ಅಂತರಾಷ್ಟ್ರೀಯ

ಅಮೆರಿಕ: ಹಿಂದೂ ದೇವಾಲಯದ ನಾಮಫಲಕಕ್ಕೆ ಗುಂಡಿನ ದಾಳಿ

Pinterest LinkedIn Tumblr

america

ಹ್ಯೂಸ್ಟನ್, ಜು.19: ಅಮೆರಿಕದ ಉತ್ತರ ಕೆರೊಲಿನಾದಲ್ಲಿ ಇರಿಸಲಾಗಿದ್ದ ಯೋಜಿತ ಹಿಂದೂ ದೇವಾಲಯವೊಂದರ ನಾಮಫಲಕವನ್ನು ಗುರಿಯಾಗಿಸಿ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ ಅದರಲ್ಲಿ 60 ರಂಧ್ರಗಳಾಗಿವೆ ಎಂದು ವರದಿಯೊಂದು ತಿಳಿಸಿದೆ. ಘಟನೆಯಿಂದ ಭಾರತೀಯ ಸಮುದಾಯವು ಆಘಾತಗೊಂಡಿದ್ದು, ಅಧಿಕಾರಿಗಳು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಘಟನೆಯು ಜುಲೈ 4ರ ಮಧ್ಯಾಹ್ನದ ಬಳಿಕ ಹಾಗೂ ಕಳೆದ ಶನಿವಾರ ಮಧ್ಯಾಹ್ನ 1 ಗಂಟೆಯ ನಡುವೆ ಸಂಭವಿಸಿರುವುದಾಗಿ ಫೋರ್ಸಿತ್ ಕೌಂಟಿಯ ಅಧಿಕಾರಿಗಳು ವರದಿಯೊಂದರಲ್ಲಿ ತಿಳಿಸಿದ್ದಾರೆ.
ಹಾನಿಗೊಂಡಿರುವ ನಾಮಫಲಕದ ಬಳಿ ಖಾಲಿ ಶೆಲ್ ಕವಚಗಳನ್ನು ಪತ್ತೆ ಹಚ್ಚಿರುವುದಾಗಿ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿರುವ ವರದಿ ತಿಳಿಸಿದೆ.

ಈ ಗುಂಡಿನ ದಾಳಿಯಿಂದಾಗಿ ಸುಮಾರು 200 ಡಾಲರ್ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿ ಯಾವುದೇ ಶಂಕಿತರ ಬಗ್ಗೆ ಸುಳಿವು ಲಭ್ಯವಾಗಿಲ್ಲವೆನ್ನಲಾಗಿದೆ.

ಉತ್ತರ ಕೆರೊಲಿನಾದಲ್ಲಿರುವ ‘ಓಂ ಹಿಂದೂ’ ಸಂಘಟನೆಯು ಸುಮಾರು 3,600 ಚ.ಅಡಿ ವಿಸ್ತೀರ್ಣದ ದೇವಾಲಯವೊಂದನ್ನು ನಿರ್ಮಿಸಲು ಯೋಜಿಸಿತ್ತು ಹಾಗೂ ಅದಕ್ಕಾಗಿ 7.6 ಎಕರೆ ಭೂಮಿಯನ್ನು ಖರೀದಿಸಿತ್ತು.
‘‘ಅಮೆರಿಕನ್ನರಾಗಿ ನಾವು ದ್ವೇಷ ಕೃತ್ಯಗಳನ್ನು ವಿರೋಧಿಸುತ್ತೇವೆ,ಅಹಿಂಸೆಯನ್ನು ಎತ್ತಿಹಿಡಿಯುತ್ತೇವೆ’’ ಎಂದು ಓಂ ಹಿಂದೂ ಸಂಘಟನೆಯು ಹೊರಡಿಸಿರುವ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಫೋರ್ಸಿತ್ ಕೌಂಟಿಯಲ್ಲಿ ಸುಮಾರು 500 ಭಾರತೀಯ ಕುಟುಂಬಗಳು ನೆಲೆಸಿವೆ. ಕಳೆದ ಎಪ್ರಿಲ್‌ನಲ್ಲಿ ನಾರ್ತ್ ಟೆಕ್ಸಾಸ್‌ನ ಡಲ್ಲಾಸ್‌ನ ಹಿಂದೂ ಮಂದಿರ ಹಾನಿ ಹಾಗೂ ಫೆಬ್ರವರಿಯಲ್ಲಿ ವಾಷಿಂಗ್ಟನ್‌ನ ಸಿಯಾಟಲ್ ಪ್ರಾಂತದಲ್ಲಿನ ಎರಡು ಹಿಂದೂ ದೇವಾಲಯಗಳ ಮೇಲಿನ ದಾಳಿಯ ಬೆನ್ನಲ್ಲೇ ಈ ಘಟನೆ ವರದಿಯಾಗಿದೆ.

ಘಟನೆಗೆ ಸಂಬಂಧಿಸಿ ತಪ್ಪಿತಸ್ಥರನ್ನು ಶೀಘ್ರದಲ್ಲೇ ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳುವಂತೆ ‘ಯೂನಿವರ್ಸಲ್ ಸೊಸೈಟಿ ಆಫ್ ಹಿಂದೂಯಿಸಂ’ನ ಅಧ್ಯಕ್ಷ ರಾಜನ್ ಝೆದ್ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Write A Comment