇರ್ ಅಭಿವೃದ್ಧಿ ಪಡಿಸಿರುವುದಾಗಿ ತಿಳಿಸಿದ್ದಾರೆ.

ಈ ಹೊಸ ತಂತ್ರಜ್ಞಾನದಿಂದ ವೈದ್ಯರು ಶೀಘ್ರವಾಗಿ ಕ್ಯಾನ್ಸರ್​ನ ಮೂಲವನ್ನು ಪತ್ತೆ ಹಚ್ಚಲು ಸಾಧ್ಯವಾಗಲಿದೆ. ಪಿತ್ತಜನಕಾಂಗ, ಶ್ವಾಸಕೋಶ ಮತ್ತಿತರ ಕ್ಯಾನ್ಸರ್​ಗಳ ಮೂಲವನ್ನು ತ್ವರಿತವಾಗಿ ಶೋಧಿಸಲು ಅನುಕೂಲವಾಗಲಿದೆ. ಪ್ರಸ್ತುತ ವೈದ್ಯರು ಕ್ಯಾನ್ಸರ್ ಇರುವುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿದೆ. ಆದರೆ ಹಲವು ರೋಗಿಗಳಲ್ಲಿ ತ್ವರಿತವಾಗಿ ಕ್ಯಾನ್ಸರ್ ಮೂಲ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಈ ರೋಗಿಗಳು ಹಲವು ಪರೀಕ್ಷೆಗಳನ್ನು ನಡೆಸಿ ಮೂಲವನ್ನು ನಿಖರವಾಗಿ ಪತ್ತೆ ಹಚ್ಚುವವರೆಗೂ ಕಾಯಬೇಕಾಗುತ್ತದೆ.

ಡೆನ್ಮಾರ್ಕ್ ತಾಂತ್ರಿಕ ವಿಶ್ವವಿದ್ಯಾಲಯವು ಹೊಸ ಕಂಪ್ಯೂಟರ್ ಸಾಫ್ಟ್​ವೇರ್ ಅಭಿವೃದ್ಧಿ ಪಡಿಸಿದ್ದು, ಈ ತಂತ್ರಾಂಶವು 85% ನಿಖರವಾಗಿ ಕ್ಯಾನ್ಸರ್​ನ ಮೂಲವನ್ನು ಪತ್ತೆ ಮಾಡಲಿದೆ. ಕ್ಯಾನ್ಸರ್​ನ ಮೂಲ ಬೇಗ ಪತ್ತೆಯಾಗುವುದರಿಂದ ಚಿಕಿತ್ಸೆಯನ್ನು ಕೇಂದ್ರೀಕರಿಸಲು ನೆರವಾಗಲಿದೆ. ಇದರಿಂದ ರೋಗ ಬೇಗ ವಾಸಿಯಾಗಲು ಸಾಧ್ಯವಾಗಲಿದೆ. ಈ ತಂತ್ರಾಂಶವು ರೋಗಿಯ ಡಿಎನ್​ಎ ಪರೀಕ್ಷಿಸಿ ರೋಗದ ಮೂಲವನ್ನು ಪತ್ತೆ ಮಾಡಲಿದೆ. ಈ ತಂತ್ರಾಂಶವನ್ನು ಸಾವಿರಾರು ಸ್ಯಾಂಪಲ್​ಗಳಲ್ಲಿ ಪರೀಕ್ಷೆಗೆ ಒಳಪಡಿಸಿದ್ದು, ಎಲ್ಲಾ ಪರೀಕ್ಷೆಗಳಲ್ಲೂ ಬಹುತೇಕ ನಿಖರವಾಗಿ ಕ್ಯಾನ್ಸರ್ ಮೂಲವನ್ನು ಪತ್ತೆ ಹಚ್ಚಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಪ್ರಸ್ತುತ ಈ ತಂತ್ರಾಂಶವು ಕ್ಯಾನ್ಸರ್ ಮೂಲವನ್ನು ಪತ್ತೆ ಹಚ್ಚಲು 2 ದಿನಗಳ ಸಮಯ ತೆಗೆದುಕೊಳ್ಳುತ್ತಿದ್ದು, ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರೋಗ ಪತ್ತೆಗೆ ಇನ್ನೂ ಕಡಿಮೆ ಅವಧಿ ತೆಗೆದುಕೊಳ್ಳುವಂತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಸಂಶೋಧಕರು ತಿಳಿಸಿದ್ದಾರೆ.

Write A Comment