ಅಂತರಾಷ್ಟ್ರೀಯ

ಕಾಶ್ಮೀರ ಬಿಕ್ಕಟ್ಟು ಭಾರತ ಪಾಕ್ ನಡುವಿನ ವಿಷಯ: ಒಬಾಮ

Pinterest LinkedIn Tumblr

2Barack-Obama-EU-January-2012ನ್ಯೂಯಾರ್ಕ್,ಸೆ.29: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಇಲ್ಲಿ ನಡೆಸಿದ ಮಾತುಕತೆಗಳ ಸಂದರ್ಭ ಪಾಕಿಸ್ತಾನ ಮೂಲದ ಭೀತಿವಾದವೂ ಪ್ರಸ್ತಾಪಗೊಂಡಿದ್ದು, ಇದೇ ವೇಳೆ ಕಾಶ್ಮೀರವು ಭಾರತ ಮತ್ತು ಪಾಕ್ ನಡುವೆ ಬಗೆಹರಿಸಲ್ಪಡಬೇಕಾದ ದ್ವಿಪಕ್ಷೀಯ ವಿಷಯವಾಗಿದೆ ಎಂದು ಒಬಾಮ ಒಪ್ಪಿಕೊಂಡರು. ಒಬಾಮ, ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಮತ್ತು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡೆ ಅವರೊಂದಿಗೆ ಮೋದಿಯವರು ನಡೆಸಿದ ಮಾತುಕತೆಗಳ ವಿವರಗಳನ್ನು ಇಲ್ಲಿ ಸುದ್ದಿಗಾರರಿಗೆ ನೀಡುತ್ತಿದ್ದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ ಸ್ವರೂಪ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ,ಭೀತಿವಾದದ ಕುರಿತು ಚರ್ಚೆ ವೇಳೆ ಪಾಕಿಸ್ತಾನದ ಹೆಸರು ಪ್ರಸ್ತಾಪಗೊಂಡಿತ್ತು ಎಂದು ತಿಳಿಸಿದರು.

ವಿಶ್ವಸಂಸ್ಥೆಯು ಭಯೋತ್ಪಾದನೆಯ ವ್ಯಾಖ್ಯಾನವನ್ನು ರೂಪಿಸಲು ಇಷ್ಟೊಂದು ವಿಳಂಬವನ್ನು ಮಾಡುತ್ತಿರುವುದೇಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಭೀತಿವಾದದ ವ್ಯಾಖ್ಯಾನದಲ್ಲಿ ನಿದರ್ಶನಗಳು ಸ್ವಾತಂತ್ರ ಹೋರಾಟಗಾರರ ಹೆಸರುಗಳನ್ನು ಹೊಂದಿರಬೇಕು ಎಂದು ಕೆಲವರು, ನಿರ್ದಿಷ್ಟವಾಗಿ ಇಸ್ಲಾಮಿಕ್ ಸಹಕಾರ ಸಂಘಟನೆ(ಒಐಸಿ)ಯು ಬಯಸಿದೆ. ಕೆಲವು ರಾಜಿ ಸೂತ್ರಗಳನ್ನು ಮುಂದಿಡಲಾಗಿದೆಯಾದರೂ,ಅವುಗಳನ್ನು ಇನ್ನೂ ಒಪ್ಪಿಕೊಳ್ಳಲಾಗಿಲ್ಲ ಎಂದರು.

ವಿಶ್ವಸಂಸ್ಥೆ ಶಾಂತಿಪಾಲನೆ ಸಭೆಯಲ್ಲಿ ಪರಸ್ಪರ ಕೈ ಬೀಸಿದ ಮೋದಿ-ಶರೀಫ್
ವಿಶ್ವಸಂಸ್ಥೆ,ಸೆ.29: ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಮತ್ತ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಅವರ ನಡುವೆ ಅನೌಪಚಾರಿಕ ಮಾತುಕತೆ ಅಥವಾ ಹಸ್ತಲಾಘವ ಸಾಧ್ಯತೆಯ ಬಗ್ಗೆ ಕೆಲವು ದಿನಗಳಿಂದಲೂ ಕೇಳಿ ಬರುತ್ತಿದ್ದ ಊಹಾಪೋಹಗಳನ್ನು ಮಂಗಳವಾರ ಹುಸಿಗೊಳಿಸಿದ ಉಭಯ ನಾಯಕರು ವಿಶ್ವಸಂಸ್ಥೆ ಶಾಂತಿಪಾಲನಾ ಸಭೆಯಲ್ಲಿ ಪರಸ್ಪರರತ್ತ ಕೈಗಳನ್ನು ಬೀಸುವುದಕ್ಕಷ್ಟೇ ಮುಖತಃ ಭೇಟಿಯನ್ನು ಸೀಮಿತಗೊಳಿಸಿದರು.
ಅಮರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಮೊದಲು ಸಭಾಂಗಣವನ್ನು ಪ್ರವೇಶಿಸಿದ ಮೋದಿ ಕುದುರೆ ಲಾಳದ ಆಕಾರದ ಮೇಜಿನ ಬಲಗಡೆಯ ಸ್ಥಾನದಲ್ಲಿ ಆಸೀನರಾದರು. ಕೆಲವು ನಿಮಿಷಗಳ ಬಳಿಕ ಆಗಮಿಸಿದ ಶರೀಫ್ ಮೋದಿಯವರ ಎದುರು ಭಾಗದಲ್ಲಿಯ ಆಸನದಲ್ಲಿ ಕುಳಿತುಕೊಂಡರು. ಉಭಯ ನಾಯಕರು ಪರಸ್ಪರರತ್ತ ತಕ್ಷಣವೇ ನಗೆಯನ್ನು ಬೀರಲಿಲ್ಲ,ಕೈಗಳನ್ನೂ ಬೀಸಲಿಲ್ಲ. ಸಭೆ ಇನ್ನೇನು ಆರಂಭಗೊಳ್ಳುತ್ತದೆ ಎಂದಾಗ ಶರೀಫ್ ಮೋದಿಯವರತ್ತ ಕೈ ಬೀಸಿದ್ದು, ಇದಕ್ಕೆ ಸ್ಪಂದಿಸಿದ ಮೋದಿ ತಾನೂ ಕೈ ಬೀಸಿದ್ದಲ್ಲದೆ ನಗುವನ್ನೂ ಬೀರಿದರು. ಕೆಲ ಕ್ಷಣಗಳ ಬಳಿಕ ಮೋದಿ ಮತ್ತೊಮ್ಮೆ ಶರೀಫರತ್ತ ಕೈ ಬೀಸಿದ್ದು, ಪ್ರತಿಯಾಗಿ ಅವರೂ ಮೋದಿಯವರತ್ತ ಕೈ ಬೀಸಿ ಮುಗುಳ್ನಗು ಬೀರಿದರು.
ಮೋದಿ ತನ್ನ ಭಾಷಣ ಮುಗಿದ ಬೆನ್ನಿಗೇ ಅಲ್ಲಿಂದ ಹೊರಗೆ ನಡೆದರು. ಈ ಸಂದರ್ಭದಲ್ಲಿ ಅವರು ಅಲ್ಲಿದ್ದ ಯಾವುದೇ ನಾಯಕರ ಬಳಿಗೆ ತೆರಳಿ ಹಸ್ತಲಾಘವ ನೀಡಲಿಲ್ಲ. ಇದಾದ 10-15 ನಿಮಿಷಗಳ ಬಳಿಕ ಶರೀಫ್ ಹೊರಗೆ ತೆರಳಿದರು.

Write A Comment