ಅಂತರಾಷ್ಟ್ರೀಯ

ಮಿಲ್ಕ್ ಬಟ್ಟೆ ಸಂಶೋಧಿಸಿ ವಿಜ್ಞಾನ ಕ್ಷೇತ್ರವನ್ನು ಚಕಿತಗೊಳಿಸಿದ ಜರ್ಮನ್ ಫ್ಯಾಷನ್ ಡಿಸೈನರ್: ಟೆಕ್ಸ್ ಟೈಲ್ ಇಂಡಸ್ಟ್ರಿಯಲ್ಲಿ ಹೊಸ ಕ್ರಾಂತಿಗೆ ನಾಂದಿಯಾದ ಹಾಲಿನ ಬಟ್ಟೆ

Pinterest LinkedIn Tumblr

Ankeimageಜರ್ಮನ್ ಮೂಲದ ಫ್ಯಾಷನ್ ಡಿಸೈನರ್ ಒಬ್ಬರು ಹಾಲಿನಿಂದ ಬಟ್ಟೆ ತಯಾರಿಸಿ ಇದೀಗ ವಿಶ್ವ ಟೆಕ್ಸ್ ಟೈಲ್ ಕ್ಷೇತ್ರದ ಕೇಂದ್ರ ಬಿಂದುವಾಗಿದ್ದಾರೆ.

ಹಾಲಿನಿಂದಲೇ ದಾರದ ಎಳೆಗಳನ್ನು ತಯಾರು ಮಾಡಿ ಅದರಿಂದ ವಿಶಿಷ್ಟವಾದ ಬಟ್ಟೆ ತಯಾರಿ ಮಾಡುವ ಮೂಲಕ ಬಟ್ಟೆ ತಯಾರಿಕಾ ಕ್ಷೇತ್ರವನ್ನು ಚಕಿತಗೊಳಿಸಿದ್ದಾರೆ. ಹಾಲಿನಿಂದ ಬೇಕಾದಷ್ಟು ಖಾದ್ಯಗಳನ್ನು ತಯಾರಿಸಬಹುದು. ಆದರೆ ಹಾಲಿನಿಂದ ಬಟ್ಟೆ ಕೂಡ ತಯಾರಿಸಬಹುದು ಎಂದು ತೋರಿಸಿಕೊಟ್ಟಿದ್ದಾಳೆ ಜರ್ಮನ್ ಮೂಲದ ಓರ್ವ ಫ್ಯಾಷನ್ ಡಿಸೈನರ್. ಕೆಮಿಕಲ್ ರಹಿತ ಪ್ಯೂರ್ ಮಿಲ್ಕ್ ಬಟ್ಟೆಯನ್ನು ಸಂಶೋಧಿಸುವ ಮೂಲಕ ಆಕೆ ವಿಶ್ವವನ್ನೇ ಚಕಿತ ಗೊಳಿಸಿದ್ದಾರೆ.

ಜರ್ಮನ್ ನ ಹಾನೋವರ್ ಜಿಲ್ಲೆಯ ಮೂಲದವರಾದ ಆಂಕೆ ಡೊಮಾಸ್ಕಿಯೇ ಮಿಲ್ಕ್ ಬಟ್ಟೆಯ ಸಂಶೋಧಕಿಯಾಗಿದ್ದು, ಈಕೆಗಿನ್ನೂ 28 ವರ್ಷ. ಅದಾಗಲೇ ಇಡೀ ಜಗತ್ತನ್ನೇ ಚಕಿತಗೊಳಿಸುವ ಸಂಶೋಧನೆ ಕೈಗೊಂಡು ಅದರಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಕ್ಯೂ ಮಿಲ್ಕ್ (QMilch) ಎಂಬ ತಮ್ಮಗೇ ಹಾಲಿನ ಬಟ್ಟೆ ತಯಾರಿಕಾ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇವರ ಕ್ಯೂ ಮಿಲ್ಕ್ ಕಾರ್ಖಾನೆಯಿಂದ ತಯಾರಾದ ಬಟ್ಟೆಗಳಿಗೆ ವಿಶ್ವ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದ್ದು, ಖ್ಯಾತ ಬಾಲಿವುಡ್ ನಟರು ಸೇರಿದಂತೆ ರೂಪದರ್ಶಿಯರು ಇವರ ಹಾಲಿನ ಬಟ್ಟೆಗೆ ಮಾರುಹೋಗಿದ್ದಾರೆ.

ಹಾಲಿನ ಬಟ್ಟೆ ವಿಶೇಷತೆ ಏನು..?

ಆಂಕೆ ಡೊಮಾಸ್ಕಿ ಅವರ ಕಾರ್ಖಾನೆಯಲ್ಲಿ ತಯಾರಾದ ಬಟ್ಟೆಗಳಲ್ಲಿ ಹಲವು ವಿಶೇಷತೆಗಳಿದ್ದು, ಪ್ರಮುಖವಾಗಿ ಇದು ಸಂಪೂರ್ಣ ರಾಸಾಯನಿಕ ಮುಕ್ತ. ಹೀಗಾಗಿ ಈ ಬಟ್ಟೆಗಳನ್ನು ತೊಡುವುದರಿಂದ ಯಾವುದೇ ರೀತಿಯ ಚರ್ಮದ ಅಲರ್ಜಿಗಳಾಗುವುದಿಲ್ಲ. ಅಲ್ಲದೆ ಈ ಬಟ್ಟೆಗಳು ತುಂಬಾ ಹಗುರವಾಗಿದ್ದು, ಬೇಸಿಗೆ ಕಾಲಕ್ಕೆ ಹೇಳಿ ಮಾಡಿಸಿದ ಬಟ್ಟೆಗಳಾಗಿವೆ. ಇನ್ನು ಪ್ರಮುಖವಾಗಿ ಈ ಬಟ್ಟೆಗಳು ತುಂಬಾ ಮೃದುವಾಗಿದ್ದು, ತೋಡುವ ವ್ಯಕ್ತಿಗಳು ಖಂಡಿತಾ ಇದನ್ನು ಇಷ್ಟಪಡುತ್ತಾರೆ ಎನ್ನುವುದು ಆಂಕೆ ಡೊಮಾಸ್ಕಿ ಮಾತು.

ಹಾಲಿನ ಬಟ್ಟೆ ಅನ್ವೇಷಣೆಯ ಹಿಂದೆ ರೋಚಕ ಕಥೆ

ಮೂಲತಃ ರೂಪದರ್ಶಿಯಾಗಿರುವ ಆಂಕೆ ಡೊಮಾಸ್ಕಿ ಬಯಾಲಜಿಸ್ಟ್ ಕಮ್ ಫ್ಯಾಷನ್ ಡಿಸೈನರ್. ಈಕೆ ಮಾತ್ರವಲ್ಲದೆ ಈಕೆಯ ಕುಟುಂಬದವರೂ ಕೂಡ ಫ್ಯಾಷನ್ ಡಿಸೈನರ್ ಗಳಾಗಿದ್ದು, ಇವರ ಮನೆತನದಲ್ಲಿರುವವರೆಲ್ಲರೂ ಫ್ಯಾಷನ್ ಡಿಸೈನರ್ ಗಳೇ. ಹೀಗಾಗಿ ಆಂಕೆಗೆ ಬಾಲ್ಯದಿಂದಲೇ ಫ್ಯಾಷನ್ ಮೇಲೆ ಮೋಹ ಬೆಳೆಯಿತು. ಆಂಕೆ ಡೊಮಾಸ್ಕಿ19 ವರ್ಷದವಳಿದ್ದಾಗ ಆಕೆ ವಿನ್ಯಾಸಗೊಳಿಸಿದ್ದ ವಸ್ತ್ರಗಳನ್ನು ಖ್ಯಾತ ಹಾಲಿವುಡ್ ನಟರು ಧರಿಸಿದ್ದರು. ಸತತ ಫ್ಯಾಷನ್ ಡಿಸೈನ್ ನಿಂದ ವಿಮುಖರಾಗ ಬಯಸಿದ ಆಂಕೆ ಇದೇ ಸಮಯದಲ್ಲಿ ತನ್ನ ವಿದ್ಯಾಭ್ಯಾಸದ ಕಡೆ ಗಮನ ಹರಿದು ಬಯಾಲಜಿ ವಿಷಯದ ಬಗ್ಗೆ ಆಸಕ್ತಿ ಬೆಳೆಯಿತು. ಫ್ಯಾಷನ್ ಗಿಂತ ಏನಾದರೂ ಪ್ಕಾಕ್ಟಿಕಲ್ ಇರುವಂತಹ ಸಬ್ಜೆಕ್ಟ್ ಮೇಲೆ ಆಂಕೆಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಆಂಕೆ ಜೀವಶಾಸ್ತ್ರದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಹೀಗಾಗಿ ಕಾಲೇಜಿಗೆ ಸೇರಲು ನಿರ್ಧರಿಸಿದರು. ಮತ್ತೆ ಕೆಲವು ತಿಂಗಳುಗಳ ಬಳಿಕ ಮತ್ತೆ ಫ್ಯಾಷನ್ ನತ್ತ ತಿರುಗಿದರು ಆಂಕೆ. ಅಲ್ಲದೆ ಫ್ಯಾಷನ್ ನಲ್ಲಿ ಏನಾದರೂ ಸಾಧಿಸಬೇಕೆಂದು ಆಕೆ ಯೋಚಿಸಿದರು.

ಕ್ಯಾನ್ಸರ್ ಪೀಡಿತ ತಂದೆಗಾಗಿ ನಡೆಯಿತು ಹಾಲಿನ ಬಟ್ಟೆ ಸಂಶೋಧನೆ

ಅತ್ತ ವಿದ್ಯಾಭ್ಯಾಸದಿಂದ ಫ್ಯಾಷನ್ ನತ್ತ ಆಂಕೆ ಹೊರಳುತ್ತಿದ್ದಂತೆಯೇ ಇತ್ತ ಅವರ ತಂದೆ ಕ್ಯಾನ್ಸರ್ ಖಾಯಿಲೆಗೆ ತುತ್ತಾದರು. ಕ್ಯಾನ್ಸರ್ ನಿಂದ ಬಳಲುತ್ತಿದ್ದ ತಂದೆಗೆ ಬಟ್ಟೆಗಳನ್ನು ಆರಿಸುವುದೇ ಆಂಕೆಗೆ ದೊಡ್ಡ ತಲೆನೋವಿನ ಕೆಲಸವಾಗಿತ್ತು. ತಂದೆಯ ಚರ್ಮಕ್ಕೆ ಕಿರಿ ಉಂಟುಮಾಡದ ಮತ್ತು ಯಾವುದೇ ರೀತಿಯಲ್ಲಿಯೂ ರಾಸಾಯನಿಕ ವಲ್ಲದ ಬಟ್ಟೆಗಳನ್ನು ಹುಡುಕಿ ತರುವುದು ಆಂಕೆಗೆ ಸವಾಲಿನ ಕೆಲಸವೇ ಆಗಿತ್ತು. ಹಾನೋವರ್ ನಲ್ಲಿರುವ ಪ್ರತಿಷ್ಠಿತ ಬಟ್ಟೆ ಅಂಗಡಿಗಳನ್ನು ಸುತ್ತಿದರೂ ಆಂಕೆಗೆ ಇಂತಹ ಬಟ್ಟೆಗಳು ಸಿಗದೇ ಸಾಕಷ್ಟು ಬಾರಿ ಮಾಲ್ ಗಳಲ್ಲಿಯೇ ಆಂಕೆ ಕಣ್ಣೀರು ಹಾಕಿದ್ದುಂಟಂತೆ.

ಹೀಗಾಗಿ ತಮ್ಮ ತಂದೆಗೆ ಕಿರಿಕಿರಿ ಉಂಟು ಮಾಡದ ಬಟ್ಟೆಗಾಗಿ ಶೋಧ ನಡೆಸುತ್ತಿದ್ದಾಗ ಆಂಕೆ ಗಮನಕ್ಕೆ ಬಂದದ್ದು, ಹಾಲಿನ ಬಟ್ಟೆ. 1ನೇ ಮಹಾಯುದ್ದದ ಸಮಯದಲ್ಲಿ ಹಾಲಿನಿಂದ ಬಟ್ಟೆ ತಯಾರಿಸುವ ರಹಸ್ಯ ಕಂಡುಕೊಳ್ಳಲಾಗಿತ್ತು. ಈ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದ ಆಂಕೆ, ಇದೇ ವಿಷಯದ ಬಗ್ಗೆ ಸಂಶೋಧನೆ ನಡೆಸಲು ಮುಂದಾದರು. ಆದರೆ ಈ ಪ್ರಕ್ರಿಯೆಯಲ್ಲಿ ಕೆಮಿಕಲ್ ಬಳಸಲಾಗುತ್ತಿತ್ತು. ಈ ಪ್ರಕ್ರಿಯೆ ನೈಸರ್ಗಿಕವಾಗಿರಲಿಲ್ಲ. ಈ ಅಂಶ ಅರಿತಿದ್ದ ಆಂಕೆ ಯಾವುದೇ ರೀತಿಯ ಕೆಮಿಕಲ್ಸ್ ಮಿಕ್ಸ್ ಮಾಡದೇ ಹಾಲಿನಿಂದ ನೂಲು ತಯಾರಿಸುವ ಸಂಶೋಧನೆಗೆ ಮುಂದಾದರು.

ಬಳಿಕ ಆರು ಜನರ ಸ್ನೇಹಿತರ ತಂಡದೊಂದಿಗೆ ಕೆಮಿಕಲ್ ರಹಿತ ಹಾಲಿನಿಂದ ನೂಲು ತಯಾರಿಸುವ ಬಗ್ಗೆ ಸಂಶೋಧನೆ ಕೈಗೊಂಡರು. ಆದರೆ ಈ ತಂಡದಲ್ಲಿ ಬಯಾಲಜಿ ವಿಜ್ಞಾನಿ ಅಂತ ಇದ್ದಿದ್ದು ಆಂಕೆ ಒಬ್ಬರೇ. ಆದರೆ ಈಕೆಗೆ ಟೆಕ್ಸ್ ಟೈಲ್ ಪ್ರೊಡಕ್ಷನ್ ಬಗ್ಗೆ ಯಾವುದೇ ವಿಚಾರ ತಿಳಿದಿರಲಿಲ್ಲ. ಹೀಗಾಗಿ ಎಲ್ಲ ಸಾಧ್ಯ, ಅಸಾಧ್ಯಗಳ ಮಾಹಿತಿ ಪಡೆದ ಆಂಕೆ ಸಂಶೋಧನೆಗೆ ಮುಂದಾದರು. ಕೆಲವೊಂದು ಫಾರ್ಮುಲಾಗಳು ವಿಫಲವಾದವು. ಆದರೂ ಛಲ ಬಿಡದ ಆಂಕೆ ಮತ್ತು ತಂಡ ಸತತವಾಗಿ ಪ್ರಯತ್ನ ಪಟ್ಟಿತು. ಹಾಲಿನಲ್ಲಿರುವ ನೀರಿನ ಅಂಶವನ್ನು ಇಂಗಿಸಿ ಉಳಿದ ಕೆನೆಯಿಂದ ನೂಲು ತೆಗೆದು ಅದರಿಂದ ಬಟ್ಟೆತಯಾರಿಸಬಹುದು ಎಂದು ಆಂಕೆ ತಿಳಿದುಕೊಂಡರು.

ಹೇಗೆ ತಯಾರಾಯಿತು ಹಾಲಿನ ಬಟ್ಟೆ

ಹಾಲಿನಿಂದ ಬಟ್ಟೆ ತಯಾರಿಸುವ ಆಂಕೆ ಸಂಶೋಧನೆ ಅಷ್ಟೇನೂ ಸುಲಭವಾಗಿರಲಿಲ್ಲ. ಸಾಕಷ್ಟು ಬಾರಿ ಪ್ರಯತ್ನಿಸಿ ಇದರಲ್ಲಿ ಆಂಕೆ ಮತ್ತು ಅವರ ತಂಡ ವಿಫಲವಾಗಿತ್ತು. ಆದರೂ ಛಲ ಬಿಡದ ಅವರು, ಸಂಶೋಧನೆ ಮುಂದುವರೆಸಿದರು. ಅಂತಿಮವಾಗಿ ಹಾಲಿನಲ್ಲಿರುವ ನೀರಿನ ಪ್ರಮಾಣವನ್ನು ಇಂಗಿಸಿ ಅದರ ಮೂಲಕ ನೂಲಿನ ಎಳೆಗಳನ್ನು ತಯಾರಿಸುವ ಮಾರ್ಗ ಕಂಡುಕೊಂಡರು. ಈ ಪ್ರಕ್ರಿಯೆ ಶಾವಿಗೆ ತಯಾರು ಮಾಡುವ ರೀತಿಯಲ್ಲಿಯೇ ಹಾಲಿನಿಂದ ನೀರಿನ ಆಂಶವನ್ನು ಬೇರ್ಪಡಿಸಲಾಗುತ್ತದೆ.

ನೀರಿಗೆ ಮೈದಾದಂತಿರುವ ಪ್ರೊಯಿಸ್ ಮಿಕ್ಸ್ ಮಾಡಲಾಗುತ್ತದೆ. ನಂತರ ಅದನ್ನು ಹದ ಮಾಡಿ ಹಿಟ್ಟಿನ ರೂಪ ಕೊಡಲಾಗುತ್ತದೆ. ದೊಡ್ಡ ಮೆಷಿನಲ್ಲಿ ಹಾಲಿನ ಜೊತೆ ಎಲ್ಲವನ್ನು ಮಿಶ್ರಣ ಮಾಡಿ, ಯಂತ್ರಕ್ಕೆ ಚಾಲನೆ ನೀಡುತ್ತಾರೆ ಬಳಿಕ ಯಂತ್ರದಿಂದ ಹಾಲಿನ ದಾರ ಬರುತ್ತದೆ. ಈದಾರದ ಮುಖಾಂತರ ಬಟ್ಟೆಗಳನ್ನು ತಯಾರಿಸಲಾಗುತ್ತದೆ. ಈ ರೀತಿ ತಯಾರಾದ ಬಟ್ಟೆಗಳೇ ಹಾಲಿನ ಬಟ್ಟೆಗಳಾಗಿದ್ದು, ಇಂದು ವಿಶ್ವಾದ್ಯಂತ ಭಾರಿ ಬೇಡಿಕೆ ಸೃಷ್ಟಿ ಮಾಡಿದೆ. ಇದಕ್ಕೂ ಮೊದಲು ಅದೆಷ್ಟೋ ಟೆಕ್ಸಟೈಲ್ ದೈತ್ಯರು ಕೆಮಿಕಲ್ ರಹಿತ ಇಕೋಫ್ರೇಂಡ್ಲಿ ಬಟ್ಟೆಗಳ ತಯಾರಿಕೆಗೆ ಮುಂದಾಗಿ ಕೈ ಸುಟ್ಟುಕೊಂಡಿದ್ದರು. ಆರ್ಗಾನಿಕ್ ಕಾಟನ್ ತಯಾರಿಗೆ ತುಂಬಾ ನೀರಿನ ಅವಶ್ಯಕತೆ ಇತ್ತು. ಕಾಟನ್ ತಯಾರಿಸುವ ಇಡೀ ಪ್ರಕ್ರಿಯೆಗೆ ನೀರಿನ ಬಳಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಬೇಕಾಗಿತ್ತು. ಆದರೆ ಆಂಕೆ ಕೇವಲ 2 ಲೀಟರ್ ಹಾಲಿನಲ್ಲಿ ಒಬ್ಬರು ತಯಾರಿಸಲು ಬೇಕಾದ ಕ್ಯೂಮಿಲ್ಕ್ ತಯಾರಿಸಿ ಅಚ್ಚರಿ ಮೂಡಿಸಿದ್ದರು.

ತಲೆ ಎತ್ತಿತು ಫೈಬರ್ ಕ್ಯೂಮಿಲ್ಕ್

ಆಂಕೆ ಡೊಮಾಸ್ಕಿ ಮತ್ತು ಅವರ ತಂಡದ ಈ ಸಂಶೋಧನೆಯ ಯಶಸ್ಸಿನ ಫಲದಿಂದಾಗಿಯೇ ಇಂದು ಫೈಬರ್ ಕ್ಯೂಮಿಲ್ಕ್ ಎಂಬ ಸಂಸ್ಥೆ ಜನ್ಮ ತಳೆದಿದೆ. 2011ರಲ್ಲಿ ಆಂಕೆ ಡೊಮಾಸ್ಕಿ ಅವರ ಈ ಸಂಶೋಧನೆ ಟೆಕ್ಸ್ ಟೈಲ್ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯಾಗಿತ್ತು. ಇಂದು ಇದೇ ಸಂಸ್ಥೆ ವಿಶ್ವ ಟೆಕ್ಸ್ ಟೈಲ್ ಕ್ಷೇತ್ರದಲ್ಲಿ ದೈತ್ಯ ಸಂಸ್ಥೆಯಾಗಿ ಬೆಳೆದು ನಿಂತಿದೆ. ಕೇವಲ ಆರು ವರ್ಷಗಳಲ್ಲಿ ಆಂಕೆ ಡೊಮಾಸ್ಕಿ ವಿಶ್ವ ಸಮುದಾಯ ಹೆಮ್ಮೆಯಿಂದ ಗುರುತಿಸಿಕೊಳ್ಳುವ ಉದ್ಯಮಿಯಾಗಿ ಬೆಳೆದಿದ್ದಾರೆ.

-kannadaprabha

Write A Comment