ಅಂತರಾಷ್ಟ್ರೀಯ

ಪ್ರಪಂಚದ ಹಲವು ಭಾಗಗಳಲ್ಲಿ ಕಾಣಿಸಿಕೊಂಡ ರಕ್ತಚಂದಿರ

Pinterest LinkedIn Tumblr

moonವಾಶಿಂಗ್ಟನ್, ಸೆ. 28: ಸೂಪರ್‌ಮೂನ್ (ಭೂಮಿಯ ಅತ್ಯಂತ ಹತ್ತಿರದಲ್ಲಿ ಪೂರ್ಣ ಚಂದ್ರ ಕಾಣಿಸಿಕೊಳ್ಳುವುದು, ಹಾಗಾಗಿ ಮಾಮೂಲಿಗಿಂತ ದೊಡ್ಡದಾಗಿ ಕಾಣಿಸಿಕೊಳ್ಳುತ್ತದೆ) ಮತ್ತು ಸಂಪೂರ್ಣ ಚಂದ್ರಗ್ರಹಣ ಏಕಕಾಲದಲ್ಲಿ ಸಂಭವಿಸುವ ‘ಸೂಪರ್ ಬ್ಲಡ್ ಮೂನ್’ (ರಕ್ತ ಚಂದಿರ) ಸೋಮವಾರ ಪ್ರಪಂಚದಾದ್ಯಂತ ಗೋಚರವಾಗಿದೆ.
ದಶಕಗಳ ಅವಧಿಯಲ್ಲಿ ಮೊದಲ ಬಾರಿಗೆ ಕಂಡುಬಂದ ಬೃಹತ್ ರಕ್ತ ಕೆಂಪು ಚಂದ್ರ ಬಿಂಬವನ್ನು ಕೋಟ್ಯಂತರ ಮಂದಿ ವೀಕ್ಷಿಸಿದರು.

ಸೂರ್ಯ, ಭೂಮಿ ಮತ್ತು ಸಾಮಾನ್ಯಕ್ಕಿಂತ ದೊಡ್ಡದಾದ ಹಾಗೂ ಹೆಚ್ಚು ಪ್ರಕಾಶಮಾನ ಚಂದ್ರ ಒಂದು ಗಂಟೆಗೂ ಹೆಚ್ಚು ಕಾಲ ಸರಳ ರೇಖೆಯಲ್ಲಿ ಬಂದವು. ಈ ಖಗೋಳ ವಿದ್ಯಮಾನ ಅಮೆರಿಕ ಖಂಡಗಳು, ಯುರೋಪ್, ಆಫ್ರಿಕ, ಪಶ್ಚಿಮ ಏಶ್ಯ ಮತ್ತು ಪೂರ್ವ ಪೆಸಿಫಿಕ್‌ನಲ್ಲಿ ಗೋಚರಿಸಿತು.
ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ಜನರ ಗುಂಪುಗಳು ಪ್ಲಾಝಾಗಳು ಮತ್ತು ಕಾಲು ದಾರಿಗಳಲ್ಲಿ ನೆರೆದು ಆಕಾಶವನ್ನು ದಿಟ್ಟಿಸಿದರು ಹಾಗೂ ತಮ್ಮ ಸ್ಮಾರ್ಟ್ ಫೋನ್‌ಗಳಲ್ಲಿ ಫೋಟೊ ತೆಗೆಯಲು ಯತ್ನಿಸಿದರು. ಆದಾಗ್ಯೂ, ವಾಶಿಂಗ್ಟನ್ ಸೇರಿದಂತೆ ಇತರ ಹಲವಾರು ನಗರಗಳಲ್ಲಿ ಈ ಅಪೂರ್ವ ವಿದ್ಯಮಾನವನ್ನು ಮೋಡಗಳು ಮರೆಮಾಚಿದವು.

ಭಾರತದ ಯಾವುದೇ ಪ್ರಮುಖ ನಗರಗಳಲ್ಲಿ ಈ ರಕ್ತಚಂದಿರ ಗೋಚರಿಸಲಿಲ್ಲ. ಆದಾಗ್ಯೂ, ದೇಶದ ದೂರದ ಈಶಾನ್ಯ ಭಾಗದಲ್ಲಿ ಉತ್ಸಾಹಿಗಳು ಟೆಲಿಸ್ಕೋಪ್‌ಗಳ ಮೂಲಕ ಪೂರ್ಣ ಚಂದ್ರಗ್ರಹಣದ ತುಣುಕುಗಳನ್ನು ವೀಕ್ಷಿಸುವಲ್ಲಿ ಯಶಸ್ವಿಯಾದರು.
33 ವರ್ಷಕ್ಕಿಂತ ಕೆಳಗಿನ ಜನರ ಪಾಲಿಗೆ ಇದು ಅವರ ಕಾಲದಲ್ಲಿ ನಡೆದ ಮೊದಲ ‘ರಕ್ತ ಚಂದಿರ’.
ಕಳೆದ ಬಾರಿಯ ರಕ್ತಚಂದಿರ 1982ರಲ್ಲಿ ಕಾಣಿಸಿಕೊಂಡಿತ್ತು. 1900ರ ಬಳಿಕದ ಐದನೆ ರಕ್ತಚಂದಿರ ಇದಾಗಿದೆ. ಮುಂದಿನ ರಕ್ತಚಂದಿರನನ್ನು ನೋಡಲು 2033ರವರೆಗೆ ಕಾಯಬೇಕು ಎಂದು ನಾಸಾ ಬಾಹ್ಯಾಕಾಶ ಸಂಸ್ಥೆ ಹೇಳಿದೆ.

Write A Comment