ಅಂತರಾಷ್ಟ್ರೀಯ

ಮುಂಬೈ ದಾಳಿ ಸಂಚುಕೋರ ಲಖ್ವಿ ವಿಚಾರದಲ್ಲಿ ಭಾರತಕ್ಕೆ ಅಡ್ಡಗಾಲು ಹಾಕಿದ ಚೀನಾ

Pinterest LinkedIn Tumblr

nakvi

ವಿಶ್ವಸಂಸ್ಥೆ(ಪಿಟಿಐ): ಮುಂಬೈ ದಾಳಿ ಸಂಚುಕೋರ ಝಕಿ ಉರ್ ರೆಹಮಾನ್ ಲಖ್ವಿಯನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಭಾರತವು ವಿಶ್ವಸಂಸ್ಥೆಗೆ ಸಲ್ಲಿಸಿದ್ದ ಮನವಿಗೆ ಚೀನಾ ಅಡ್ಡಗಾಲು ಹಾಕಿದೆ.

ಲಖ್ವಿ ಹಸ್ತಾಂತರಕ್ಕೆ ಪೂರಕವಾಗಿ ಭಾರತ ಅಗತ್ಯ ದಾಖಲೆಗಳನ್ನು ಒದಗಿಸಿಲ್ಲ ಎಂದು ಚೀನಾ ಆಪಾದಿಸಿದೆ. ಪಾಕಿಸ್ತಾನ ಕೋರ್ಟ್ ಲಖ್ವಿಯನ್ನು ಬಿಡುಗಡೆ ಮಾಡುವ ಮೂಲಕ ವಿಶ್ವಸಂಸ್ಥೆಯ ನಿಯಮಾವಳಿ ಉಲ್ಲಂಘಿಸಿದೆ ಎಂದು ಭಾರತದ ಪ್ರತಿನಿಧಿ ಅಶೋಕ್ ಮುಖರ್ಜಿ ಅವರು ಕಳೆದ ತಿಂಗಳು ವಿಶ್ವಸಂಸ್ಥೆಯ ಅನುಮೋದನೆ ಸಮಿತಿಗೆ ಸಲ್ಲಿಸಿದ್ದ ಮನವಿಯಲ್ಲಿ ತಿಳಿಸಿದ್ದರು ಎಂದು ಅಧಿಕೃತ ಮೂಲಗಳು ಹೇಳಿವೆ.

ವಿವರ: ಲಖ್ವಿಯನ್ನು ಬಿಡುಗಡೆ ಮಾಡುವಂತೆ ಪಾಕಿಸ್ತಾನದ ನ್ಯಾಯಾಲಯ ಏ. 9ರಂದು ಆದೇಶಿಸಿತ್ತು. ಇದೇ ವೇಳೆ ಈತನನ್ನು ಸಾರ್ವಜನಿಕ ಭದ್ರತಾ ಆದೇಶದಡಿ ಬಂಧನದಲ್ಲಿಟ್ಟಿದ್ದ ಪಂಜಾಬ್ ಸರ್ಕಾರದ ಆದೇಶವನ್ನು ನ್ಯಾಯಾಲಯ ವಜಾ ಮಾಡಿತ್ತು.

ಲಖ್ವಿಯನ್ನು ಬಂಧನದಲ್ಲಿಡಲು ಪೂರಕವಾದ ಸೂಕ್ತ ದಾಖಲೆಗಳನ್ನು ಹಾಜರು ಪಡಿಸಲು ವಿಫಲವಾದ ಸರ್ಕಾರದ ಕ್ರಮ ಪ್ರಶ್ನಿಸಿದ ಲಾಹೋರ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಮುಹಮ್ಮದ್‌ ಅನ್ವರುಲ್‌, ಬಿಡುಗಡೆ ಆದೇಶ ಹೊರಡಿಸಿದ್ದರು. ಇದಕ್ಕೆ ₹10 ಲಕ್ಷ ಮೊತ್ತದ ಎರಡು ಭದ್ರತಾ ಬಾಂಡ್‌ ಸಲ್ಲಿಸಬೇಕು ಎಂದು ಆದೇಶಿಸಿದ್ದರು.

2008ರ ನವೆಂಬರ್‌ 26ರಂದು ನಡೆದ ಮುಂಬೈ ದಾಳಿಯಲ್ಲಿ ವಿದೇಶೀಯರೂ ಸೇರಿದಂತೆ 166 ಮಂದಿ ಸಾವನ್ನಪ್ಪಿದ್ದರು. 2009ರ ನವೆಂಬರ್‌ 25ರಂದು ಲಖ್ವಿ ಸೇರಿದಂತೆ ಒಟ್ಟು ಏಳು ಮಂದಿಯ ಮೇಲೆ ಮುಂಬೈ ದಾಳಿಯ ಸಂಚು ರೂಪಿಸಿದ ದೋಷಾರೋಷ ಹೊರಿಸಲಾಗಿತ್ತು. 2009ರಿಂದ ಈ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದ್ದು, ಐದು ವರ್ಷದಿಂದ ಈತನನ್ನು ರಾವಲ್ಪಿಂಡಿಯ ಅಡಿಯಾಲಾ ಕಾರಾಗೃಹದಲ್ಲಿ ಇರಿಸಲಾಗಿದೆ.

Write A Comment