ಟರ್ಕಿ: ಯಶಸ್ಸಿಗೆ ಉದ್ಯೋಗಿಗಳೇ ಕಾರಣ ಎಂದು ಭಾವಿಸಿ, ಕಂಪನಿ ಮಾರಿದ ಹಣದಲ್ಲಿ 114 ಉದ್ಯೋಗಿಗಳಿಗೆ ತಲಾ ಸುಮಾರು 1.5 ಕೋಟಿ ರೂ. ಮೊತ್ತದ (1.5 ಲಕ್ಷ ಪೌಂಡ್) ಬೋನಸ್ ನೀಡಿದ್ದಾರೆ ಈ ಬಾಸ್.
ಇಂಥ ಗ್ರೇಟ್ ಬಾಸ್ ಹೆಸರು ನೆವ್ಜತ್ ಐಡಿನ್. ಇವರು ಹದಿನೈದು ವರ್ಷಗಳ ಹಿಂದೆ ಕೇವಲ 50 ಸಾವಿರ ಪೌಂಡ್‌ಗಳಲ್ಲಿ ಟರ್ಕಿಯ ಆನ್‌ಲೈನ್ ಆಹಾರ ಮಾರಾಟ ಕಂಪನಿ ಯೆಮೆಕ್ಸೆಪೆಟಿಯನ್ನು ಸ್ಥಾಪಿಸಿದ್ದರು. ಯಶಸ್ಸಿನ ತುತ್ತತುದಿಯಲ್ಲಿದ್ದ ಈ ಕಂಪನಿಯನ್ನು ಜರ್ಮನಿ ಮೂಲದ ಡೆಲಿವರಿ ಹೀರೋ ಎಂಬ ಕಂಪನಿ 37.5 ಕೋಟಿ ಪೌಂಡ್‌ಗೆ ಕೊಂಡಿದೆ. ‘ಈ ಮಟ್ಟದ ಯಶಸ್ಸಿಗೆ ಉದ್ಯೋಗಿಗಳೇ ಕಾರಣ,’ ಎಂದು ಹೇಳುವ ದೊಡ್ಡ ಮನಸ್ಸು ಐಡಿನ್ ಅವರದ್ದು.
ಹಾಗಂತ ಉದ್ಯೋಗಿಗಳಿಗೆ ಇಂಥ ಬೋನಸ್ ನೀಡಬೇಕೆಂಬ ಯಾವ ಕರಾರೂ ಇರಲಿಲ್ಲ. ಆದರೆ, ಯೆಮೆಕ್ಸೆಪೆಟಿ ಐಡಿನ್‌ನ ಹೃದಯ ವೈಶಾಲ್ಯತೆ ಇಂಥದ್ದೊಂದು ಕೆಲಸ ಮಾಡಿಸಿದೆ.
‘ಸುಮಾರು 700-1200 ಪೌಂಡ್ ವೇತನ ಪಡೆಯುವ ಉದ್ಯೋಗಿಗಳಿಗೆ ಸಿಕ್ಕ ಬೋನಸ್‌ನಿಂದಾದ ಸಂತೋಷ ಹೇಳತೀರದು. ಅವರು ಮನೆ, ಕಾರು ಏನು ಬೇಕಾದರೂ ಕೊಳ್ಳಬಹುದು. ಬೋನಸ್ ಸಿಕ್ಕ ಸಂತೋಷವನ್ನು ಕೂಗಿ, ಕಿರುಚಿ, ಅತ್ತು ಹಾಗೂ ಪತ್ರ ಬರೆದು ಥ್ಯಾಂಕ್ಸ್ ಹೇಳುವ ಮೂಲಕ ಸಂಭ್ರಮಿಸಿದರು,’ ಎನ್ನುತ್ತಾರೆ ಐಡಿನ್.
ಕಂಪನಿಯನ್ನು ಮಾರುವ ಕರಾರು ಮಾಡಿಕೊಳ್ಳುವ ಮುನ್ನವೇ ಬೋನಸ್ ನೀಡುವ ಒಪ್ಪಂದವಾಗಿತ್ತು. ಹೊಸ ಕಂಪನಿಯೂ ಉದ್ಯೋಗಿಗಳನ್ನು ಸಂತುಷ್ಟಗೊಳಿಸಲು ಒಪ್ಪಿಕೊಂಡಿದ್ದು ಮಾತ್ರ ವಿಶೇಷ.