ಅಂತರಾಷ್ಟ್ರೀಯ

ರಂಜಾನ್‌ ಸಂಭ್ರಮಕ್ಕೆ ಸೂತಕ ತಂದ ಉಗ್ರರು: 80 ಬಲಿ

Pinterest LinkedIn Tumblr

car-bombಬಾಗ್ದಾದ್‌: ರಂಜಾನ್‌ ಮಾಸಾಂತ್ಯದ ಸಂಭ್ರಮಾಚರಣೆಯಲ್ಲಿದ್ದವರ ಮೇಲೆ ಐಸಿಸ್‌ ಉಗ್ರರು ನಡೆಸಿದ ಕಾರ್‌ ಬಾಂಬ್‌ ದಾಳಿಗೆ ಮಕ್ಕಳು ಸೇರಿದಂತೆ ಕನಿಷ್ಠ 80 ಮಂದಿ ಬಲಿಯಾಗಿದ್ದಾರೆ.

ತಮ್ಮ ಪೈಶಾಚಿಕ ಕೃತ್ಯಕ್ಕೆ ರಂಜಾನ್‌ ಮಾಸವನ್ನೂ ಬಿಡದ ಇಸ್ಲಾಮಿಕ್ ಸ್ಟೇಟ್ ಉಗ್ರರು ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ಬಾಂಬ್‌ ಸಿಡಿಸಿ ಭಯೋತ್ಪಾದನೆ ನಡೆಸಿದ್ದಾರೆ.

ಬಾಗ್ದಾದ್‌ನಿಂದ ಈಶಾನ್ಯದಲ್ಲಿ 20 ಮೈಲು ದೂರದ ಖಾನ್ ಬನಿ ಸಾದ್‌ ಎಂಬಲ್ಲಿ ಶಕ್ತಿಶಾಲಿ ಬಾಂಬ್‌ ಸ್ಫೋಟಿಸಲಾಗಿದ್ದು, ಮುಸ್ಲಿಮರ ಪವಿತ್ರ ತಿಂಗಳಾದ ರಂಜಾನ್‌ ಉಪವಾಸದ ಕೊನೆಯ ದಿನವನ್ನು ಆಚರಿಸುತ್ತಿದ್ದವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಪೊಲೀಸರು ಮತ್ತು ವೈದ್ಯರು ಹೇಳಿದ್ದಾರೆ.

ಈವರೆಗೆ ಯಾವುದೇ ಉಗ್ರ ಸಂಘಟನೆ ಈ ಘಟನೆಯ ಹೊಣೆ ಹೊತ್ತಿಲ್ಲ. ಆದರೆ ಉತ್ತರ ಮತ್ತು ಪಶ್ಚಿಮ ಇರಾಕ್ ದೊಡ್ಡ ಭಾಗಗಳಲ್ಲಿ ನಿಯಂತ್ರಣ ಸಾಧಿಸಿರುವ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿಗಳು ದಿಯಾಲಾ ಪ್ರಾಂತ್ಯದ ಖಾನ್ ಬನಿ ಸಾದ್ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಈ ಭಯಾನಕ ದುರ್ಘಟನೆಯಿಂದ ಆಕ್ರೋಶಗೊಂಡ ಸಾರ್ವಜನಿಕರು ಬೀದಿಯಲ್ಲಿ ನಿಲ್ಲಿಸಲಾಗಿದ್ದ ಕಾರುಗಳ ಗಾಜುಗಳನ್ನು ಒಡೆದು ತಮ್ಮ ದುಃಖ ಮತ್ತು ಸಿಟ್ಟನ್ನು ಹೊರಹಾಕಿದರು.

ಸ್ಘೋಟದ ಭೀಕರತೆ ಹೇಗಿತ್ತೆಂದರೆ, ಕೆಲವರು ತಮ್ಮ ಮಕ್ಕಳ ಶವದ ಭಾಗಗಳನ್ನು ಸಂಗ್ರಹಿಸಲು ತರಕಾರಿ ಬಾಕ್ಸ್‌ಗಳನ್ನು ಬಳಸುತ್ತಿದ್ದರು ಎಂದು ಪೊಲೀಸ್‌ ಮೇಜರ್‌ ಅಹಮದ್‌ ಅಲ್-ತಮಿಮಿ ಹೇಳಿದ್ದಾರೆ. ಅದೊಂದಿ ವಿನಾಶಕಾರಿ ಕೃತ್ಯವಾಗಿದ್ದು ಭಾರಿ ಹಾನಿ ಮಾಡಿದೆ ಎಂದು ತಿಳಿಸಿದ್ಧಾರೆ.

ಘಟನೆಯಲ್ಲಿ ಸಿಡಿದಿರುವ ದೇಹದ ಭಾಗಗಳನ್ನು ಪತ್ತೆ ಹಚ್ಚಿ ಹೊಂದಿಸುವ ಕೆಲಸವನ್ನು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಮಾಡುತ್ತಿದ್ದು, ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ.

Write A Comment